ADVERTISEMENT

ತಿರುಗೇಟು ನೀಡಿದ ಆತಿಥೇಯರು

ಕ್ರಿಕೆಟ್‌: ಧವನ್‌, ರೋಹಿತ್ ಅಬ್ಬರ, ಬೌಲರ್‌ಗಳ ಮಿಂಚು, ಭಾರತಕ್ಕೆ 69 ರನ್ ಗೆಲುವು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಶಿಖರ್‌ ಧವನ್‌ ಬ್ಯಾಟಿಂಗ್‌ ವೈಖರಿ
ಶಿಖರ್‌ ಧವನ್‌ ಬ್ಯಾಟಿಂಗ್‌ ವೈಖರಿ   

ರಾಂಚಿ (ಪಿಟಿಐ): ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ ಅವರು ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದರು. ಇವರ ಆಟಕ್ಕೆ ರೋಹಿತ್‌ ಶರ್ಮ ಕೂಡ ನೆರವಾದರು.

ಇದರಿಂದ ಭಾರತ ತಂಡ ಚುಟುಕು ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಲಂಕಾ ತಂಡವನ್ನು 69 ರನ್‌ಗಳಿಂದ ಮಣಿಸಿ ಮೊದಲ  ಪಂದ್ಯದ ಸೋಲಿಗೆ ತಿರುಗೇಟು ನೀಡಿತು.

ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ  ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ತಂಡ ಫೀಲ್ಡಿಂಗ್ ಮಾಡಲು ಮುಂದಾಯಿತು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಭಾರತ ಇಲ್ಲಿ ಅಬ್ಬರಿಸಿತು. ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 196 ರನ್‌ ಕಲೆ ಹಾಕಿತು.

ಸವಾಲಿನ ಗುರಿ ಮುಟ್ಟಲು ಪರದಾಡಿದ  ಲಂಕಾ ತಂಡ 20 ಓವರ್‌ ಗಳಲ್ಲಿ 9 ವಿಕೆಟ್‌ಗೆ 127 ರನ್‌ ಗಳಿಸಿತು.  ಇದರಿಂದ ಮೂರು ಪಂದ್ಯಗಳ ಸರಣಿ 1–1ರಲ್ಲಿ ಸಮಬಲವಾಗಿದೆ. ಕೊನೆಯ ಪಂದ್ಯ ಭಾನುವಾರ ವಿಶಾಖ ಪಟ್ಟಣದಲ್ಲಿ ನಡೆಯಲಿದೆ.

ಧವನ್‌ ಅಬ್ಬರ: ಟ್ವೆಂಟಿ–20 ಮಾದರಿಯಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ಆದರೆ ಮೊದಲ ಪಂದ್ಯದಲ್ಲಿ ಕೇವಲ 101 ರನ್‌ಗೆ ಆಲೌಟ್‌ ಆಗಿತ್ತು. ರಾಂಚಿಯ ಅಂಗಳದಲ್ಲಿ ಧವನ್‌  ಕೇವಲ 25 ಎಸೆತಗಳಲ್ಲಿ 51 ರನ್‌ ಕಲೆ ಹಾಕಿದರು.

ಬೌಂಡರಿ (7) ಮತ್ತು ಸಿಕ್ಸರ್‌ಗಳ (2) ಮೂಲಕವೇ 40 ರನ್‌ ಬಾರಿಸಿದರು. ಇದು ಎಡಗೈ ಬ್ಯಾಟ್ಸ್‌ಮನ್‌ ಧವನ್‌ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿ. ಮುಂಬೈನ ರೋಹಿತ್ ಕೂಡ ಸಿಂಹಳೀಯ ನಾಡಿನ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.    ರೋಹಿತ್‌ 36 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 43 ರನ್ ಬಾರಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 75 ರನ್‌ ಕಲೆ ಹಾಕಿತು. ಇದಕ್ಕಾಗಿ ತಗೆದುಕೊಂಡಿದ್ದು 42 ಎಸೆತಗಳನ್ನು ಮಾತ್ರ.

ಆರಂಭಿಕ ಜೋಡಿ ಕಟ್ಟಿದ ಗಟ್ಟಿ ಬುನಾದಿಯ ಮೇಲೆ ನಂತರದ ಬ್ಯಾಟ್ಸ್‌ಮನ್‌ಗಳು ರನ್ ಸೌಧ ನಿರ್ಮಿಸಿದರು. ಅಜಿಂಕ್ಯ ರಹಾನೆ (25), ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ಸುರೇಶ್ ರೈನಾ (30) ಮತ್ತು ಹೊಸ ಪ್ರತಿಭೆ ಹಾರ್ದಿಕ್‌ ಪಾಂಡ್ಯ (27) ನಂತರ ರನ್‌ ವೇಗ ಹೆಚ್ಚಿಸಿದರು.

ಭಾರತ ತಂಡ ಮೊದಲ ಹತ್ತು ಓವರ್‌ಗಳು ಮುಗಿದಾಗ 93 ರನ್‌ಗಳನ್ನು ಗಳಿಸಿತ್ತು. ಕೊನೆಯ ಐದು ಓವರ್‌ಗಳು ಬಾಕಿಯಿದ್ದಾಗ 131 ರನ್‌ ಬಾರಿಸಿತ್ತು.  ಕೊನೆಯ 30 ಎಸೆತಗಳಲ್ಲಿ 65 ರನ್‌ಗಳು ಬಂದವು.

ಪರದಾಟ: ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ಆಲೌಟ್ ಮಾಡಿದ್ದ ಲಂಕಾ ಬೌಲರ್‌ಗಳು ಇಲ್ಲಿ ವಿಕೆಟ್‌ ಕಬಳಿಸಲು ಪರದಾಡಿದರು.

ಹಿಂದಿನ ಪಂದ್ಯದ ಹೀರೊ ವೇಗಿ ರಜಿತಾ ನಾಲ್ಕು ಓವರ್‌ ಬೌಲಿಂಗ್ ಮಾಡಿ 45 ರನ್‌ ನೀಡಿ ದುಬಾರಿಯೆನಿಸಿದರು. ಒಂದೂ ವಿಕೆಟ್‌ ಪಡೆಯಲು ಇವರಿಗೆ ಸಾಧ್ಯವಾಗಲಿಲ್ಲ.

ಭಾರತ ತಂಡ 19ನೇ ಓವರ್‌ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಕ್ರಮವಾಗಿ ಹಾರ್ದಿಕ್‌ ಮತ್ತು ರೈನಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದ ಭಾರತ ‘ದ್ವಿಶತಕ’ ಬಾರಿಸುವ ಅವಕಾಶ ತಪ್ಪಿ ಹೋಯಿತು.

ಪ್ರಾಬಲ್ಯ: ಭಾರತ ಬೌಲಿಂಗ್‌ನಲ್ಲೂ ಪ್ರಾಬಲ್ಯ ಮರೆಯಿತು. ಲಂಕಾ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಗುಣತಿಲಕಾ (2), ದಿಲ್ಶಾನ್‌ (0), ಪ್ರಸನ್ನ (1) ಔಟಾದರು. ಲಂಕಾ ಮೊದಲ ಮೂರು ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಆರಂಭದಲ್ಲಿ ಬಿದ್ದ ಈ ಪೆಟ್ಟನಿಂದ ಚೇತರಿಸಿಕೊಳ್ಳಲು ಲಂಕಾಕ್ಕೆ ಸಾಧ್ಯ ವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಚಾಂಡಿಮಲ್‌ (31), ಕಪುಗೇಂದ್ರ (32) ಗೆಲುವಿಗಾಗಿ ಹೋರಾಟ ನಡೆಸಿದರೂ ಫಲ ಲಭಿಸಲಿಲ್ಲ. ಸ್ಪಿನ್ನರ್‌ ಆರ್‌. ಅಶ್ವಿನ್‌ ಮೂರು ವಿಕೆಟ್‌ ಪಡೆದರೆ, ವೇಗಿ ಆಶಿಶ್‌ ನೆಹ್ರಾ, ರವೀಂದ್ರ ಜಡೇಜ ಮತ್ತು ಜಸ್‌ಪ್ರೀತ್‌ ಬೂಮ್ರಾ ತಲಾ ಎರಡು ವಿಕೆಟ್‌ ಕಬಳಿಸಿದರು.

ಮುಂದಿನ ತಿಂಗಳು ಟ್ವೆಂಟಿ–20 ವಿಶ್ವ ಟೂರ್ನಿ ಮತ್ತು ಏಷ್ಯಾ ಕಪ್ ನಡೆಯಲಿದೆ. ಆ ಟೂರ್ನಿಗೆ ಸಜ್ಜಾಗಲು ಬಿಸಿಸಿಐ ಚುಟುಕು ಸರಣಿಯನ್ನು ಆಯೋಜಿಸಿದೆ. ಇದಕ್ಕೂ ಮೊದಲು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ಎದುರು ಸರಣಿ ಜಯಿಸಿತ್ತು.

ಸ್ಕೋರ್‌ಕಾರ್ಡ್‌
ಭಾರತ  6 ಕ್ಕೆ 196  (20 ಓವರ್‌ಗಳಲ್ಲಿ)

ರೋಹಿತ್‌ ಶರ್ಮಾ ಸಿ ಮತ್ತು ಬಿ  ದುಷ್ಮಂತಾ ಚಾಮೀರಾ  43
ಶಿಖರ್ ಧವನ್‌ ಸಿ. ದಿನೇಶ್‌ ಚಾಂಡಿಮಲ್‌ ಬಿ.  ದುಷ್ಮಂತಾ ಚಾಮೀರಾ  51
ಅಜಿಂಕ್ಯ ರಹಾನೆ ಸಿ. ತಿಲಕರತ್ನೆ ದಿಲ್ಶಾನ್‌ ಬಿ. ಸಚಿತ್ರಾ ಸೇನಾನಾಯಕೆ  25
ಸುರೇಶ್ ರೈನಾ ಸಿ. ದುಷ್ಮಂತಾ ಚಾಮೀರಾ ಬಿ. ತಿಸಾರ ಪೆರೆರಾ  30
ಹಾರ್ದಿಕ್‌ ಪಾಂಡ್ಯ ಸಿ. ಧನುಷ್ಕಾ ಗುಣತಿಲಕಾ ಬಿ. ತಿಸಾರ ಪೆರೆರಾ  27
ಮಹೇಂದ್ರ ಸಿಂಗ್ ದೋನಿ ಔಟಾಗದೆ  9
ಯುವರಾಜ್‌ ಸಿಂಗ್‌ ಸಿ. ಸಚಿತ್ರಾ ಸೇನಾನಾಯಕೆ ಬಿ. ತಿಸಾರ ಪೆರೆರಾ  00
ರವೀಂದ್ರ ಜಡೇಜ ಔಟಾಗದೆ  01
ಇತರೆ: (ಲೆಗ್‌ ಬೈ–1, ವೈಡ್–9)   10

ವಿಕೆಟ್‌ ಪತನ: 1–75 (ಧವನ್‌; 6.6), 2–122 (ರೋಹಿತ್‌; 13.1), 3–127 (ರಹಾನೆ; 14.2), 4–186 (ಹಾರ್ದಿಕ್‌; 18.4), 5–186 (ರೈನಾ; 18.5), 6–186 (ಯುವರಾಜ್‌; 18.6).
ಬೌಲಿಂಗ್‌: ಕಸುನ್‌ ರಜಿತಾ 4–0–45–0, ತಿಸಾರ ಪೆರೆರಾ 3–0–33–3, ಸಚಿತ್ರಾ ಸೇನಾನಾಯಕೆ 4–0–40–1, ದುಷ್ಮಂತಾ ಚಾಮೀರಾ 4–0–38–2, ಸಿಕುಗೆ ಪ್ರಸನ್ನ 3–0–21–0, ಮಿಲಿಂದಾ ಸಿರಿವರ್ಧನಾ 1–0–6–0, ದಸುನಾ  ಶನಕಾ 1–0–12–0.

ADVERTISEMENT

ಶ್ರೀಲಂಕಾ 9 ಕ್ಕೆ 127  (20 ಓವರ್‌ಗಳಲ್ಲಿ)
ಧನುಷ್ಕಾ ಗುಣತಿಲಕಾ ಸಿ. ಮಹೇಂದ್ರ ಸಿಂಗ್ ದೋನಿ ಬಿ. ಆಶಿಶ್‌ ನೆಹ್ರಾ  02
ತಿಲಕರತ್ನೆ ದಿಲ್ಶಾನ್‌ ಸ್ಟಂಪ್ಡ್‌ ಮಹೇಂದ್ರ ಸಿಂಗ್ ದೋನಿ ಬಿ. ಆರ್‌. ಅಶ್ವಿನ್‌  00
ಸಿಕುಗೆ ಪ್ರಸನ್ನ ಸಿ. ಯುವರಾಜ್ ಸಿಂಗ್‌ ಬಿ. ಆಶಿಶ್ ನೆಹ್ರಾ  01
ದಿನೇಶ್‌ ಚಾಂಡಿಮಲ್‌ ಸ್ಟಂಪ್ಡ್‌  ದೋನಿ ಬಿ. ರವೀಂದ್ರ ಜಡೇಜ  31
ಚಾಮರಾ ಕಪುಗೆದರಾ ಸಿ. ಹಾರ್ದಿಕ್‌ ಪಾಂಡ್ಯ ಬಿ. ರವೀಂದ್ರ ಜಡೇಜ  32
ಮಿಲಿಂದ ಸಿರಿವರ್ಧನಾ ಔಟಾಗದೆ  28
ದಸುನಾ  ಶನಕಾ ಸಿ. ಸುರೇಶ್ ರೈನಾ ಬಿ. ಆರ್‌. ಅಶ್ವಿನ್‌  27
ತಿಸಾರ ಪೆರೆರಾ ಸಿ. ಅಜಿಂಕ್ಯ ರಹಾನೆ ಬಿ. ಆರ್‌. ಅಶ್ವಿನ್‌  00
ಸಚಿತ್ರಾ ಸೇನಾನಾಯಕೆ ಎಲ್‌ಬಿಡಬ್ಲ್ಯು ಬಿ. ಜಸ್‌ಪ್ರೀತ್‌ ಬೂಮ್ರಾ  00
ದುಷ್ಮಂತಾ ಚಾಮೀರಾ ಬಿ. ಜಸ್‌ಪ್ರೀತ್‌ ಬೂಮ್ರಾ  00
ಕಸುನ್‌ ರಜಿತಾ ಔಟಾಗದೆ  03
ಇತರೆ: (ವೈಡ್‌–3) 03
ವಿಕೆಟ್‌ ಪತನ: 1–2 (ದಿಲ್ಶಾನ್‌; 0.1), 2–3 (ಪ್ರಸನ್ನ; 1.1), 3–16 (ಗುಣತಿಲಕಾ; 3.2), 4–68 (ಕಪುಗೆದರಾ; 11.2), 5–68 (ಚಾಂಡಿಮಲ್‌; 11.3), 6–116 (ಶನಕಾ; 16.2), 7–117 (ಪೆರೆರಾ; 16.4), 8–119 (ಸೇನಾನಾಯಕೆ; 17.3), 9–119 (ಚಾಮೀರಾ; 17.6).
ಬೌಲಿಂಗ್‌: ರವಿಚಂದ್ರನ್ ಅಶ್ವಿನ್ 4–0–14–3, ಆಶಿಶ್‌ ನೆಹ್ರಾ 3–0–26–2, ಯುವರಾಜ್‌ ಸಿಂಗ್ 3–0–19–0, ರವೀಂದ್ರ ಜಡೇಜ 4–0–24–2, ಸುರೇಶ್‌ ರೈನಾ 2–0–22–0, ಜಸ್‌ಪ್ರೀತ್‌ ಬೂಮ್ರಾ 3–0–17–2, ಹಾರ್ದಿಕ್ ಪಾಂಡ್ಯ 1–0–5–0.

ಫಲಿತಾಂಶ:  ಭಾರತಕ್ಕೆ 69 ರನ್‌ ಗೆಲುವು.
ಪಂದ್ಯಶ್ರೇಷ್ಠ: ಶಿಖರ್‌ ಧವನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.