ADVERTISEMENT

ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌: ಸ್ಕಾಚರ್ಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 20:23 IST
Last Updated 20 ಸೆಪ್ಟೆಂಬರ್ 2014, 20:23 IST

ಮೊಹಾಲಿ (ಪಿಟಿಐ):  ಮಿಷೆಲ್‌ ಮಾರ್ಷ್‌ ಅವರು ಕೊನೆಯ ಎರಡು ಎಸೆತಗಳಲ್ಲಿ ಸಿಡಿಸಿದ ಸಿಕ್ಸರ್‌ಗಳ ನೆರವಿನಿಂದ ಪರ್ತ್‌ ಸ್ಕಾಚರ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಡಾಲ್ಫಿನ್ಸ್‌ ವಿರುದ್ಧ ರೋಚಕ ಜಯ ಸಾಧಿಸಿತು.

ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡಾಲ್ಫಿನ್ಸ್‌ ತಂಡ ಖಾಯಾ ಜೊಂಡೊ (63) ಅವರ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 ರನ್‌ ಪೇರಿಸಿತು.

ಸ್ಕಾಚರ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 165 ರನ್‌ ಗಳಿಸಿ ಆರು ವಿಕೆಟ್‌ಗಳ ಜಯ ಸಾಧಿಸಿತು. ಮಿಷೆಲ್ ಮಾರ್ಷ್‌ (ಅಜೇಯ 40, 26 ಎಸೆತ, 3 ಬೌಂ, 2 ಸಿಕ್ಸರ್‌) ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ರಾಬಿ ಫ್ರೈಲಿಂಕ್‌ ಬೌಲ್‌ ಮಾಡಿದ ಆಂತಿಮ ಓವರ್‌ನಲ್ಲಿ ಸ್ಕಾಚರ್ಸ್‌ ಗೆಲುವಿಗೆ 16 ರನ್‌ಗಳು ಬೇಕಿದ್ದವು. ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ನಾಲ್ಕು ರನ್‌ಗಳು ಬಂದವು. ಆದರೆ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದ ಮಾರ್ಷ್‌ ರೋಚಕ ಜಯಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಡಾಲ್ಫಿನ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 (ಖಾಯಾ ಜೊಂಡೊ 63, ಕೇಶವ್‌ ಮಹಾರಾಜ್‌ 29, ಡೆರಿನ್‌ ಸ್ಮಿತ್‌ 21, ಜೇಸನ್‌ ಬೆಹರೆನ್‌ಡಾರ್ಫ್‌ 46ಕ್ಕೆ 3, ಜೊಯೆಲ್‌ ಪ್ಯಾರಿಸ್‌ 21ಕ್ಕೆ 2)
ಪರ್ತ್‌ ಸ್ಕಾಚರ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 165 (ಕ್ರೆಗ್‌ ಸಿಮನ್ಸ್‌ 48, ಸ್ಯಾಮ್‌ ವೈಟ್‌ ಮನ್‌ 45, ಮಿಷೆಲ್‌ ಮಾರ್ಷ್‌ ಔಟಾಗದೆ 40, ರಾಬಿ ಫ್ರೈಲಿಂಕ್‌ 32ಕ್ಕೆ 1) ಫಲಿತಾಂಶ: ಪರ್ತ್‌ ಸ್ಕಾಚರ್ಸ್‌ಗೆ 6 ವಿಕೆಟ್‌ ಜಯ

ಇಲೆವೆನ್‌ಗೆ ಗೆಲುವು
ಡೇವಿಡ್‌ ಮಿಲ್ಲರ್‌ (ಔಟಾಗದೆ 46) ಮತ್ತು ವೀರೇಂದ್ರ ಸೆಹ್ವಾಗ್‌ (31) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಇನ್ನೊಂದು ಪಂದ್ಯದಲ್ಲಿ ಬಾರ್ಬಡೀಸ್‌ ಟ್ರೈಡೆಂಟ್ಸ್‌  ಎದುರು ನಾಲ್ಕು ವಿಕೆಟ್‌ಗಳ ಗೆಲುವು ಪಡೆಯಿತು.

ಮೊದಲು ಬ್ಯಾಟ್‌ ಮಾಡಿದ ಬಾರ್ಬಡೀಸ್‌ ತಂಡ 20 ಓವರ್‌ ಗಳಲ್ಲಿ 6 ವಿಕೆಟ್‌ಗೆ 174 ರನ್‌ ಪೇರಿಸಿತು. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 19.4 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಬಾರ್ಬಡೀಸ್‌ ತಂಡದ ಮುನವೀರ ಮತ್ತು ರೀಫರ್‌ ಅರ್ಧಶತಕ ಗಳಿಸಿ ಮಿಂಚಿದರು. 26 ಎಸೆತಗಳನ್ನು ಎದುರಿಸಿದ ಮುನವೀರ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ರೀಫರ್‌ 42 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಗಳಿಸಿದರು. ಸವಾಲಿನ ಗುರಿಯನ್ನು ಮುಟ್ಟಲು ಮಿಲ್ಲರ್ ಮತ್ತು ಸೆಹ್ವಾಗ್‌ ನೆರವಾದರು.

ಸಂಕ್ಷಿಪ್ತ ಸ್ಕೋರ್‌: ಬಾರ್ಬಡೀಸ್‌ ಟ್ರೈಡೆಂಟ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 174 (ದಿಲ್ಶಾನ್‌ ಮುನ ವೀರ 50, ರೇಮನ್‌ ರೀಫೆರ್‌ ಔಟಾಗದೆ 60, ಪರ್ವಿಂದರ್‌ ಅವಾನ 46ಕ್ಕೆ 3,  ತಿಸಾರ ಪೆರೇರಾ 15ಕ್ಕೆ 2). ಕಿಂಗ್ಸ್‌ ಇಲೆವೆನ್‌ ಪಂಜಾಬ್: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 178. (ವೀರೇಂದ್ರ ಸೆಹ್ವಾಗ್‌ 31, ಮನನ್‌ ವೋಹ್ರಾ 27, ಡೇವಿಡ್‌ ಮಿಲ್ಲರ್ ಔಟಾಗದೆ 46; ರವಿ ರಾಂಪಾಲ್ 50ಕ್ಕೆ2). ಫಲಿತಾಂಶ: ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡಕ್ಕೆ 4 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.