ADVERTISEMENT

ಟೆಸ್ಟ್‌ ಕ್ರಿಕೆಟ್: ದಾಖಲೆ ಸರಿಗಟ್ಟಿದ ವಿಲಿಯಮ್ಸನ್‌ದಾಖಲೆ ಸರಿಗಟ್ಟಿದ ವಿಲಿಯಮ್ಸನ್‌

ಏಜೆನ್ಸೀಸ್
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಶತಕ ಬಾರಿಸಿ ದಾಖಲೆ ಮಾಡಿದ ಕೇನ್‌ ವಿಲಿಯಮ್ಸನ್ ಬ್ಯಾಟಿಂಗ್ ವೈಖರಿ
ಶತಕ ಬಾರಿಸಿ ದಾಖಲೆ ಮಾಡಿದ ಕೇನ್‌ ವಿಲಿಯಮ್ಸನ್ ಬ್ಯಾಟಿಂಗ್ ವೈಖರಿ   

ಹ್ಯಾಮಿಲ್ಟನ್‌: ನಾಯಕ ಕೇನ್‌ ವಿಲಿಯಮ್ಸನ್‌  (ಬ್ಯಾಟಿಂಗ್‌ 148; 216ಎ, 14ಬೌಂಡರಿ, 3ಸಿಕ್ಸರ್‌) ಅವರ ಅಜೇಯ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ 7ರನ್‌ ಮುನ್ನಡೆ ಪಡೆದಿದೆ.

ಸೆಡಾನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಮಂಗಳವಾರ ಕಿವೀಸ್‌ ನಾಡಿನ ತಂಡ ಮೊದಲ ಇನಿಂಗ್ಸ್‌ನಲ್ಲಿ 104 ಓವರ್‌ ಗಳಲ್ಲಿ 4 ವಿಕೆಟ್‌ಗೆ 321ರನ್‌ ಪೇರಿಸಿದೆ.

ಹರಿಣಗಳ ನಾಡಿನ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 314ರನ್‌ ಸಂಗ್ರಹಿಸಿತ್ತು.

ADVERTISEMENT

ವಿಕೆಟ್‌ ನಷ್ಟವಿಲ್ಲದೆ 67ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ನ್ಯೂಜಿಲೆಂಡ್‌ ತಂಡ ಟಾಮ್‌ ಲಾಥಮ್‌ ವಿಕೆಟ್‌ ಬೇಗನೆ ಕಳೆದುಕೊಂಡಿತು.

ಆರಂಭಿಕ ಆಟಗಾರ ಲಾಥಮ್‌ 103ಎಸೆತಗಳಲ್ಲಿ 10 ಬೌಂಡರಿ ಸಹಿತ 50ರನ್‌ ಗಳಿಸಿ ಮಾರ್ನೆ ಮಾರ್ಕೆಲ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಜೀತ್ ರಾವಲ್‌ (88; 254ಎ, 10ಬೌಂ) ಮತ್ತು ವಿಲಿಯಮ್ಸನ್‌ ಸುಂದರ ಇನಿಂಗ್ಸ್‌ ಕಟ್ಟಿದರು. ಇವರು ಎರಡನೇ ವಿಕೆಟ್‌ಗೆ 190ರನ್‌ ಗಳಿಸಿ ತಂಡದ ಮುನ್ನಡೆಯ ಹಾದಿ ಸುಗಮ ಮಾಡಿದರು.

ದಾಖಲೆ ಸರಿಗಟ್ಟಿದ ಕೇನ್‌: ಬಲಗೈ ಬ್ಯಾಟ್ಸ್‌ಮನ್‌ ವಿಲಿಯಮ್ಸನ್, ತಾಳ್ಮೆಯ ಆಟದ ಮೂಲಕ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಾಡಿದರು.

ಡೀನ್ ಎಲ್ಗರ್‌ ಬೌಲ್‌ ಮಾಡಿದ 79ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಗಳಿಸಿದ ಅವರು ವೃತ್ತಿ ಬದುಕಿನ 17ನೇ ಶತಕದ ಸಂಭ್ರಮ ಆಚರಿಸಿದರು.

ಇದರೊಂದಿಗೆ ನ್ಯೂಜಿಲೆಂಡ್‌ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ್ದ  ಮಾರ್ಟಿನ್‌ ಕ್ರೋವ್‌ ಅವರ ದಾಖಲೆ  ಸರಿಗಟ್ಟಿದರು.

ಸಂಕ್ಷಿಪ್ತ ಸ್ಕೋರ್‌:

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌: 89.2 ಓವರ್‌ಗಳಲ್ಲಿ 314.

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌: 104 ಓವರ್‌ಗಳಲ್ಲಿ 4 ವಿಕೆಟ್‌ಗೆ 321 (ಟಾಮ್‌ ಲಾಥಮ್‌ 50, ಜೀತ್‌ ರಾವಲ್‌ 88, ಕೇನ್‌ ವಿಲಿಯಮ್ಸನ್‌ ಬ್ಯಾಟಿಂಗ್‌ 148, ನಿಯೆಲ್‌ ಬ್ರೂಮ್‌ ಬ್ಯಾಟಿಂಗ್‌ 12; ಮಾರ್ನೆ ಮಾರ್ಕೆಲ್‌ 74ಕ್ಕೆ2, ಕಗಿಸೊ ರಬಾಡ 83ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.