ADVERTISEMENT

ತಟಸ್ಥ ಸ್ಥಳದಲ್ಲಿ ರಣಜಿ ಟೂರ್ನಿ ನಡೆಸಲು ಶಿಫಾರಸು

​ಪ್ರಜಾವಾಣಿ ವಾರ್ತೆ
Published 29 ಮೇ 2016, 20:05 IST
Last Updated 29 ಮೇ 2016, 20:05 IST

ಬೆಂಗಳೂರು: ತವರಿನ ತಂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಪಿಚ್‌ ನಿರ್ಮಿಸಿಕೊಳ್ಳುತ್ತದೆ ಎನ್ನುವ ಆರೋಪ ಪ್ರತಿ ರಣಜಿ ಟೂರ್ನಿಯ ವೇಳೆ ಕೇಳಿ ಬರುತ್ತದೆ. ಆದ್ದರಿಂದ ಈ ಬಾರಿಯ ರಣಜಿ ಪಂದ್ಯಗಳನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಟಸ್ಥ ಸ್ಥಳದಲ್ಲಿ ನಡೆಸುವ ಸಾಧ್ಯತೆಯಿದೆ.

ಭಾನುವಾರ  ನಡೆದ ಸಭೆಯಲ್ಲಿ   ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ಕಾರ್ಯದರ್ಶಿ ಅಜಯ್‌ ಶಿರ್ಕೆ ಮತ್ತು ತಾಂತ್ರಿಕ ಸಮಿತಿಯ ಮುಖ್ಯಸ್ಥ ಸೌರವ್‌ ಗಂಗೂಲಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ದೇಶಿ ಟೂರ್ನಿಯ ವೇಳೆ  ತವರಿನ ತಂಡ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್‌ ನಿರ್ಮಿಸುತ್ತದೆ ಎನ್ನುವ ಆರೋಪವಿದೆ. ತಮ್ಮ ತಂಡ ಯಾವ ವಿಭಾಗದಲ್ಲಿ ಬಲಿಷ್ಠವಾಗಿದೆಯೋ ಅದಕ್ಕೆ  ಒತ್ತು ಕೊಟ್ಟು ಪಿಚ್‌ ಸಿದ್ಧಪಡಿಸುತ್ತವೆ ಎನ್ನುವ ದೂರುಗಳು ಕೇಳಿ ಬಂದಿವೆ. ಆದ್ದರಿಂದ ತಟಸ್ಥ ಸ್ಥಳದಲ್ಲಿ ರಣಜಿ ಪಂದ್ಯ ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದು ಬಿಸಿಸಿಐ ತಾಂತ್ರಿಕ ಸಮಿತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಷಯವನ್ನು ತಾಂತ್ರಿಕ ಸಮಿತಿ ಬಿಸಿಸಿಐಗೆ ಶಿಫಾರಸು ಮಾಡಿದೆ. ಮಂಡಳಿ  ಕಾರ್ಯಕಾರಿ ಸಮಿತಿಯ ಸಭೆ ಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಈಗಿನ ನಿಯಮದ ಪ್ರಕಾರ ಪ್ರತಿ ತಂಡ ತವರಿನಲ್ಲಿ ನಾಲ್ಕು ಮತ್ತು ಹೊರಗಡೆ ನಾಲ್ಕು ಪಂದ್ಯಗಳನ್ನು ಆಡುತ್ತದೆ. ದುಲೀಪ್‌ ಟ್ರೋಫಿಯನ್ನು ಅಂತರ ವಲಯ ಟೂರ್ನಿಯನ್ನಾಗಿ ಬದಲಿಸು ವುದು, ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಸುವುದು, ಈ ಟೂರ್ನಿಯನ್ನು ಹೊನಲು ಬೆಳಕಿನಲ್ಲಿ ನಡೆಸಬೇಕೆನ್ನುವ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಮುಂಬರುವ ದಿನಗಳಲ್ಲಿ ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಎದುರು  ಸರಣಿ ಆಡಲಿದ್ದು ಒಟ್ಟು 13 ಟೆಸ್ಟ್‌ ಪಂದ್ಯಗಳು ನಡೆಯಲಿವೆ. ಈ ಸರಣಿ ಗಳಿಗೆ  ಗುಲಾಬಿ ಬಣ್ಣದ ಚೆಂಡನ್ನು ಬಳ ಸುವ ಬಗ್ಗೆ ಅನುರಾಗ್ ಠಾಕೂರ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.