ADVERTISEMENT

ಪುಣೆಗೆ ದೋನಿ; ರಾಜ್‌ಕೋಟ್‌ ತೆಕ್ಕೆಗೆ ರೈನಾ

ಐಪಿಎಲ್‌ ಆಟಗಾರರ ಆಯ್ಕೆ; ಜಡೇಜ, ರಹಾನೆಗೆ ತಲಾ ₹ 9.5 ಕೋಟಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2015, 19:49 IST
Last Updated 15 ಡಿಸೆಂಬರ್ 2015, 19:49 IST

ಮುಂಬೈ (ಪಿಟಿಐ/ಐಎಎನ್‌ಎಸ್‌):  ಮಹೇಂದ್ರ ಸಿಂಗ್‌ ದೋನಿ ಮತ್ತು ಸುರೇಶ್‌ ರೈನಾ ಮುಂದಿನ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ಆಡಲಿರುವ ಪುಣೆ ಮತ್ತು ರಾಜ್‌ಕೋಟ್‌ ಫ್ರಾಂಚೈಸ್‌ ತಂಡಗಳಿಗೆ ನಡೆದ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ  ಹೆಚ್ಚು ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಆಯ್ಕೆಯಲ್ಲಿ ಸಂಜೀವ್‌ ಗೊಯೆಂಕಾ ಒಡೆತನದ ಪುಣೆ ಫ್ರಾಂಚೈಸ್‌, ದೋನಿ ಅವರನ್ನು ತನ್ನತ್ತ ಸೆಳೆದುಕೊಂಡಿತು. ಐಪಿಎಲ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ದಾಖಲೆ ಹೊಂದಿರುವ ರೈನಾ ಮೇಲೆ ಇಂಟೆಕ್ಸ್‌ ಮೊಬೈಲ್ಸ್‌ ಮಾಲೀಕತ್ವದ ರಾಜ್‌ಕೋಟ್‌ ಫ್ರಾಂಚೈಸ್‌ ಒಲವು ತೋರಿತು.

ಈ ಇಬ್ಬರೂ ಆಟಗಾರರಿಗೂ ಉಭಯ ಫ್ರಾಂಚೈಸ್‌ಗಳು ಒಂದು ಆವೃತ್ತಿಗೆ  ತಲಾ ₹12.5 ಕೋಟಿ ಮೊತ್ತ ನೀಡಿ ತಮ್ಮದಾಗಿಸಿಕೊಂಡವು. ಹಿಂದಿನ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್‌ ತಂಡದ ಪರ ಅಮೋಘ ಸಾಮರ್ಥ್ಯ ನೀಡಿ ಗಮನ ಸೆಳೆದಿದ್ದ ಅಜಿಂಕ್ಯ ರಹಾನೆ ಕೂಡಾ ಉತ್ತಮ ಬೆಲೆ ಪಡೆದರು.

ಪುಣೆ ಫ್ರಾಂಚೈಸ್‌ ರಹಾನೆ ಅವರನ್ನು ಎರಡನೇ ಆಟಗಾರನಾಗಿ ಆಯ್ಕೆಮಾಡಿಕೊಂಡಿತು. ಇತ್ತೀಚೆಗೆ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ರವೀಂದ್ರ ಜಡೇಜ ಅವರು ತವರಿನ ಫ್ರಾಂಚೈಸ್‌ ರಾಜ್‌ಕೋಟ್‌ ಪಾಲಾದರು.

ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ , ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌ ಮತ್ತು ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿಸ್‌ ಅವರು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಆಯ್ಕೆಯ ಆಟಗಾರರಾಗಿ ಪುಣೆ ತಂಡ ಸೇರಿಕೊಂಡಿದ್ದಾರೆ.
ರಾಜ್‌ಕೋಟ್‌ ಫ್ರಾಂಚೈಸ್‌ ಮೂರನೇ ಆಟಗಾರನ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಲಮ್‌, ನಾಲ್ಕನೇ ಆಟಗಾರನನ್ನಾಗಿ ಆಸ್ಟ್ರೇಲಿಯಾ ದ ಜೇಮ್ಸ್‌ ಫಾಕ್ನರ್‌ ಮತ್ತು ಐದನೇ ಆಯ್ಕೆಯ ಆಟಗಾರನನ್ನಾಗಿ  ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌  ಡ್ವೇನ್‌ ಬ್ರಾವೊ ಅವರನ್ನು ತನ್ನದಾಗಿಸಿ ಕೊಂಡಿತು.

ಆಸ್ಟ್ರೇಲಿಯಾದ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಅವರನ್ನು ಆಯ್ಕೆ ಮಾಡಿಕೊಳ್ಳಲು ಯಾವ ಫ್ರಾಂಚೈಸ್‌ ಕೂಡಾ ಮುಂದೆ ಬರಲಿಲ್ಲ. ಕರ್ನಾಟಕದ ಆಟಗಾರರತ್ತಲೂ ಯಾರೂ ಆಸಕ್ತಿ ತೋರಿಸಲಿಲ್ಲ.

ಯಾಕೆ ಈ ಆಯ್ಕೆ: ಆರನೇ ಆವೃತ್ತಿಯ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳ ಕೆಲ ಸಿಬ್ಬಂದಿಗಳು ಭಾಗಿಯಾಗಿದ್ದರಿಂದ ಸುಪ್ರೀಂಕೋರ್ಟ್‌ ಎರಡೂ ತಂಡಗಳ ಮೇಲೆ ಎರಡು ವರ್ಷ ನಿಷೇಧ ಹೇರಿತ್ತು.

ಮುಂದಿನ ಎರಡು ಆವೃತ್ತಿಗೆ (9 ಮತ್ತು 10) ಹೊಸ ತಂಡಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಿದ್ದ ಬಿಸಿಸಿಐ ಇದಕ್ಕಾಗಿ ಇತ್ತೀಚೆಗೆ ರಿವರ್ಸ್‌ ಬಿಡ್‌ ನಡೆಸಿತ್ತು. ಇದರಲ್ಲಿ ಕಡಿಮೆ ಬಿಡ್‌ ಮಾಡಿದ ಪುಣೆ ಮತ್ತು ರಾಜ್‌ಕೋಟ್‌ ತಂಡಗಳು ನೂತನ ತಂಡಗಳಾಗಿ ಆಯ್ಕೆಯಾಗಿದ್ದವು.

ಆಯ್ಕೆಗೆ ಲಭ್ಯವಿದ್ದವರೆಷ್ಟು: ಸೂಪರ್‌ ಕಿಂಗ್ಸ್‌ ಮತ್ತು ರಾಯಲ್ಸ್‌ ತಂಡಗಳಲ್ಲಿ ಹಿಂದೆ ಆಡಿದ್ದ 50 ಮಂದಿ ಆಟಗಾರರು ಆಯ್ಕೆಗೆ ಲಭ್ಯವಿದ್ದರು. ಇವರ ಪೈಕಿ ಪ್ರಮುಖ ಐದು ಮಂದಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಎರಡೂ ಫ್ರಾಂಚೈಸ್‌ಗಳಿಗೆ ಅವಕಾಶ ನೀಡಲಾಗಿತ್ತು.

ಈ ಆಟಗಾರರಿಗೆ ಹಿಂದಿನ ಫ್ರಾಂಚೈಸ್‌ಗಳು ಎಷ್ಟು ಹಣ ನೀಡು ತ್ತಿದ್ದವೊ ಅಷ್ಟೇ ಮೊತ್ತವನ್ನು ಕಡ್ಡಾಯ ವಾಗಿ ನೀಡಬೇಕೆಂದು ಸೂಚಿಸಲಾಗಿತ್ತು.

ದೋನಿ ಪುಣೆ ಪಾಲಾಗಿದ್ದರ ಹಿಂದಿನ ಗುಟ್ಟು: ರಿವರ್ಸ್‌ ಬಿಡ್ಡಿಂಗ್‌ನಲ್ಲಿ ಯಾವ ಫ್ರಾಂಚೈಸ್‌ ಕಡಿಮೆ ಬಿಡ್‌ ಮಾಡಿ ರುತ್ತದೆಯೋ  ಆ ಫ್ರಾಂಚೈಸ್‌ಗೆ ಲಭ್ಯ  ವಿರುವ ಆಟಗಾರರ ಪೈಕಿ ಒಬ್ಬರನ್ನು ಮೊದಲು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಈ ಬಾರಿ ಕಡಿಮೆ ಬಿಡ್‌ ಮಾಡಿದ್ದ ಪುಣೆ ತಂಡ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿತು. ಐಪಿಎಲ್‌ನ ಯಶಸ್ವಿ ನಾಯಕ ದೋನಿ ಮೇಲೆ ಮೊದಲೇ ಕಣ್ಣಿಟ್ಟಿದ್ದ ಈ ತಂಡ ಅವರನ್ನು ತನ್ನತ್ತ ಸೆಳೆದುಕೊಂಡಿತು.

ಬಹಳ ಮುಖ್ಯವಾಗಿ ಹೊಸ ತಂಡವಾಗಿರುವ ಪುಣೆಗೆ ತನ್ನ ಜನಪ್ರಿಯತೆಯ ಜತೆಗೆ ಪ್ರಾಯೋಜಕ ರನ್ನು ಸೆಳೆಯಲು ದೋನಿ ಅವರಂತಹ ಖ್ಯಾತನಾಮ ಆಟಗಾರನ ಅಗತ್ಯವಿತ್ತು.

ಯಾವ ತಂಡ ಶಕ್ತಿಯುತ: ಪ್ರಮುಖ ಐದು ಮಂದಿ ಆಟಗಾರರ ಸೇರ್ಪಡೆ ಬಳಿಕ ರಾಜ್‌ಕೋಟ್‌ಗಿಂತ ಪುಣೆ ತಂಡ ಅಲ್ಪ ಶಕ್ತಿಯುತವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಏಕೆಂದರೆ ಪುಣೆ ತಂಡದಲ್ಲಿ ದೋನಿ ಅವರಂತ ಸಮರ್ಥ ನಾಯಕ ರಹಾನೆ, ಅಶ್ವಿನ್‌, ಸ್ಟೀವನ್‌ ಸ್ಮಿತ್‌ ಮತ್ತು ಡು ಪ್ಲೆಸಿಸ್‌ರಂತಹ ಪ್ರತಿಭಾನ್ವಿತರಿದ್ದಾರೆ.

ರಾಜ್‌ಕೋಟ್‌ ತಂಡದಲ್ಲಿಯೂ ರೈನಾ, ಜಡೇಜ, ಫಾಕ್ನರ್‌ ಮತ್ತು ಡ್ವೇನ್‌ ಬ್ರಾವೊ ಅವರಂತಹ ಆಲ್‌ರೌಂಡರ್‌ ಗಳಿದ್ದಾರೆ. ಜತೆಗೆ ಮೆಕ್ಲಮ್‌ ಬಲವೂ ಈ ತಂಡಕ್ಕಿದೆ. ಆದರೆ ನಾಯಕತ್ವದ ವಿಚಾರದಲ್ಲಿ ಈ ತಂಡ ಪುಣೆಗೆ ಸಾಟಿ ಯಾಗಲಾರದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇದನ್ನು ಈಗಲೇ ನಿರ್ಧರಿಸಲು ಆಗುವುದಿಲ್ಲ.

ಫ್ರಾಂಚೈಸ್‌ಗಳು ಖರ್ಚು ಮಾಡಿದ ಹಣ ಎಷ್ಟು
ಪುಣೆ ಮತ್ತು ರಾಜ್‌ಕೋಟ್‌ ಫ್ರಾಂಚೈಸ್‌ಗಳಿಗೆ ಆಟಗಾರರನ್ನು ಖರೀದಿಸಲು ₹ 40 ಕೋಟಿಯಿಂದ ಗರಿಷ್ಠ ₹ 66 ಕೋಟಿವರೆಗೆ ಹಣ ವಿನಿಯೋಗಿಸುವ ಅವಕಾಶ ಇತ್ತು. ಎರಡೂ ಫ್ರಾಂಚೈಸ್‌ಗಳು ಪ್ರಮುಖ ಐದು ಮಂದಿಯನ್ನು ಆಯ್ಕೆ ಮಾಡಿಕೊಳ್ಳಲು ಈಗಾಗಲೇ ತಲಾ ₹ 39 ಕೋಟಿ ಖರ್ಚು ಮಾಡಿವೆ. ಎರಡೂ ಫ್ರಾಂಚೈಸ್‌ಗಳ ಖಾತೆಯಲ್ಲಿ ಇನ್ನೂ ತಲಾ  ₹ 27 ಕೋಟಿ ಹಣ ಉಳಿದಿದೆ. ಇದನ್ನು ಮುಂದಿನ ವರ್ಷ ನಡೆಯುವ ಹರಾಜಿನಲ್ಲಿ ವಿನಿಯೋಗಿಸಿ ಉಳಿದ ಆಟಗಾರರನ್ನು ಖರೀದಿ ಮಾಡಬೇಕಿದೆ.

ADVERTISEMENT

ಉಳಿದ ಆಟಗಾರರ ಕಥೆ ಏನು
ಈ ಬಾರಿ ಆಯ್ಕೆಯಾಗದೆ ಉಳಿದಿರುವ ಎಲ್ಲಾ ಆಟಗಾರರೂ 2016ರ ಫೆಬ್ರುವರಿ 6 ರಂದು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್‌ ಸಾಮಾನ್ಯ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹರಾಜಿನಲ್ಲಿ ಐಪಿಎಲ್‌ನಲ್ಲಿ ಆಡುವ ಎಂಟೂ ತಂಡಗಳು ಇವರನ್ನು ಖರೀದಿಸಲು ಬಿಡ್‌ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.