ADVERTISEMENT

ತವರಿನ ಅಭಿಮಾನಿಗಳಿಗೆ ಜಯದ ಉಡುಗೊರೆ

ಪ್ರೊ ಕಬಡ್ಡಿ: ಮಿಂಚಿದ ಗುಜರಾತ್‌ ಫಾರ್ಚುನ್‌; ಸುಕೇಶ್‌ ಹೆಗ್ಡೆ, ಸಚಿನ್‌ ದಾಳಿಗೆ ಎದುರಾಳಿ ತತ್ತರ

ಕೆ.ಓಂಕಾರ ಮೂರ್ತಿ
Published 11 ಆಗಸ್ಟ್ 2017, 19:42 IST
Last Updated 11 ಆಗಸ್ಟ್ 2017, 19:42 IST
ಗುಜರಾತ್ ಫಾರ್ಚೂನ್‌ಜೈಂಟ್ಸ್ ಮತ್ತು ಯು ಮುಂಬಾ ತಂಡಗಳ ನಡುವಣ ಹಣಾಹಣಿ
ಗುಜರಾತ್ ಫಾರ್ಚೂನ್‌ಜೈಂಟ್ಸ್ ಮತ್ತು ಯು ಮುಂಬಾ ತಂಡಗಳ ನಡುವಣ ಹಣಾಹಣಿ   

ಅಹಮದಾಬಾದ್‌: ವಿಶ್ವಕಪ್‌ ಕಬಡ್ಡಿ ಟೂರ್ನಿಗೆ ವೇದಿಕೆ ಒದಗಿಸಿದ್ದ ನಗರಿಯಲ್ಲಿ ಇದೇ ಮೊದಲ ಬಾರಿ ಪ್ರೊ ಕಬಡ್ಡಿಯ ಘಮಲು. ಜೋರಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಬಂದಿದ್ದ ಕ್ರೀಡಾ ಪ್ರೇಮಿಗಳಿಂದ ಒಳಾಂಗಣ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆ. ಅದಕ್ಕೆ ತವರಿನ ತಂಡ ನೀಡಿದ್ದು ಗೆಲುವಿನ ಉಡುಗೊರೆ.

ದಿ ಅರೆನಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಐದನೇ ಅವತರಣಿಕೆಯ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡ ಅಕ್ಷರಶಃ ಅಬ್ಬರಿಸಿತು. 39–21 ಪಾಯಿಂಟ್‌ಗಳಿಂದ ಮಾಜಿ ಚಾಂಪಿಯನ್‌ ಯು ಮುಂಬಾ ತಂಡಕ್ಕೆ ಸೋಲಿನ ಆಘಾತ ನೀಡುವಲ್ಲಿ ಯಶಸ್ವಿಯಾಯಿತು.

ಇಂಥ ಮನಮೋಹಕ ಆಟಕ್ಕೆ ಕಾರಣವಾಗಿದ್ದು ತವರಿನ ತಂಡದ ನಾಯಕ ಸುಖೇಶ್‌ ಹೆಗ್ಡೆ, ಸಚಿನ್‌ ಹಾಗೂ ರೋಹಿತ್ ಗುಲಿಯಾ. ಇವರಾಟಕ್ಕೆ ಅನೂಪ್‌ ಕುಮಾರ್‌ ಬಳಗ ತತ್ತರಿಸಿ ಹೋಯಿತು.

ADVERTISEMENT

ಫಾರ್ಚೂನ್ ಬಳಗದವರು ಎದುರಾಳಿಯನ್ನು ಮೂರು ಬಾರಿ ಆಲ್‌ಔಟ್‌ ಮಾಡಿದ್ದು ವಿಶೇಷ. ದಾಳಿ ಹಾಗೂ ರಕ್ಷಣಾವ್ಯೂಹದಲ್ಲಿ ಅಮೋಘ ಪ್ರದರ್ಶನ ತೋರಿ ಅಭಿಮಾನಿಗಳ ಹೃದಯ ಗೆದ್ದರು. 13 ಟ್ಯಾಕ್ಲಿಂಗ್‌ ಪಾಯಿಂಟ್, 19 ರೈಡಿಂಗ್ ಪಾಯಿಂಟ್‌ ಹಾಗೂ 6 ಲೋನಾ ಪಾಯಿಂಟ್‌ ಲಭಿಸಿದವು.

ರೈಡಿಂಗ್‌ನಲ್ಲಿ ಅನೂಪ್‌ ವಿಫಲ: ರೈಡಿಂಗ್‌ನಲ್ಲಿ ಸುಖೇಶ್‌ ಹೆಗ್ಡೆ ಮೊದಲ ಪಾಯಿಂಟ್‌ ತಂದಿತ್ತರು. ಜೊತೆಗೆ ಒಂದು ತಾಂತ್ರಿಕ ‍ಪಾಯಿಂಟ್‌ ಕೂಡ ಲಭಿಸಿತು. ಆದರೆ, ಯು ಮುಂಬಾ ತಂಡದ ನಾಯಕ ಅನೂಪ್‌ ಪದೇಪದೇ ಮಾಡಿದ ರೈಡಿಂಗ್‌ಗೆ ಫಲ ಸಿಗಲೇ ಇಲ್ಲ.

ಪೂರ್ವಾರ್ಧದಲ್ಲಿ 15 ಬಾರಿ ದಾಳಿ ನಡೆಸಿದ ಅವರು ಕೇವಲ 2 ಪಾಯಿಂಟ್‌ ಗೆದ್ದುಕೊಟ್ಟರು. ಇತ್ತ ಸೂಪರ್‌ ಜೈಂಟ್ಸ್‌ ತಂಡದವರು ಅಭಿಮಾನಿಗಳ ಬೆಂಬಲದಿಂದ ರೈಡಿಂಗ್‌ ಹಾಗೂ ಕ್ಯಾಚಿಂಗ್‌ನಲ್ಲಿ ಪಾಯಿಂಟ್‌ ಕಲೆ ಹಾಕುತ್ತಾ ಮುನ್ನುಗ್ಗಿದರು.

7ನೇ ನಿಮಿಷದಲ್ಲಿ ಆಲೌಟ್‌: ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಯುವ ಆಟಗಾರ ಸಚಿನ್‌ ಎದುರಾಳಿ ಬಳಗಕ್ಕೆ ದುಃಸ್ವಪ್ನವಾದರು. ಹೀಗಾಗಿ, ಗುಜರಾತ್‌ ತಂಡ 7ನೇ ನಿಮಿಷದಲ್ಲಿಯೇ ಎದುರಾಳಿಯನ್ನು ಆಲ್‌ಔಟ್‌ ಮಾಡುವಲ್ಲಿ ಸಫಲವಾಯಿತು. ಅಲ್ಲದೆ, 2 ಲೋನಾ ಪಾಯಿಂಟ್‌ ಪಡೆದು 9–1ರಲ್ಲಿ ಮುನ್ನಡೆ ಸಾಧಿಸಿತು.

ಪಂದ್ಯದ 9ನೇ ನಿಮಿಷದಲ್ಲಿ ಮೊದಲ ಬಾರಿ ಎದುರಾಳಿ ಆಟಗಾರರೊಬ್ಬರನ್ನು ಹಿಡಿತಕ್ಕೆ ಪಡೆಯುವಲ್ಲಿ ಯುವ ಮುಂಬಾ ಯಶ ಕಂಡಿತು. ಅಲ್ಲದೆ, ಸುಖೇಶ್‌ ಹೆಗ್ಡೆ ಅವರನ್ನು ಬಲೆಗೆ ಬೀಳಿಸಿತು. ಆದರೆ, ಫಾರ್ಚೂನ್‌ ಜೈಂಟ್ಸ್‌ತಂಡದವರು ಉತ್ಸಾಹ ಕಳೆದುಕೊಳ್ಳಲಿಲ್ಲ.

ಎರಡನೇ ಬಾರಿ ಅನೂಪ್‌ ಅವರನ್ನು ಬಲೆಗೆ ಕೆಡುವವಲ್ಲಿ ಸಫಲರಾದರು. ಅಲ್ಲದೆ, 19ನೇ ನಿಮಿಷದಲ್ಲಿ ಆಲ್ಔಟ್‌ ಮಾಡಿ ಮತ್ತೆ ಎರಡು ಲೋನಾ ಪಾಯಿಂಟ್‌ ಗಿಟ್ಟಿಸಿದರು. ಹೀಗಾಗಿ, ವಿರಾಮದ ವೇಳೆಗೆ ಸುಕೇಶ್‌ ಹೆಗ್ಡೆ ಬಳಗ 20–6 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿತ್ತು.

ಬಳಿಕ ಸುಖೇಶ್‌ ಹೆಗ್ಡೆ ಅವರನ್ನು ಸೂಪರ್‌ ಟ್ಯಾಕಲ್ ಮಾಡಿದ ಯು ಮುಂಬಾ ತಂಡದವರು ತಿರುಗೇಟು ನೀಡಲು ಪ್ರಯತ್ನಿಸಿದರು. ಈ ಹಂತದಲ್ಲಿ ಮತ್ತೆ ದಾಳಿಯನ್ನು ಬಿಗಿಗೊಳಿಸಿದ ಫಾರ್ಚೂನ್‌ ಜೈಂಟ್ಸ್‌ ಮುನ್ನಡೆಯನ್ನು 30–16ಕ್ಕೆ ಹೆಚ್ಚಿಸಿಕೊಂಡಿತು. ಅಲ್ಲದೆ, ಮೂರನೇ ಬಾರಿ ಎದುರಾಳಿಯನ್ನು ಆಲ್‌ಔಟ್‌ ಮಾಡಿತು. ಫಜಲ್‌ ಅತ್ರಾಚಲಿ ಹಾಗೂ ಅಬೋಜರ್‌ ಅವರನ್ನೊಳಗೊಂಡ ರಕ್ಷಣಾ ವಿಭಾಗ ಮಾಜಿ ಚಾಂಪಿಯನ್ನರನ್ನು ನಡುಗಿಸಿತು.

ಲೀಗ್‌ನಲ್ಲಿ ಫಾರ್ಚೂನ್‌ ಜೈಂಟ್ಸ್‌ ತಂಡದವರು ಎರಡು ಗೆಲುವು, ಒಂದು ಸೋಲು ಕಂಡಿದ್ದು ಹಾಗೂ ಒಂದು ಪಂದ್ಯದಲ್ಲಿ ಟೈ ಮಾಡಿಕೊಂಡಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಯು ಮುಂಬಾ ತಂಡದ ಓಟಕ್ಕೆ ತಡೆ ಬಿದ್ದಿದೆ. ಈ ತಂಡದವರು ಒಟ್ಟು ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಇಂದಿನ ಪಂದ್ಯಗಳು
ತೆಲುಗು ಟೈಟನ್ಸ್‌– ಯು.ಪಿ. ಯೋಧಾ
ಆರಂಭ: ರಾತ್ರಿ 8ಕ್ಕೆ

*
ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌–ದಬಂಗ್‌ ಡೆಲ್ಲಿ
ಆರಂಭ: ರಾತ್ರಿ 9ಕ್ಕೆ
ಸ್ಥಳ: ದಿ ಅರೆನಾ, ಅಹಮದಾಬಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.