ADVERTISEMENT

ಪುಣೆ ಸಿಟಿಗೆ ಅರಾತ ಇಜುಮಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ನವದೆಹಲಿ (ಪಿಟಿಐ): ಮುಂಬರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಗೂ ಮುನ್ನ ತಂಡವನ್ನು ಬಲಪಡಿಸಲು ಮುಂದಾಗಿರುವ ಎಫ್‌ಸಿ ಪುಣೆ ಸಿಟಿ ತಂಡ ಮಿಡ್‌ಫೀಲ್ಡರ್‌ ಅರಾತ ಇಜುಮಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಸಂಬಂಧ ಬುಧವಾರ ಅರಾತ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಜಪಾನ್‌ ಮೂಲದ ಅರಾತ ಅವರು ಈ ಹಿಂದಿನ ಆವೃತ್ತಿಗಳಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ತಂಡದಲ್ಲಿ ಆಡಿದ್ದರು. ಸಿಂಗಪುರ ಲೀಗ್‌ನಲ್ಲಿ ಆಡುವ ಮೂಲಕ ಫುಟ್‌ಬಾಲ್‌ ಲೋಕಕ್ಕೆ ಅಡಿ ಇಟ್ಟಿದ್ದ ಮಿಡ್‌ಫೀಲ್ಡರ್‌ ಅರಾತ ಅವರು ಜಪಾನ್‌ ಫುಟ್‌ಬಾಲ್‌ ಲೀಗ್‌ನಲ್ಲಿ ಮಿಸ್ತುಬಿಶಿ ಮಿಜುಶಿಮಾ ಕ್ಲಬ್‌ ಅನ್ನು ಪ್ರತಿನಿಧಿಸಿದ್ದರು.

2006ರಲ್ಲಿ ಭಾರತಕ್ಕೆ ಬಂದ ಅವರು ಈಸ್ಟ್‌ ಬೆಂಗಾಲ್‌ ಮತ್ತು ಮಹೀಂದ್ರ ಯುನೈಟೆಡ್‌ ಕ್ಲಬ್‌ಗಳ ಪರ ಆಡಿದ್ದರು. 2009ರಲ್ಲಿ ಎಫ್‌ಸಿ ಪುಣೆ ಸೇರಿದ ಅವರು ಐ ಲೀಗ್‌ನಲ್ಲಿ ಮಿಂಚು ಹರಿಸಿದ್ದರು. 2012ರಲ್ಲಿ ಭಾರತದ ಪೌರತ್ವ ಪಡೆದು, ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದರು.

‘ಆಟದ ಬಗೆಗೆ ಅರಾತ ಹೊಂದಿರುವ ಬದ್ಧತೆ ಮೆಚ್ಚುವಂತಹದ್ದು. ಅವರ ಸೇರ್ಪಡೆ ಯಿಂದ ನಮ್ಮ ತಂಡದ ಮಿಡ್‌ ಫೀಲ್ಡ್‌ ವಿಭಾಗ ಇನ್ನಷ್ಟು ಶಕ್ತಿಯುತ ವಾಗಿದೆ’ ಎಂದು ಪುಣೆ ತಂಡದ ಮುಖ್ಯಕೋಚ್‌ ಆ್ಯಂಟೊನಿಯೊ ಹಬಾಸ್‌ ತಿಳಿಸಿದ್ದಾರೆ.

‘ಈ ಬಾರಿಯ ಟೂರ್ನಿಯಲ್ಲಿ ಪುಣೆ ಸಿಟಿ ಪರ ಕಣಕ್ಕಿಳಿಯಲು ಕಾತರನಾಗಿ ದ್ದೇನೆ. ಪುಣೆಯಲ್ಲಿ ನಾನು ಈ ಹಿಂದೆ ಸಾಕಷ್ಟು ಪಂದ್ಯಗಳನ್ನು ಆಡಿ ದ್ದೇನೆ.  ಕೋಚ್‌ ಹಬಾಸ್‌   ಮಾರ್ಗದರ್ಶನದಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಅರಾತ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.