ADVERTISEMENT

ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ: ಸೈನಾ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:54 IST
Last Updated 7 ಅಕ್ಟೋಬರ್ 2015, 19:54 IST

ಬೆಂಗಳೂರು: ‘ಹೆಚ್ಚು ಪ್ರಶಸ್ತಿಗಳು ಜಯಿಸಿದಂತೆಲ್ಲಾ ನಿರೀಕ್ಷೆಯೂ ಹೆಚ್ಚಾ ಗುತ್ತದೆ. ಪ್ರತಿ ಟೂರ್ನಿಯಲ್ಲೂ ನಾನು ಪ್ರಶಸ್ತಿ ಗೆಲ್ಲಬೇಕು ಎಂದು ಜನ ಬಯಸುತ್ತಾರೆ. ಆದ್ದರಿಂದಾಗಿ ಜವಾಬ್ದಾರಿಯೂ ಹೆಚ್ಚಾಗಿದೆ’ ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಹೇಳಿದರು.

ಬುಧವಾರ ನಗರದಲ್ಲಿ ನಡೆದ ಮ್ಯಾರಥಾನ್‌ ಕುರಿತ ಪತ್ರಿಕಾಗೋಷ್ಠಿ ಯಲ್ಲಿ ಸೈನಾ ಮಾತನಾಡಿದರು. 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊ ಒಲಿಂಪಿಕ್ಸ್‌ಕ್ಕಿಂತಲೂ ಮುಂದಿರುವ ಮಹತ್ವದ ಟೂರ್ನಿಗಳತ್ತ ಹೆಚ್ಚು ಗಮನ ಹರಿಸಿದ್ದೇನೆ ಎಂದರು.

‘ಒಲಿಂಪಿಕ್ಸ್‌ಗೆ ಇನ್ನು ಸಮಯವಿದೆ. ಇದಕ್ಕೂ ಮೊದಲು ಡೆನ್ಮಾರ್ಕ್‌ ಓಪನ್‌ ಮತ್ತು ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಗಳಿಗೆ. ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆಲ್ಲುವ ಆಸೆ ಈಡೇರಬೇಕಾದರೆ ಈ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಆದ್ದ ರಿಂದ ಡೆನ್ಮಾರ್ಕ್‌ ಟೂರ್ನಿಗಳತ್ತ ಮೊದಲ ಆದ್ಯತೆ’ ಎಂದು ಬೆಂಗಳೂರಿ ನಲ್ಲಿ ತರಬೇತಿ ಪಡೆಯುತ್ತಿರುವ ಸೈನಾ ನುಡಿದರು.

ಜಕಾರ್ತದಲ್ಲಿ ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಸೈನಾ ಬೆಳ್ಳಿ ಪದಕ ಜಯಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಮೊದಲು ಪಿ.ವಿ. ಸಿಂಧು ಕಂಚು ಜಯಿಸಿದ್ದರು. ಇದರಿಂದಾಗಿ ಸೈನಾಗೆ ವಿಶ್ವ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಮರಳಿ ಲಭಿಸಿತ್ತು.

‘ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಲಭಿಸಿದಾಗ ತುಂಬಾ ಖುಷಿಯಾಗಿತ್ತು. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವ ಸವಾಲಿದೆ. ಹೆಚ್ಚು ಒತ್ತಡವೂ ಇದೆ. ಕೆಲವು ತಿಂಗಳು ಎಡಗಾಲಿನ ನೋವಿನಿಂದ ಬಳಲಿದೆ. ವಿಶ್ವ ಚಾಂಪಿಯನ್‌ಷಿಪ್‌ ವೇಳೆ ನೋವು ಬಲವಾಗಿ ಕಾಡಿತು. ಈ ಸಮಸ್ಯೆಯ ನಡುವೆಯೂ ಪದಕ ಜಯಿಸಿದ್ದಕ್ಕೆ ಖುಷಿಯಾಗಿದೆ. ಈಗ ಪೂರ್ಣವಾಗಿ ಫಿಟ್‌ ಆಗಿದ್ದೇನೆ. ಸ್ಪೇನ್‌ನ ಕ್ಯಾರೊಲಿನ್‌ ಮರಿನ್‌ ಸಾಕಷ್ಟು ಪೈಪೋಟಿ ಒಡ್ಡುತ್ತಾಳೆ. ಆಕೆಯ ಸವಾಲಿಗೂ ಸಜ್ಜಾಗಿದ್ದೇನೆ’ ಎಂದು ಸೈನಾ ನುಡಿದರು.

ಇದೇ ವರ್ಷದ ಅಂತ್ಯದಲ್ಲಿ ನಡೆಯಲಿರುವ ಇಂಡಿಯನ್‌ ಬ್ಯಾಡ್ಮಿಂ ಟನ್‌ ಲೀಗ್‌ ಎರಡನೇ ಆವೃತ್ತಿಯ ಬಗ್ಗೆ ಮಾತನಾಡಿದ ಅವರು ‘ಯುವ ಆಟಗಾರರಿಗೆ ಐಬಿಎಲ್‌ ಅತ್ಯುತ್ತಮ ವೇದಿಕೆ. ಇದರಿಂದಾಗಿ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಪ್ರೊತ್ಸಾಹ ಸಿಕ್ಕಂತಾಗುತ್ತದೆ. ಬ್ಯಾಡ್ಮಿಂಟನ್‌ ಬೆಳವಣಿಗೆಗೂ ಪೂರಕವಾಗುತ್ತದೆ. ದೇಶದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಗೆ ಸಂಬಂಧಿಸಿದಂತೆ ತರಬೇತಿ ಕೇಂದ್ರಗಳು ಕಡಿಮೆಯಿವೆ. ಇವುಗಳ ಸಂಖ್ಯೆ ಹೆಚ್ಚಾಗಬೇಕು’ ಎಂದು ಸೈನಾ ಅಭಿಪ್ರಾಯಪಟ್ಟರು.

ಸೈನಾ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಆಟಗಾರ್ತಿ ಮೊದಲು ರಾಷ್ಟ್ರೀಯ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಗೋಪಿ ಚಂದ್ ಜೊತೆ ಮನಸ್ತಾಪ ಉಂಟಾದ ಕಾರಣ ಅವರು ಇಲ್ಲಿಗೆ ಬಂದು ವಿಮಲ್‌ ಕುಮಾರ್ ಬಳಿ ತರಬೇತಿಯಲ್ಲಿ ತೊಡಗಿದ್ದಾರೆ. ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.