ADVERTISEMENT

ಪಾಕ್ ಆಟಗಾರರಿಗೆ ಮದ್ದು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2016, 19:41 IST
Last Updated 3 ಜೂನ್ 2016, 19:41 IST

ಲಾಹೋರ್ (ಎಎಫ್‌ಪಿ): ಪಾಕಿಸ್ತಾನ ಕ್ರಿಕೆಟ್ ತಂಡದ ನಾಲ್ವರು ಆಟಗಾರರನ್ನು ಐಸಿಸಿಯು  ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಒಳಪಡಿಸಲಿದೆ ಎಂದು ತಂಡದ ವ್ಯವಸ್ಥಾಪಕ ಇಂತಿಕಾಬ್ ಆಲಮ್ ಹೇಳಿದ್ದಾರೆ.  

‘ಪಾಕ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್, ಲೆಗ್ ಸ್ಪಿನ್ನರ್ ಯಾಸೀರ್ ಶಾ, ಏಕದಿನ ಕ್ರಿಕೆಟ್ ತಂಡದ ನಾಯಕ ಅಜರ್ ಅಲಿ, ವೇಗದ ಬೌಲರ್ ಜುನೈದ್ ಖಾನ್ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಇಂತಿಕಾಬ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಐಸಿಸಿಯು 2006ರಲ್ಲಿ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.  ಅದರ ಅನ್ವಯ ಪ್ರತಿ ವರ್ಷವೂ ಆಯ್ದ ಆಟಗಾರರನ್ನು ಪರೀಕ್ಷೆಗೆ ಒಳಪಡಿಸುತ್ತದೆ.

ಹೋದ ಡಿಸೆಂಬರ್‌ನಲ್ಲಿ  ಯಾಸೀರ್ ಶಾ ಅವರು  ಉದ್ದೀಪನ ಮದ್ದು ಸೇವನೆ ಮಾಡಿದ್ದು ಸಾಬೀತಾಗಿತ್ತು. ಆದ್ದರಿಂದ ಅವರು ಮೂರು ತಿಂಗಳ ನಿಷೇಧವನ್ನೂ ಅನುಭವಿಸಿದ್ದರು. ಇದೀಗ ಪಾಕ್‌ ತಂಡವು ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲು ಸಜ್ಜಾಗಿದೆ.    ಉಭಯ ದೇಶಗಳ ನಡುವಣ ಐದು ಏಕದಿನ ಪಂದ್ಯಗಳು ಮತ್ತು ಒಂದು ಟ್ವೆಂಟಿ–20 ಪಂದ್ಯ ನಡೆಯಲಿದೆ.

ಶೀಘ್ರದಲ್ಲಿಯೇ ಆಟಗಾರರಿಂದ ಪರೀಕ್ಷೆಯ ಮಾದರಿಗಳನ್ನು ಐಸಿಸಿ ಉದ್ದೀಪನ ಮದ್ದು ತಡೆ ಘಟಕದ ತಂಡವು ಪಡೆಯಲಿದೆ. ಅದರ ಪರೀಕ್ಷೆಯ ಫಲಿತಾಂಶವು  ಇಂಗ್ಲೆಂಡ್ ಟೂರ್ನಿಯ ಸಂದರ್ಭದಲ್ಲಿ  ಹೊರಬೀಳಲಿದೆ. 2010ರಲ್ಲಿ ಪಾಕ್ ತಂಡವು ಕೊನೆಯ ಬಾರಿಗೆ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಆ ಸಂದರ್ಭದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿತ್ತು.

ಪಾಕ್ ತಂಡದ ಆಟಗಾರರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಆಮೀರ್ ಅವರು ಐದು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.