ADVERTISEMENT

ದ್ರೋಣಾಚಾರ್ಯ ಪ್ರಶಸ್ತಿಗೆ ದ್ರಾವಿಡ್‌ ಹೆಸರು ಶಿಫಾರಸು

ಪಿಟಿಐ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ದ್ರೋಣಾಚಾರ್ಯ ಪ್ರಶಸ್ತಿಗೆ ದ್ರಾವಿಡ್‌ ಹೆಸರು ಶಿಫಾರಸು
ದ್ರೋಣಾಚಾರ್ಯ ಪ್ರಶಸ್ತಿಗೆ ದ್ರಾವಿಡ್‌ ಹೆಸರು ಶಿಫಾರಸು   

ಕೋಲ್ಕತ್ತ: ಕರ್ನಾಟಕದ ಹಿರಿಯ ಕ್ರಿಕೆಟ್‌ ಆಟಗಾರ ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಹಿರಿಯ ಆಟಗಾರ ಸುನಿಲ್‌ ಗಾವಸ್ಕರ್‌ ಅವರನ್ನು ಕ್ರಮವಾಗಿ ರಾಜೀವ್‌ ಗಾಂಧಿ ಖೇಲ್‌ ರತ್ನ ಮತ್ತು  ಧ್ಯಾನ್‌ಚಂದ್‌ (ಜೀವಮಾನ ಸಾಧನೆ) ಪುರಸ್ಕಾರಗಳಿಗೆ ನಾಮ ನಿರ್ದೇಶನ ಮಾಡಲಾಗಿದೆ.

‘ಭಾರತ ‘ಎ’ ಮತ್ತು 19 ವರ್ಷದೊಳಗಿನವರ ತಂಡದ ಮುಖ್ಯ ಕೋಚ್‌ ದ್ರಾವಿಡ್‌ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದ್ದೇವೆ’ ಎಂದು ಬಿಸಿಸಿಐ ಆಡಳಿತಾಧಿಕಾರಿ ಸಮಿತಿಯ (ಸಿಒಎ) ಮುಖ್ಯಸ್ಥ ವಿನೋದ್‌ ರಾಯ್‌ ತಿಳಿಸಿದ್ದಾರೆ.

ADVERTISEMENT

ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು.

‘ಕೆಲ ಕಾರಣಗಳಿಂದಾಗಿ ಬಿಸಿಸಿಐ ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡುವುದನ್ನು ನಿಲ್ಲಿಸಿತ್ತು. ಹೋದ ವರ್ಷ ಕೊಹ್ಲಿ ಅವರ ಬಾಲ್ಯದ ಕೋಚ್‌ ರಾಜಕುಮಾರ್‌ ಶರ್ಮಾ ಅವರಿಗೆ ಪ್ರಶಸ್ತಿ ನೀಡಲಾಗಿತ್ತು. ರಾಜಕುಮಾರ್‌ ಪ್ರಶಸ್ತಿಗೆ ಅರ್ಜಿ ಹಾಕಿದ್ದರು. ಅವರನ್ನು ಬಿಸಿಸಿಐ ನಾಮ ನಿರ್ದೇಶನ ಮಾಡಿರಲಿಲ್ಲ. ಭಾರತದ ಜೂನಿಯರ್‌ ತಂಡ ವಿಶ್ವಕಪ್‌ ಗೆಲ್ಲುವಲ್ಲಿ ರಾಹುಲ್‌ ಅವರ ಪಾತ್ರ ಮಹತ್ವದ್ದು. ಹೀಗಾಗಿ ಅವರ ಹೆಸರನ್ನು ಈ ಬಾರಿ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಹ್ಲಿ ಅವರ ಹೆಸರನ್ನು ಎರಡನೇ ಸಲ ಖೇಲ್‌ ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ. 2016ರಲ್ಲೂ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು.

ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌ ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಅವರಿಗೆ ಪ್ರಶಸ್ತಿ ನೀಡಲಾಗಿತ್ತು. ಹೀಗಾಗಿ ಕೊಹ್ಲಿಗೆ ಪ್ರಶಸ್ತಿ ಕೈತಪ್ಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.