ADVERTISEMENT

ಜೂನಿಯರ್, ಸೀನಿಯರ್‌ ಆಟಗಾರರ ಪೈಪೋಟಿ ಅಗತ್ಯ: ಶ್ರೀಜೇಶ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ಆರ್. ಶ್ರೀಜೇಶ್
ಆರ್. ಶ್ರೀಜೇಶ್   

ಬೆಂಗಳೂರು : ‘ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಜೂನಿಯರ್‌ ಹಾಗೂ ಸೀನಿಯರ್ ಆಟಗಾರರ ನಡುವೆ  ಆರೋಗ್ಯಕರ ಪೈಪೋಟಿ ಇರಬೇಕು’ ಎಂದು ಭಾರತ ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್ ಹೇಳಿದ್ದಾರೆ.

ಇಲ್ಲಿನ ಸಾಯ್ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರದ ವೇಳೆ ಅವರು ಮಾತನಾಡಿದರು. ‘ಮುಂದಿನ ಒಲಿಂಪಿಕ್ಸ್ ತಯಾರಿ
ಗಾಗಿ  ತಂಡದಲ್ಲಿ ಯುವ ಆಟಗಾರರಿಗೆ ಮನ್ನಣೆ ನೀಡಲಾಗುತ್ತಿದೆ. ಇದರಿಂದ ಸೀನಿಯರ್ ಆಟಗಾರರಲ್ಲಿ ಸ್ಥಾನ ಉಳಿಸಿ ಕೊಳ್ಳುವ ಸವಾಲು ಇದ್ದರೆ, ಜೂನಿಯರ್‌ಗಳಿಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಠಿಣ ಶ್ರಮ ಹಾಕುವ ಅಗತ್ಯ ಇದೆ’ ಎಂದು ಶ್ರೀಜೇಶ್ ಅಭಿಪ್ರಾಯಪಟ್ಟಿದ್ದಾರೆ.

‘ತರಬೇತಿ ಶಿಬಿರಗಳಿಂದ ಜೂನಿಯರ್ ಆಟಗಾರರಿಗೆ ಹೆಚ್ಚು ಕಲಿಯಲು ಸಿಗುತ್ತದೆ. ವಿನೂತನ ತಂತ್ರ ಹಾಗೂ ನೈಪುಣ್ಯಗಳನ್ನು ಅವರು ಕೋಚ್ ಹಾಗೂ ಸೀನಿಯರ್ ಆಟಗಾರರ ಮೂಲಕ ಕಲಿತುಕೊಳ್ಳಬಹುದು’ ಎಂದು ಗೋಲ್‌ಕೀಪರ್ ಹೇಳಿದ್ದಾರೆ.‘ಸರ್ದಾರ್ ಸಿಂಗ್ ಹಾಗೂ ಎಸ್‌.ವಿ ಸುನಿಲ್ ಅವರಿಂದ ಜೂನಿಯರ್ ತಂಡದ ಆಟಗಾರರು ಕಲಿಯುವುದು ಸಾಕಷ್ಟಿದೆ.  ಅವರು ತಂಡದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಏಪ್ರಿಲ್ 29ರಿಂದ ಮಲೇಷ್ಯಾದಲ್ಲಿ ನಡೆಯುವ ಸುಲ್ತಾನ್ ಅಜ್ಲಾನ್ ಷಾ ಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡದಲ್ಲಿ ಸ್ಥಾನ ಪಡೆಯುವುದಕ್ಕಾಗಿ ಇದೇ ವಾರ ನಡೆಯುವ ಆಯ್ಕೆ ಟ್ರಯಲ್ಸ್‌ನಲ್ಲಿ ತಂಡವನ್ನು ಅಂತಿಮಗೊಳಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.