ADVERTISEMENT

ಪುಲ್ಲೇಲ ಗಾಯತ್ರಿಗೆ ಮುನ್ನಡೆ

ಅಖಿಲ ಭಾರತ ಸಬ್‌ಜೂನಿಯರ್‌ ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 20:20 IST
Last Updated 3 ಸೆಪ್ಟೆಂಬರ್ 2015, 20:20 IST
ಪುಲ್ಲೇಲ ಗಾಯತ್ರಿಗೆ ಮುನ್ನಡೆ
ಪುಲ್ಲೇಲ ಗಾಯತ್ರಿಗೆ ಮುನ್ನಡೆ   

ಕಲಬುರ್ಗಿ:  ತೆಲಂಗಾಣದ ಪುಲ್ಲೇಲ ಗಾಯತ್ರಿ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್‌ಜೂನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಧಾನ ಸುತ್ತಿನ ಮೊದಲ ದಿನ ಎರಡು ವಿಭಾಗಗಳಲ್ಲಿ ಗೆದ್ದು ಪ್ರೀ ಕ್ವಾರ್ಟರ್‌ ಹಂತ ಪ್ರವೇಶಿಸಿದ್ದಾರೆ.

ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌  ಪುಲ್ಲೇಲ ಗೋಪಿಚಂದ್‌ ಅವರ ಪುತ್ರಿ ಗಾಯತ್ರಿ ಅವರು 13 ವರ್ಷ ವಯೋ ಮಿತಿ ವಿಭಾಗದಲ್ಲಿ ಮಹಾರಾಷ್ಟ್ರದ ಜಾಹ್ನವಿ ಕಾನಿಟ್ಕರ್‌ ವಿರುದ್ಧ 21–15 ,21–12ರಲ್ಲಿ ಗೆದ್ದು ಪ್ರೀ ಕ್ವಾರ್ಟರ್‌ ಹಂತಕ್ಕೆ ಪ್ರವೇಶಿಸಿದರು. 15 ವರ್ಷ ವಿಭಾಗದಲ್ಲಿ ತಮ್ಮ ರಾಜ್ಯದ ಕೆಯೂರಾ ಮೋಪತಿ ವಿರುದ್ಧ 21–19,21–11ರಲ್ಲಿ ಗೆದ್ದು ಪ್ರೀ ಕ್ವಾರ್ಟರ್‌ ಹಂತಕ್ಕೆ ಕಾಲಿಡುವ ಮೂಲಕ ಗಮನ ಸೆಳೆದರು.

ಬಾಲಕರ 13 ವರ್ಷ ವಯೋಮಿತಿಯಲ್ಲಿ ಕರ್ನಾಟಕದ ಸನೀತ್‌ ಡಿ.ಎಸ್‌ 21–11,23–21ರಲ್ಲಿ ಬಿಹಾರದ ತುಷಾರ್‌ ಕುಮಾರ್‌ ಸೇತು ವಿರುದ್ಧ ರೋಚಕ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ ಹಂತಕ್ಕೆ ಪ್ರವೇಶಿಸಿದರು. ರಾಜ್ಯದ ಮತ್ತೋರ್ವ ಆಟಗಾರ ಸಂತೃಪ್ತ್ ಎಚ್‌.ವಿ ಆಂಧ್ರದ ನಿಧಿಶ್‌ ಭಟ್‌ ಅವರನ್ನು 19–21,21–10, 21–11ರಲ್ಲಿ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಕರ್ನಾಟಕದ ಮಯೂರ್‌ .ಕೆ  ಅವರು ಮಣಿಪುರದ ಕೆಲ್ವಿನ್‌ ಪಿ. ವಿರುದ್ಧ 21–15,16–21,21–18ರಲ್ಲಿ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ ಹಂತಕ್ಕೆ ಕಾಲಿಟ್ಟರು.

15ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕರ್ನಾಟಕದ ಶಶಾಂಕ್‌ ರೆಡ್ಡಿ ತಮಿಳುನಾಡಿನ ಶ್ರೀ ವತ್ಸನ್‌ ಎಸ್‌. ವಿರುದ್ಧದ ಪಂದ್ಯದಲ್ಲಿ ವಾಕ್‌ ಓವರ್‌ ಪಡೆದರು. 15 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರಾಜ್ಯದ ಧೃತಿ ಯತೀಶ್‌ 21–16,21–14ರಲ್ಲಿ ತಮಿಳುನಾಡಿನ ನೀಳಾ ವಿ. ವಿರುದ್ಧ 21–16,21–14ರಲ್ಲಿ ಜಯಗಳಿಸಿದರು.

ರಿಚಾ ಮುಕ್ತಿಬೋಧ್‌‌  21–19,21–18ರಲ್ಲಿ ಮಹಾರಾಷ್ಟ್ರದ ತನಿಷ್ಕಾ ದೇಶಪಾಂಡೆ ವಿರುದ್ಧ ಗೆಲುವು ಸಾಧಿಸಿದರು. ರಾಜ್ಯದ ಇನ್ನೋರ್ವ ಆಟಗಾರ್ತಿ ತ್ರಿಶಾ ಹೆಗಡೆ ವಾಕ್‌ ಓವರ್‌ ಪಡೆದು ಪ್ರೀಕ್ವಾರ್ಟರ್‌ ಹಂತಕ್ಕೆ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT