ADVERTISEMENT

ನಾಕೌಟ್‌ ಹೊಸ್ತಿಲಲ್ಲಿ ಪಂಕಜ್‌, ಕಮಲ್‌

ವಿಶ್ವ ಸ್ನೂಕರ್‌: ರಾಜ್ಯದ ಚಿತ್ರಾಗೆ ಜಯ, ದಾಖಲೆಯ ಹಾದಿಯಲ್ಲಿ ಎಡವಿದ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಬೆಂಗಳೂರು: ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಅಪೂರ್ವ ಪ್ರದರ್ಶನ ಮುಂದುವರಿಸಿರುವ ಭಾರತದ ಪಂಕಜ್‌ ಅಡ್ವಾಣಿ ಮತ್ತು ಕಮಲ್ ಚಾವ್ಲಾ ಮೂರನೇ ಪಂದ್ಯದಲ್ಲೂ ಗೆಲುವು ಪಡೆದರು. ಇದರಿಂದ ಈ ಇಬ್ಬರೂ ಆಟಗಾರರು ನಾಕೌಟ್‌ ಪ್ರವೇಶಿಸುವ ಹಾದಿ ಸುಗಮವಾಗಿದೆ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಪಂಕಜ್‌ ಸರಾಗವಾಗಿ ಪಂದ್ಯ ಗೆದ್ದುಕೊಂಡರು. ‘ದ ಪ್ರಿನ್ಸ್ ಆಫ್‌ ಇಂಡಿಯಾ‘ ಖ್ಯಾತಿಯ ಪಂಕಜ್ ಪಡೆದ ಹ್ಯಾಟ್ರಿಕ್‌ ಗೆಲುವು ಇದು. ಈ ವರ್ಷ ವಿಶ್ವ 6-ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿರುವ ಪಂಕಜ್‌ 4-0 ಫ್ರೇಮುಗಳಿಂದ ಪಂದ್ಯ ಗೆದ್ದುಕೊಂಡರು. ಮೂರು ಫ್ರೇಮ್‌ಗಳಲ್ಲಿ ನೂರಕ್ಕಿಂತಲೂ ಹೆಚ್ಚು ಪಾಯಿಂಟ್ಸ್‌ ಕಲೆ ಹಾಕಿದರು.

ಮೊದಲ ಫ್ರೇಮ್‌ನಲ್ಲಿ 103-4ರಲ್ಲಿ ಜಯ ಲಭಿಸಿತು. ಗೆಲುವಿನ ಜೊತೆಗೆ ಪಾಯಿಂಟ್‌ಗಳ ಅಂತರ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಆಡಿದರು. ನಂತರದ ಮೂರೂ ಫ್ರೇಮ್‌ಗಳಲ್ಲಿ ಕ್ರಮವಾಗಿ 119-7, 88-26, 136-0ರಲ್ಲಿ ಕಲೆ ಹಾಕಿ ಅಸ್ಟ್ರಿಯದ ಪಾಲ್ ಸ್ಕೋಫ್‌ ಅವರನ್ನು ಮಣಿಸಿದರು. ಆದರೆ, ಒಂದೇ ಬ್ರೇಕ್‌ನಲ್ಲಿ ಹೆಚ್ಚು ಪಾಯಿಂಟ್‌ ಕಲೆ ಹಾಕಿದ (ಹಿಂದಿನ ದಾಖಲೆ 145) ಸುಧಾರಿಸಿಕೊಳ್ಳಲು ಅವರಿಗೆ ಉತ್ತಮ ಅವಕಾಶವಿತ್ತು. ನಾಲ್ಕನೇ ಫ್ರೇಮ್‌ನಲ್ಲಿ 136 ಪಾಯಿಂಟ್ಸ್ ಗಳಿಸಿದರು. ಒಂಬತ್ತು ಪಾಯಿಂಟ್‌ಗಳ ಅಂತರದಿಂದಷ್ಟೇ ಅವರಿಗೆ ಈ ಅವಕಾಶ ತಪ್ಪಿತು.

ಶುಕ್ರವಾರ ಗೆದ್ದ ಪ್ರಮುಖರು
ಲಕ್ಷ್ಮಣ್‌ ರಾವತ್‌, ವರುಣ್‌ ಮದನ್, ರಘತ್‌ ಹಬೀಬ್‌, ಶಿವರಾಮ್‌ ಅರೋರಾ, ಚಿತ್ರಾ ಮಗಿಮೈರಾಜ್‌, ಕಮಲ್‌ ಚಾವ್ಲಾ, ಪಂಕಜ್ ಅಡ್ವಾಣಿ, ಶಹಬಜ್‌ ಅದಿಲ್‌ ಖಾನ್‌, ನದೀಮ್‌ ಅಹ್ಮದ್‌,
ಸೋತ ಪ್ರಮುಖರು
ನೀನಾ ಪ್ರವೀಣ್‌, ಆರ್‌. ಉಮಾದೇವಿ ನಾಗರಾಜ್‌, ರಾಹುಲ್‌ ಅಜಯ್‌ ಸಚ್‌ದೇವ್, ನೀತಾ ಸಾಂಘ್ವಿ.

ಈ ಪಂದ್ಯದಲ್ಲಿ ಪಂಕಜ್ ಒಟ್ಟು 444 ಪಾಯಿಂಟ್‌ಗಳನ್ನು ಗಳಿಸಿದರು. ಆದರೆ, ಅಸ್ಟ್ರಿಯದ ಆಟಗಾರ ಗಳಿಸಿದ್ದು ಕೇವಲ 37 ಪಾಯಿಂಟ್ಸ್‌! ದೊಡ್ಡ ಅಂತರದ ಗೆಲುವು ಬೆಂಗಳೂರಿನ ಆಟಗಾರನಿಗೆ ನಿರೀಕ್ಷಿತವೇ ಆಗಿತ್ತು. ಹೋದ ತಿಂಗಳು ಲೀಡ್ಸ್‌ನಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್ ಎರಡು ಪ್ರಶಸ್ತಿ ಜಯಿಸಿ ಉತ್ತಮ ಲಯದಲ್ಲಿದ್ದಾರೆ.


‘ನನ್ನ ಕೆಲ ತಪ್ಪುಗಳ ಲಾಭವನ್ನು ಪಡೆದುಕೊಳ್ಳಲು ಎದುರಾಳಿ ಆಟಗಾರ ವಿಫಲನಾದ. ಆರಂಭದಿಂದಲೇ ಚುರುಕಾಗಿ ಆಡಬೇಕೆಂದು ಮೊದಲೇ ನಿರ್ಧರಿಸಿದ್ದೆ. ಹೆಚ್ಚು ಪಾಯಿಂಟ್‌ ಕಲೆ ಹಾಕುವತ್ತ ಗಮನ ಹರಿಸಿದ್ದೆ’ ಎಂದು ಪಂಕಜ್‌ ನುಡಿದರು.

ಚಾವ್ಲಾಗೆ ಮೂರನೇ ಜಯ: ಬಲಗೈ ಬೆರಳು ನೋವಿನ ನಡುವೆಯೂ ಅಮೋಘ ಪ್ರದರ್ಶನ ತೋರುತ್ತಿರುವ ಭೋಪಾಲ್‌ನ ಕಮಲ್ ಚಾವ್ಲಾ ‘ಎಫ್‌’ ಗುಂಪಿನ ಪಂದ್ಯದಲ್ಲಿ 68-27, 74-0, 67-56, 68-75, 60-17ರಲ್ಲಿ ಬೆಲ್ಜಿಯಂನ ಜೂರ್ಗನ್‌ ವಾನ್‌ ರಾಯ್ ಅವರನ್ನು ಮಣಿಸಿದರು.

‘ಮೊದಲ ನಾಲ್ಕೂ ಫ್ರೇಮ್‌ಗಳಲ್ಲಿ ಗೆಲುವು ಪಡೆಯುಬೇಕೆನ್ನುವುದು ನನ್ನ ಗುರಿಯಾಗಿತ್ತು. ಆದರೆ, ನಾಲ್ಕನೇ ಫ್ರೇಮ್‌ ವೇಳೆ
ಏಕಾಗ್ರತೆ ಕಳೆದುಕೊಂಡ ಕಾರಣ ನನ್ನ ಆಸೆ ಈಡೇರಲಿಲ್ಲ. ಮೊದಲ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದಿದ್ದಕ್ಕೆ ಖುಷಿಯಾಗಿದೆ’ ಎಂದು 2010ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಕಮಲ್‌ ನುಡಿದರು.

ಒಂದು ಗುಂಪಿನಲ್ಲಿ ಏಳು ಆಟಗಾರರು ಇರುತ್ತಾರೆ. ಮೊದಲ ನಾಲ್ಕು ಸ್ಥಾನ ಪಡೆದವರು ನಾಕೌಟ್‌ ಹಂತಕ್ಕೆ ಅರ್ಹತೆ ಪಡೆಯುತ್ತಾರೆ. ಪಂಕಜ್‌ ಮತ್ತು ಕಮಲ್‌  ತಲಾ ಮೂರು ಪಂದ್ಯಗಳಲ್ಲಿ ಗೆದ್ದಿದ್ದಾರೆ.

ಚಿತ್ರಾ ಜಯದ ಓಟ: ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಚಿತ್ರಾ ಮಗಿಮೈರಾಜ್‌ 3-0 (64-19, 80-33, 48-32) ಆಸ್ಟ್ರೇಲಿಯದ ಬುಸೆನಿಚ್‌ ಸುಜನ್ನೆ ಎದುರು ಜಯ ಪಡೆದರು. ಬೆಂಗಳೂರಿನ ಆಟಗಾರ್ತಿ ಪಡೆದ ಮೂರನೇ ಗೆಲುವು ಇದು. ಆದ್ದರಿಂದ ಚಿತ್ರಾ ನಾಕೌಟ್‌ ಪ್ರವೇಶದ ಹಾದಿಯೂ ಸುಗಮವಾಗಿದೆ.

ಗೆದ್ದ ಶಿವರಾಮ್‌: ಪುರುಷರ ವಿಭಾಗದ ಪ್ರಮುಖ ಪಂದ್ಯಗಳಲ್ಲಿ ಭಾರತದ ಶಿವರಾಮ್‌ ಅರೋರಾ 4-0ರಲ್ಲಿ ಜಪಾನ್‌ನ ಟೆಟೆಸುಯಾ ಕುವಾಟಾ ಮೇಲೂ, ಲಕ್ಷ್ಮಣ್‌ ರಾವತ್‌ 4-2ರಲ್ಲಿ ಅಂಟೊನಿಸ್ ಪೌಲಸ್‌ ವಿರುದ್ಧವೂ, ವರುಣ್‌ ಮದನ್‌ 4-0ರಲ್ಲಿ ಬ್ರೆಜಿಲ್‌ನ ವಿನಿಸಿಸ್‌ ಫುಕುಟಾ ಮೇಲೂ, ಸೌರವ್‌ ಕೊಠಾರಿ 4-1ರಲ್ಲಿ ಫಿಲಿಪ್ಪೀನ್ಸ್‌ನ ಮೈಕಲ್‌ ಮೆಂಗೊರಿಯೊ ವಿರುದ್ಧವೂ ಗೆದ್ದರು.

ಭಾರತದ ಸಂದೀಪ್‌ ಗುಲಾಟಿ, ಬ್ರಿಜೇಶ್‌ ದಾಮಿನಿ, ನಿತೇಶ್ ಮದನ್‌ ಅವರಿಗೂ ಜಯ ಲಭಿಸಿತು. ಆದರೆ, ಶಹಬಜ್‌ ಅದಿಲ್‌ ಖಾನ್‌ 4-0ರಲ್ಲಿ ಯುಎಇದ ಮಾರ್ವಾನ್ ಅಲ್ಫಲಾಸಿ  ವಿರುದ್ಧವೂ, ನೀತಾ ಸಾಂಘ್ವಿ 0-3ರಲ್ಲಿ ಹಾಂಕಾಂಗ್‌ನ ಆನ್‌ ಯೀ ಮೇಲೂ ಸೋಲು ಕಂಡರು.

ಮಹಿಳಾ ವಿಭಾಗದಲ್ಲಿ ನೀನಾ ಪ್ರವೀಣ್‌ 0-3ರಲ್ಲಿ ಆಸ್ಟ್ರೇಲಿಯದ ಕ್ಯಾಟಿ ಪ್ಯಾರಾಷಿಸ್‌ ಎದುರು ನಿರಾಸೆಗೆ ಒಳಗಾದರು. ಕರ್ನಾಟಕದ ಉಮಾದೇವಿ ನಾಗರಾಜ್ ಅವರಿಗೆ ಎರಡನೇ ಪಂದ್ಯದಲ್ಲೂ ಸೋಲು ತಪ್ಪಲಿಲ್ಲ. ಅವರು 1-3ರಲ್ಲಿ ಹಾಂಕಾಂಗ್‌ನ ಇಕ್ ವಾನ್‌ ಇನ್‌ ಜಾಕೆ ಎದುರು ಪರಾಭವಗೊಂಡರು. ಮಾಸ್ಟರ್ಸ್‌ ವಿಭಾಗದಲ್ಲಿ ಆತಿಥೇಯ ರಾಷ್ಟ್ರದ ರಫತ್‌ ಹಬೀಬ್‌ 3-0ರಲ್ಲಿ ಹಾಂಕಾಂಗ್‌ನ ಚಿಯಾನ್‌ ಪಾಂಗ್‌ ಡೇವಿಡ್‌ ಚೆಯುಂಗ್‌ ಅವರನ್ನು ಮಣಿಸಿದರು. ಇನ್ನೊಬ್ಬ ಆಟಗಾರ ವೇಲ್ಸ್‌ನ ಗ್ಯಾರೆಟ್‌ ಅಲನ್ 4-2ರಲ್ಲಿ ಭಾರತದ ದಿವ್ಯಶರ್ಮ ಎದುರು ಜಯ ಪಡೆದರು.

ವಿದೇಶಿ ಆಟಗಾರರ ಪ್ರಮುಖ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ನ ನಿಕ್‌ ಜೆನಿಂಗ್ಸ್‌ 4-2ರಲ್ಲಿ ಕೆನಡಾದ ಅಲನ್‌ ವೈಟ್‌ ಫೀಲ್ಡ್ ಅವರನ್ನು ಸೋಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.