ADVERTISEMENT

ಗೆಲುವಿನ ಹಾದಿಯಲ್ಲಿ ಪಾಕ್‌

ಕ್ರಿಕೆಟ್‌: ಆಸೀಸ್‌ ಜಯಕ್ಕೆ 438 ರನ್‌ ಗುರಿ; ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ದುಬೈ (ಎಎಫ್‌ಪಿ): ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕ್‌ ತಂಡ ಆಸೀಸ್‌ ಗೆಲುವಿಗೆ 438 ರನ್‌ಗಳ ಗುರಿ ನೀಡಿದೆ. ಸವಾಲಿನ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದೆ.

ಮೈಕಲ್‌ ಕ್ಲಾರ್ಕ್‌ ಬಳಗ ನಾಲ್ಕನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 23 ಓವರ್‌ಗಳಲ್ಲಿ 4 ವಿಕೆಟ್‌ಗೆ 59 ರನ್‌ ಗಳಿಸಿತ್ತು. ಸ್ಪಿನ್ನರ್‌ಗಳಾದ ಜುಲ್ಫಿಕರ್‌ ಬಾಬರ್‌ (22ಕ್ಕೆ 2) ಮತ್ತು ಯಾಸಿರ್ ಶಾ (8ಕ್ಕೆ 2) ಎದುರಾಳಿ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು.

ಇದೀಗ ಅಂತಿಮ ದಿನವಾದ ಭಾನುವಾರ ಕಾಂಗರೂ ನಾಡಿನ ತಂಡ ಗೆಲುವಿಗೆ ಇನ್ನುಳಿದ ಆರು ವಿಕೆಟ್‌ಗಳಿಂದ 379 ರನ್‌ ಗಳಿಸಬೇಕಿದೆ. ಏನಾದರೂ ಪವಾಡ ನಡೆದರೆ ಮಾತ್ರ ಆಸೀಸ್‌ಗೆ ಸೋಲು ತಪ್ಪಿಸಲು ಸಾಧ್ಯ. ಯೂನಿಸ್‌ ಮತ್ತೊಂದು ಶತಕ: ಪಾಕ್‌ ತಂಡ ವಿಕೆಟ್‌ ನಷ್ಟವಿಲ್ಲದೆ 38 ರನ್‌ಗಳಿಂದ ಶುಕ್ರವಾರ ಆಟ ಮುಂದುವರಿಸಿತ್ತು. ಅಹ್ಮದ್‌ ಶೆಹಜಾದ್‌ (131) ಮತ್ತು ಯೂನಿಸ್‌ ಖಾನ್‌ (ಅಜೇಯ 103) ಅವರ ಶತಕದ ನೆರವಿನಿಂದ 78 ಓವರ್‌ಗಳಲ್ಲಿ 2 ವಿಕೆಟ್‌ಗೆ 286 ರನ್‌ ಗಳಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಮಿಸ್ಬಾ ಉಲ್‌ ಹಕ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 151 ರನ್‌ಗಳ ಮುನ್ನಡೆ ಪಡೆದಿತ್ತು.

ಶೆಹಜಾದ್‌ ಮತ್ತು ಅಜರ್‌ ಅಲಿ (30) ಮೊದಲ ವಿಕೆಟ್‌ಗೆ 71 ರನ್‌ ಸೇರಿಸಿದರು. ಶೆಹಜಾದ್‌ ಆ ಬಳಿಕ ಎರಡನೇ ವಿಕೆಟ್‌ಗೆ ಯೂನಿಸ್‌ ಜತೆ 168 ರನ್‌ಗಳ ಜೊತೆಯಾಟ ನೀಡಿದರು. 233 ಎಸೆತಗಳನ್ನು ಎದುರಿಸಿದ ಶೆಹಜಾದ್‌ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. 152 ಎಸೆತಗಳನ್ನು ಎದುರಿಸಿದ ಯೂನಿಸ್‌ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಗಳಿಸಿದರು.

ಯೂನಿಸ್ ಮೊದಲ 106 ರನ್‌ ಗಳಿಸಿದ್ದರು. ಈ ಅನುಭವಿ ಬ್ಯಾಟ್ಸ್‌ಮನ್‌ ಟೆಸ್ಟ್‌ನಲ್ಲಿ ಗಳಿಸಿದ 26ನೇ ಶತಕ ಇದಾಗಿದೆ. ಈ ಮೂಲಕ ಇಂಜಮಾಮ್‌ ಉಲ್‌ ಹಕ್‌ (25 ಶತಕ) ಅವರನ್ನು ಹಿಂದಿಕ್ಕಿ ಪಾಕ್‌ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎಂಬ ಗೌರವ ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ ಮೊದಲ ಇನಿಂಗ್ಸ್‌: 145 ಓವರ್‌ಗಳಲ್ಲಿ 454 ಮತ್ತು ಎರಡನೇ ಇನಿಂಗ್ಸ್‌ 78 ಓವರ್‌ಗಳಲ್ಲಿ 2 ವಿಕೆಟ್‌ಗೆ 286 (ಅಹ್ಮದ್‌ ಶೆಹಜಾದ್‌ 131, ಅಜರ್‌ ಅಲಿ 30, ಯೂನಿಸ್ ಖಾನ್‌ ಔಟಾಗದೆ 103, ಸರ್ಫ್‌ರಾಜ್‌ ಅಹ್ಮದ್‌ ಔಟಾಗದೆ 15, ಸ್ಟೀವ್‌ ಒಕೀಫ್‌ 112ಕ್ಕೆ 2)
ಆಸ್ಟ್ರೇಲಿಯ: ಮೊದಲ ಇನಿಂಗ್ಸ್‌: 103.1 ಓವರ್‌ಗಳಲ್ಲಿ 303 ಮತ್ತು ಎರಡನೇ ಇನಿಂಗ್ಸ್‌: 23 ಓವರ್‌ಗಳಲ್ಲಿ 4 ವಿಕೆಟ್‌ಗೆ 59 (ಕ್ರಿಸ್‌ ರೋಜರ್ಸ್‌ 23, ಡೇವಿಡ್‌ ವಾರ್ನರ್‌ 29, ಯಾಸಿರ್‌ ಶಾ 8ಕ್ಕೆ 2, ಜುಲ್ಫಿಕರ್‌ ಬಾಬರ್‌ 22ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.