ADVERTISEMENT

ಚೇತರಿಸಿಕೊಳ್ಳುತ್ತಿರುವ ಅಥ್ಲೀಟ್‌ ವಿಕಾಸ್‌ ಗೌಡ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 20:05 IST
Last Updated 27 ಜುಲೈ 2016, 20:05 IST
ವಿಕಾಸ್ ಗೌಡ
ವಿಕಾಸ್ ಗೌಡ   

ಬೆಂಗಳೂರು: ಗಾಯಗೊಂಡು ಹೋದ ತಿಂಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಡಿಸ್ಕಸ್ ಎಸೆತ ಸ್ಪರ್ಧಿ ಕರ್ನಾಟಕದ ವಿಕಾಸ್ ಗೌಡ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

‘ವಿಕಾಸ್‌ಗೆ ಪೂರ್ಣ ಗಮನ ಹರಿಸಿ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಇದೇ ನನ್ನ ಚಿಂತೆಗೆ ಕಾರಣವಾಗಿದೆ’ ಎಂದು ವಿಕಾಸ್ ತಂದೆ ಶಿವೇಗೌಡ ತಿಳಿಸಿದ್ದಾರೆ.

33 ವರ್ಷದ ವಿಕಾಸ್‌ ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು. ಹೋದ ವರ್ಷ ವುಹಾನ್‌ನಲ್ಲಿ ಜರುಗಿದ್ದ  ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌ನಲ್ಲಿ  ಚಿನ್ನದ ಸಾಧನೆ ಮಾಡಿದ್ದರು. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದರು.

‘ವಿಕಾಸ್‌ಗೆ ಹೋದ ತಿಂಗಳು ಮೊಣಕೈಗೆ ಶಸ್ತ್ರಚಿಕಿತ್ಸೆಯಾಗಿದೆ. ಪೂರ್ಣ ವಾಗಿ ಚೇತರಿಸಿಕೊಂಡಿಲ್ಲವಾದರೂ ರಿಯೊ ಒಲಿಂಪಿಕ್ಸ್‌ ವೇಳೆಗೆ ಅವರು ಗುಣಮುಖರಾಗುತ್ತಾರೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ’ ಎಂದು ಶಿವೇಗೌಡ ಭರವಸೆ ವ್ಯಕ್ತಪಡಿಸಿದ್ದಾರೆ.

ಹಲವು ದಿನಗಳಿಂದ ವಿಕಾಸ್‌ ಅವರು ಯಾವುದೇ ಅಥ್ಲೆಟಿಕ್‌  ಕ್ರೀಡಾ ಕೂಟಗಳಲ್ಲಿ ಪಾಲ್ಗೊಂಡಿಲ್ಲ. ಆದ್ದರಿಂದ ಅವರ ಫಿಟ್‌ನೆಸ್‌ ಬಗ್ಗೆ ಖಚಿತತೆ ನೀಡಬೇಕೆಂದು ಭಾರತ ಅಥ್ಲೆಟಿಕ್‌ ಫೆಡರೇಷನ್‌ ವಿಕಾಸ್‌ಗೆ ಸೂಚಿಸಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿದ ಶಿವೇಗೌಡ ಅವರು ‘ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ ಅಥ್ಲೆಟಿಕ್‌ ಕೂಟದಲ್ಲಿ ವಿಕಾಸ್ ಪಾಲ್ಗೊಳ್ಳಲಿದ್ದಾನೆ. ಅಲ್ಲಿ ಆತ ತೋರುವ ಸಾಮರ್ಥ್ಯ, ಪಡೆಯುವ ಫಲಿತಾಂಶ ಮತ್ತು ವಿಡಿಯೊವನ್ನು ಫೆಡರೇಷನ್‌ ಕಳುಹಿಸುತ್ತೇನೆ’ ಎಂದರು.

ಹೋದ ವರ್ಷದ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದಿದ್ದ ಅಥ್ಲೆಟಿಕ್‌ ಕೂಟದಲ್ಲಿ ವಿಕಾಸ್‌ 65.14 ಮೀಟರ್ಸ್‌ ಡಿಸ್ಕ್‌ ಎಸೆದು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT