ADVERTISEMENT

ತ್ರಿಕೋನ ಸರಣಿ: ಬಾಂಗ್ಲಾದೇಶ ಜಯಭೇರಿ

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಬಾಂಗ್ಲಾದೇಶ ತಂಡದ ಮಹಮೂದುಲ್ಲಾ (ಎಡ) ಮತ್ತು ಮುಷ್ಫಿಕರ್‌ ರಹೀಮ್‌ ಸಂಭ್ರಮಿಸಿದರು
ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಬಾಂಗ್ಲಾದೇಶ ತಂಡದ ಮಹಮೂದುಲ್ಲಾ (ಎಡ) ಮತ್ತು ಮುಷ್ಫಿಕರ್‌ ರಹೀಮ್‌ ಸಂಭ್ರಮಿಸಿದರು   

ಡಬ್ಲಿನ್‌, ಐರ್ಲೆಂಡ್‌ (ಎಎಫ್‌ಪಿ):  ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋತರೂ ಕೂಡ ನ್ಯೂಜಿಲೆಂಡ್ ಪ್ರಶಸ್ತಿ ಗೆದ್ದುಕೊಂಡಿತು.

ಈ ಮೂಲಕ 2019ರ ವಿಶ್ವಕಪ್‌ಗೆ ಅರ್ಹತೆ ಗಳಿಸುವತ್ತ ದಾಪುಗಾಲಿಟ್ಟಿತು.  ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ 271 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 10 ಎಸೆತ ಬಾಕಿ ಇರುವಾಗಲೇ ಜಯ ಸಾಧಿಸಿತು. ಮುಷ್ಫಿಕರ್‌ ರಹೀಮ್ ಮತ್ತು ಮಹಮ್ಮದುಲ್ಲಾ ಆರನೇ ವಿಕೆಟ್‌ಗೆ ಸೇರಿಸಿದ 72 ರನ್‌ಗಳು ತಂಡದ ಜಯಕ್ಕೆ  ಕಾರಣವಾದವು.

ಎಳು ರನ್‌ಗಳಿಗೆ ಮೊದಲ ವಿಕೆಟ್‌ ಪತನಗೊಂಡ ನಂತರ ತಲಾ 65 ರನ್‌ ಗಳಿಸಿದ ತಮೀಮ್ ಇಕ್ಬಾಲ್‌ ಮತ್ತು ಶಬ್ಬೀರ್‌ ರೆಹಮಾನ್‌ ಬಾಂಗ್ಲಾದೇಶ ಇನಿಂಗ್ಸ್‌ನ ಚುಕ್ಕಾಣಿ ಹಿಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 136 ರನ್‌ ಸೇರಿಸಿತು. ಇವರಿಬ್ಬರು ಔಟಾದ ನಂತರ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ 70 ಎಸೆತಗಳಲ್ಲಿ 72 ರನ್‌ ಅಗತ್ಯವಿದ್ದಾಗ ಜೊತೆಗೂಡಿದ ಮುಷ್ಫಿಕರ್‌ ರಹೀಮ್ ಮತ್ತು ಮಹಮ್ಮದುಲ್ಲಾ ಸುಲಭ ಜಯ ತಂದುಕೊಟ್ಟರು.

ADVERTISEMENT

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕೂಡ ಆರಂಭದಲ್ಲಿ ಆಘಾತ ಅನುಭವಿಸಿತ್ತು. ಎರಡನೇ ವಿಕೆಟ್‌ಗೆ ಟಾಮ್‌ ಲಥಾಮ್‌ ಮತ್ತು ನೀಲ್‌ ಬ್ರೂಮ್‌ 133 ರನ್ ಸೇರಿಸಿದರು. ಇವರಿಬ್ಬರ ವಿಕೆಟ್ ಪತನಗೊಂಡ ನಂತರವೂ ತಂಡ 300ರ ಗಡಿ ದಾಟುವ ಸಾಧ್ಯತೆ ಇತ್ತು. ಆದರೆ ಬಾಂಗ್ಲಾದೇಶ ಬೌಲರ್‌ಗಳು ಇದಕ್ಕೆ ಅವಕಾಶ ನೀಡ ಲಿಲ್ಲ. 42ನೇ ಓವರ್‌ ನಂತರ 11 ಎಸೆತ ಗಳಲ್ಲಿ ತಂಡ ಕೇವಲ ಎರಡು ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತು. ಅಂತಿಮ ಓವರ್‌ಗಳಲ್ಲಿ ರಾಸ್ ಟೇಲರ್‌ (60; 56ಎ, 4 ಬೌಂ) ಅಮೋಘ ಆಟವಾಡಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 270 (ಲಥಾಮ್‌ 84, ನೀಲ್ ಬ್ರೂಮ್‌ 63, ರಾಸ್ ಟೇಲರ್‌ ಔಟಾಗದೆ 60; ಮಷ್ರಫೆ ಮೊರ್ತಜಾ 52ಕ್ಕೆ2, ನಾಸಿರ್‌ ಹೊಸೇನ್‌ 47ಕ್ಕೆ2, ಶಕೀಬ್‌ ಅಲ್ ಹಸನ್‌ 41ಕ್ಕೆ2); ಬಾಂಗ್ಲಾದೇಶ: 48.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 271 (ತಮೀಮ್ ಇಕ್ಬಾಲ್‌ 65, ಶಬ್ಬೀರ್‌ ರೆಹಮಾನ್‌ 65, ಮುಷ್ಫಿಕರ್‌ ರಹೀಮ್ ಔಟಾಗದೆ 45, ಮಹಮ್ಮದುಲ್ಲಾ ಔಟಾಗದೆ 46; ಜೀತನ್‌ ಪಟೇಲ್‌ 55ಕ್ಕೆ2). ಫಲಿತಾಂಶ: ಬಾಂಗ್ಲಾದೇಶಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.