ADVERTISEMENT

‘ಪೇಸ್–ಭೂಪತಿ ಜೊತೆ: ಉತ್ತಮ ಬೆಳವಣಿಗೆ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
‘ಪೇಸ್–ಭೂಪತಿ ಜೊತೆ: ಉತ್ತಮ ಬೆಳವಣಿಗೆ’
‘ಪೇಸ್–ಭೂಪತಿ ಜೊತೆ: ಉತ್ತಮ ಬೆಳವಣಿಗೆ’   

ಕೋಲ್ಕತ್ತ (ಐಎಎನ್‌ಎಸ್‌): ‘ಉಜ್‌ಬೆಕಿಸ್ತಾನ ವಿರುದ್ಧದ ಡೇವಿಸ್ ಕಪ್‌ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರು ಒಟ್ಟಿಗೆ ಕಾಣಿಸಿಕೊಳ್ಳುವುದು ಉತ್ತಮ ಸಂಗತಿ’ ಎಂದು ಡೇವಿಸ್ ಕಪ್ ತಂಡದ ಮಾಜಿ ನಾಯಕ ನರೇಶ್‌ ಕುಮಾರ್ ಹೇಳಿದ್ದಾರೆ.

‘ಇಬ್ಬರ ನಡುವೆ ಭಿನ್ನಾಭಿಪ್ರಾಯ ಗಳಿವೆ. ಆದರೆ ತಂಡದ ಆಡದ ನಾಯಕನಾಗಿರುವ ಭೂಪತಿ ಮತ್ತು ಡಬಲ್ಸ್ ವಿಭಾಗದಲ್ಲಿ ಆಡುವ ಪೇಸ್ ಇಬ್ಬರೂ ದೇಶಕ್ಕಾಗಿ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು’  ಎಂದು ನರೇಶ್‌ ಕುಮಾರ್ ಹೇಳಿದ್ದಾರೆ.

‘ಪೇಸ್ ಹಾಗೂ ಭೂಪತಿ ಭಾರತಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಒಟ್ಟಿಗೇ ಆಡಿದ್ದಾರೆ. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮುಂದುವರಿದರೆ ಅದು ಡೇವಿಸ್ ಕಪ್‌ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ’ ಎಂದು 87 ವರ್ಷ ದ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಉಜ್‌ಬೆಕಿಸ್ತಾನ ವಿರುದ್ಧದ ಏಷ್ಯಾ ಒಸೀನಿಯಾ ಗುಂಪು–1ರ ಎರಡನೇ ಸುತ್ತಿನ ಪಂದ್ಯ ಏಪ್ರಿಲ್‌ 7ರಿಂದ 9ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಗೆದ್ದ ತಂಡ ವಿಶ್ವ ಗುಂಪಿನ ‘ಪ್ಲೇ ಆಫ್‌’ಗೆ ಅರ್ಹತೆ ಗಳಿಸಲಿದೆ.

ADVERTISEMENT

ರಾಮ್‌ಕುಮಾರ್ ರಾಮನಾಥನ್, ಯೂಕಿ ಭಾಂಭ್ರಿ, ಪ್ರಜ್ಞೇಶ್ ಗುಣೇಶ್ವರನ್ ಮತ್ತು ಎನ್.ಶ್ರೀರಾಮ್ ಬಾಲಾಜಿ ಸಿಂಗಲ್ಸ್‌ನಲ್ಲಿ  ಆಡಲಿದ್ದರೆ, ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಪೇಸ್ ಆಯ್ಕೆಯಾಗಿದ್ದಾರೆ.  ಡೇವಿಸ್ ಕಪ್ ತಂಡಕ್ಕೆ ಭೂಪತಿ ನಾಯಕರಾಗಿ ಆಯ್ಕೆ ಯಾದ ವೇಳೆ ಪ್ರತಿಕ್ರಿಯೆ ನೀಡಿದ್ದ ಪೇಸ್, ‘ಅವರಿಗೆ ನಾಯಕರಾಗುವ ಎಲ್ಲಾ ಅರ್ಹತೆ ಇದೆ. ದೇಶ ಮೊದಲು ಉಳಿದದ್ದೆಲ್ಲ ಗೌಣ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.