ADVERTISEMENT

ದಾಲ್ಮಿಯ ಮತ್ತೆ ಬಿಸಿಸಿಐ ಅಧ್ಯಕ್ಷ

ಇಂದು ವಾರ್ಷಿಕ ಮಹಾಸಭೆ; ಸ್ಪರ್ಧೆಯಿಂದ ಹಿಂದೆ ಸರಿದ ಪವಾರ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST
ಜಗಮೋಹನ್‌ ದಾಲ್ಮಿಯ
ಜಗಮೋಹನ್‌ ದಾಲ್ಮಿಯ   

ಚೆನ್ನೈ (ಪಿಟಿಐ/ಐಎಎನ್‌ಎಸ್‌): ಹಿರಿಯ ಆಡಳಿತಾಧಿಕಾರಿ ಜಗಮೋಹನ್‌ ದಾಲ್ಮಿಯ ಅವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಸೋಮವಾರ ಇಲ್ಲಿ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಈ ವಿಷಯ ಅಧಿಕೃತವಾಗಿ ಪ್ರಕಟವಾಗಲಿದೆ.

ದಾಲ್ಮಿಯ 2001ರಿಂದ ಮೂರು ವರ್ಷದ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಎರಡು ವರ್ಷಗಳ ಹಿಂದೆ ಹಂಗಾಮಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಎನ್‌. ಶ್ರೀನಿವಾಸನ್‌ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ಸುಪ್ರೀಂ ಕೋರ್ಟ್‌ ಸೂಚನೆ ದಾಲ್ಮಿಯಗೆ ವರವಾಗಿ ಪರಿಣಮಿಸಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಹೆಸರನ್ನು ಸೂಚಿಸಲು ಈ ಬಾರಿ ಪೂರ್ವ ವಲಯಕ್ಕೆ ಅವಕಾಶವಿತ್ತು. ಈ ವಲಯದ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳು ಶ್ರೀನಿವಾಸನ್‌ ಪರ ಒಲವು ಹೊಂದಿವೆ. ಆದ್ದರಿಂದ ದಾಲ್ಮಿಯ ಹಾದಿ ಸುಗಮಗೊಂಡಿದ್ದು, ಪವಾರ್ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಪವಾರ್‌ ಕೂಡಾ 2005ರಿಂದ 08ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು.

ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರೂ ಆದ 70 ವರ್ಷದ ದಾಲ್ಮಿಯ ಬಿಸಿಸಿಐ ಪದಚ್ಯುತ ಅಧ್ಯಕ್ಷ ಶ್ರೀನಿವಾಸನ್‌ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಪೂರ್ವ ವಲಯದ ಮೇಲೆ ದಾಲ್ಮಿಯ ಅವರಿಗೆ ಪೂರ್ಣ ನಿಯಂತ್ರಣವಿದೆ. ಆದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ. ತಮಿಳುನಾಡು ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುವ ಶ್ರೀನಿವಾಸನ್‌ಗೆ ಮತ ಚಲಾಯಿಸಲಷ್ಟೇ ಅವಕಾಶ ನೀಡಲಾಗಿದೆ.

ವಾರ್ಷಿಕ ಮಹಾಸಭೆ ನಡೆಯುವ ಮುನ್ನಾದಿನವಾದ ಭಾನುವಾರ ದಾಲ್ಮಿಯ ಬಣದವರು ಪೂರ್ವ ವಲಯದ  ಕ್ರಿಕೆಟ್‌ ಸಂಸ್ಥೆಗಳ ಪ್ರಮುಖರನ್ನು ಭೇಟಿಯಾಗಿದ್ದಾರೆ. ಶ್ರೀನಿವಾಸನ್‌ ಗುಂಪಿನಲ್ಲಿ ಗುರುತಿಸಿಕೊಂಡಿರುವ ಬಿಹಾರ ಕ್ರಿಕೆಟ್‌ ಸಂಸ್ಥೆಯ ಅಮಿತಾಭ್‌ ಚೌಧರಿ ಜಂಟಿ ಕಾರ್ಯದರ್ಶಿ ಮತ್ತು ಹರಿಯಾಣದ ಅನಿರುದ್ಧ್‌ ಚೌಧರಿ ಖಜಾಂಚಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಇದೇ ಗುಂಪಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಎಂ.ಎಲ್‌. ನೆಹ್ರು, ಆಂಧ್ರದ ಗೋಕರಾಜು ಗಂಗರಾಜು (ದಕ್ಷಿಣ) ಮತ್ತು ಅಸ್ಸಾಂನ ಗೌತಮ್‌ ರಾಯ್‌ (ಪೂರ್ವ) ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಉಳಿದ ಇನ್ನು ಎರಡು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಸಿ.ಕೆ. ಖನ್ನಾ (ಉತ್ತರ ವಲಯ)  ಮತ್ತು ಮ್ಯಾಥ್ಯೂಸ್ (ಪಶ್ವಿಮ) ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು ಚುನಾವಣೆಯನ್ನು ಎದುರಿಸಬೇಕಿದೆ. ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿರುವ ಜ್ಯೋತಿರಾಧಿತ್ಯ ಸಿಂಧ್ಯಾ ಮತ್ತು ರವಿ ಸಾವಂತ್‌ ಅವರು ಪವಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಚರ್ಚೆ: ವಾರ್ಷಿಕ ಮಹಾಸಭೆ ಆರಂಭಕ್ಕೆ ಎರಡು ದಿನಗಳ ಮುಂಚಿತವೇ ಇಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಪವಾರ್ ತಮ್ಮ ಬೆಂಬಲಿಗರ ಜೊತೆ ಸೇರಿ ತುಂಬಾ ಹೊತ್ತು ಸಮಾಲೋಚನೆ ನಡೆಸಿದರು. ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್‌ ಮನೋಹರ್‌ ಕೂಡಾ ಇಲ್ಲಿಗೆ ಬಂದಿದ್ದಾರೆ.

ಹಿನ್ನಲೆ: ಒಂದೆಡೆ ಬಿಸಿಸಿಐ ಅಧ್ಯಕ್ಷ ಸ್ಥಾನ, ಇನ್ನೊಂದಡೆ ಐಪಿಎಲ್‌ ತಂಡ ಎರಡನ್ನೂ ಹೊಂದಿರುವ ಶ್ರೀನಿವಾಸನ್‌ ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿಲ್ಲ. ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್ ನೇತೃತ್ವದ ಸಮಿತಿ ಐಪಿಎಲ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್ ಪ್ರಕರಣದ ಕುರಿತು ತನಿಖೆ ನಡೆಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ವರದಿಯ ವಿಚಾರಣೆ ನಡೆಸಿದ್ದ ಕೋರ್ಟ್‌ ಶ್ರೀನಿವಾಸನ್‌ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದಾರೆ ಎಂದು ಹೇಳಿತ್ತು.

ಯಾವ ಹುದ್ದೆಗೆ ಯಾರು ಸ್ಪರ್ಧೆ
ಕಾರ್ಯದರ್ಶಿ : ಸಂಜಯ್‌ ಪಟೇಲ್‌ ಹಾಗೂ ಅನುರಾಗ್‌ ಠಾಕೂರ್‌.
ಜಂಟಿ ಕಾರ್ಯದರ್ಶಿ: ಅಮಿತಾಭ್‌ ಚೌಧರಿ ಹಾಗೂ ಚೇತನ್‌ ದೇಸಾಯಿ.
ಖಜಾಂಚಿ: ಅನಿರುದ್ಧ್‌ ಚೌಧರಿ–ರಾಜೀವ್‌ ಶುಕ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.