ADVERTISEMENT

ಚುರುಕುಗೊಂಡ ಪ್ರಕ್ರಿಯೆ

ಲೆಜೆಂಡ್ಸ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ; ರಿಚರ್ಡ್‌ಸನ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ದುಬೈ (ಪಿಟಿಐ): ಲೆಜೆಂಡ್ಸ್‌ ಟ್ವೆಂಟಿ–20 ಕ್ರಿಕೆಟ್‌ ಲೀಗ್‌ ಆರಂಭಿಸಲು ಮುಂದಾ ಗಿರುವ ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌ ಮತ್ತು ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬುಧವಾರ ಅಂತರ ರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಮುಖ್ಯ ಕಾರ್ಯನಿರ್ವಾಹ ಣಾಧಿಕಾರಿ ಡೇವ್‌  ರಿಚರ್ಡ್‌ಸನ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವಿಷಯವನ್ನು ಇಬ್ಬರೂ  ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಬಹುದೊಡ್ಡ ಸವಾಲಿಗೆ ಸಜ್ಜಾಗುತ್ತಿದ್ದೇವೆ’ ಎಂದು ಸಚಿನ್‌ ಹಾಗೂ  ‘ರಿಚರ್ಡ್‌ಸನ್‌ ಜತೆಗಿನ ಭೇಟಿ ಖುಷಿ ನೀಡಿದೆ’ ಎಂದು ವಾರ್ನ್‌ ಟ್ವೀಟ್‌ ಮಾಡಿದ್ದಾರೆ.

‘ಸಚಿನ್‌ ಮತ್ತು ವಾರ್ನ್‌ ಬುಧವಾರ ಬೆಳಿಗ್ಗೆ ರಿಚರ್ಡ್‌ಸನ್‌ ಅವರನ್ನು ಭೇಟಿ ಮಾಡಿದರು. ಈ ವೇಳೆ ತಾವು ಆರಂಭಿಸಲು ಉದ್ದೇಶಿಸಿರುವ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌ ಕುರಿತ ಯೋಜನೆ ಹಾಗೂ ಈ ಟೂರ್ನಿಯ ರೂಪುರೇಷೆಗಳ ಬಗ್ಗೆ ಚರ್ಚಿಸಿದ್ದಾರೆ’ ಎಂದು ಐಸಿಸಿಯ ವಕ್ತಾರ ರೊಬ್ಬರು ತಿಳಿಸಿದ್ದಾರೆ.

‘ಐಸಿಸಿ ಸಂವಿಧಾನದ ಪ್ರಕಾರ  ಖಾಸಗಿ ಲೀಗ್‌ಗಳನ್ನು ಆರಂಭಿಸಲು ಬಯಸುವವರು ಆಯಾ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳ ಅನುಮತಿ ಪಡೆಯ ಬೇಕು. ಈ ಸಂಬಂಧ ಆಯಾ ಮಂಡಳಿ ಗಳು ಐಸಿಸಿಗೆ ಮಾಹಿತಿ ನೀಡುತ್ತವೆ. ಆದರೆ ಐಸಿಸಿ ನೇರವಾಗಿ ಯಾರಿಗೂ ಅನುಮತಿ ನೀಡಲು ಬರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಟೂರ್ನಿಯ ಮೊದಲ ಹಂತದ ಪಂದ್ಯಗಳನ್ನು ಅಮೆರಿಕದ ಚಿಕಾಗೊ, ನ್ಯೂಯಾರ್ಕ್‌ ಮತ್ತು ಲಾಸ್‌ ಏಂಜಲಿಸ್‌ ನಲ್ಲಿ ನಡೆಸಲು ಉದ್ದೇಶಿಸಿದ್ದಾರೆ ಎಂಬ ಮಾಹಿತಿ ಇದೆ. ಹೀಗಿದ್ದಾಗ ಅವರು ಮೊದಲು ಅಮೆರಿಕ ಕ್ರಿಕೆಟ್‌ ಸಂಸ್ಥೆಯ (ಯುಎಸ್‌ಎಸಿಎ) ಮಾನ್ಯತೆ  ಪಡೆಯ ಬೇಕು’ ಎಂದು ಅವರು ನುಡಿದಿದ್ದಾರೆ.

ಸಚಿನ್‌ ಮತ್ತು ವಾರ್ನ್‌ ಈ ಸಂಬಂಧ ಈಗಾಗಲೇ ಆಸ್ಟ್ರೇಲಿಯಾದ ಬ್ರೆಟ್‌ ಲೀ, ಆ್ಯಡಮ್‌ ಗಿಲ್‌ಕ್ರಿಸ್ಟ್‌, ಗ್ಲೆನ್‌ ಮೆಕ್‌ಗ್ರಾತ್‌, ಇಂಗ್ಲೆಂಡ್‌ನ ಆ್ಯಂಡ್ರೂ ಫ್ಲಿಂಟಾಫ್‌ ಮತ್ತು ಮೈಕಲ್‌ ವಾನ್‌, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್‌, ಭಾರತದ ಸೌರವ್‌ ಗಂಗೂಲಿ ಹಾಗೂ ಶ್ರೀಲಂಕಾದ ಮಾಹೇಲ ಜಯವರ್ಧನೆ ಸೇರಿದಂತೆ 28 ಮಾಜಿ ಆಟಗಾರರ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.  ಈ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ₨ 15.97 ಲಕ್ಷ ಮೊತ್ತ ನೀಡುವ ಕುರಿತು ಚರ್ಚಿಸಿದ್ದಾರೆ ಎಂದೂ ಹೇಳ ಲಾಗಿದೆ. ಮೊದಲ ಹಂತದ ಟೂರ್ನಿಯು ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ಮುಂದಿನ ವರ್ಷ ಮಾಸ್ಟರ್ಸ್‌ ಲೀಗ್‌ ಟೂರ್ನಿ: ಸಚಿನ್‌ ತೆಂಡೂಲ್ಕರ್‌ ಮತ್ತು ಶೇನ್‌ ವಾರ್ನ್‌ ಅವರು ಲೆಜೆಂಡ್ಸ್‌ ಟ್ವೆಂಟಿ–20 ಕ್ರಿಕೆಟ್‌ ಲೀಗ್‌ ಆರಂಭಿಸಲು ಮುಂದಾಗಿರುವ ಬೆನ್ನಲ್ಲೆ ಮಾಜಿ ಆಟಗಾರರಾದ ವೆಸ್ಟ್‌ ಇಂಡೀಸ್‌ನ ಬ್ರಯಾನ್‌ ಲಾರ, ಪಾಕಿಸ್ತಾನದ ವಾಸೀಂ ಅಕ್ರಮ್‌ ಮತ್ತು ಆಸ್ಟ್ರೇಲಿಯಾದ ಆ್ಯಡಮ್‌ ಗಿಲ್‌ಕ್ರಿಸ್ಟ್‌ ಅವರು ಮಾಸ್ಟರ್ಸ್‌ ಚಾಂಪಿ ಯನ್ಸ್‌ ಲೀಗ್‌ (ಎಂಸಿಎಲ್‌) ಟೂರ್ನಿ  ಆರಂಭಿಸುವುದಾಗಿ ಘೋಷಿಸಿದ್ದಾರೆ.

ಫ್ರಾಂಚೈಸ್‌ಗಳನ್ನು ಒಳಗೊಂಡಿರುವ ಈ ಲೀಗ್‌ 2016ರಲ್ಲಿ ಯುನೈಟೆಡ್‌ ಅರಬ್‌ಎಮಿರೇಟ್ಸ್‌ನ (ಯುಎಇ) ಶಾರ್ಜಾ, ಶೇಖ್‌ ಜಾಯದ್‌ ಮತ್ತು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ಜರುಗಲಿದೆ. ಲೀಗ್‌ನಲ್ಲಿ ಒಟ್ಟು ಆರು ತಂಡಗಳಿರಲಿದ್ದು ಪ್ರತಿ ತಂಡದಲ್ಲೂ 15 ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿರುವ ಮಾಜಿ ಆಟಗಾರರು ಮಾತ್ರ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ.

ಈ ಟೂರ್ನಿ ಮುಂದಿನ 10 ವರ್ಷಗಳ ಕಾಲ ಯುಎಇನಲ್ಲಿ ನಡೆಯಲಿದೆ. ಇದಕ್ಕೆ ಯುಎಇ ಕ್ರಿಕೆಟ್‌ ಮಂಡಳಿಯೂ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.