ADVERTISEMENT

ಪ್ರಶಸ್ತಿಗಾಗಿ 120 ಸ್ಪರ್ಧಿಗಳ ಪೈಪೋಟಿ

ಸಸಿಹಿತ್ಲುವಿನಲ್ಲಿ ಕಳೆ ಕಟ್ಟಿದ ಸರ್ಫಿಂಗ್‌ ಸಂಭ್ರಮ: ಚಾಂಪಿಯನ್‌ಷಿಪ್‌ಗೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಪುದುಚೇರಿಯ ಸರ್ಫರ್‌ ಸುಹಾಸಿನಿ ಸಸಿಹಿತ್ಲುವಿನಲ್ಲಿ ಗುರುವಾರ ಅಂತಿಮ ಹಂತದ ಅಭ್ಯಾಸದಲ್ಲಿ ನಿರತರಾಗಿರುವುದು  ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಪುದುಚೇರಿಯ ಸರ್ಫರ್‌ ಸುಹಾಸಿನಿ ಸಸಿಹಿತ್ಲುವಿನಲ್ಲಿ ಗುರುವಾರ ಅಂತಿಮ ಹಂತದ ಅಭ್ಯಾಸದಲ್ಲಿ ನಿರತರಾಗಿರುವುದು ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಮಂಗಳೂರು: ಶುಕ್ರವಾರ ಸುರತ್ಕಲ್‌ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಆರಂಭವಾಗಲಿರುವ ‘ಇಂಡಿಯನ್‌ ಓಪನ್ ಆಫ್‌ ಸರ್ಫಿಂಗ್‌’ನಲ್ಲಿ 120 ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಪುದುಚೇರಿ, ಚೆನ್ನೈ, ಗೋವಾ, ಕೇರಳ, ಫ್ರಾನ್ಸ್‌, ರಷ್ಯಾ, ಜರ್ಮನಿ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಸ್ಥಳೀಯ ಸರ್ಫರ್‌ಗಳು ಗುರುವಾರ ಬೀಚ್‌ನಲ್ಲಿ ಅಂತಿಮ ಹಂತದ  ಕಸರತ್ತು ನಡೆಸಿದರು. ಈಗಾಗಲೇ ಆನ್‌ಲೈನ್‌ಲ್ಲಿ 120 ಸರ್ಫರ್‌ಗಳು ಹೆಸರು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಕೆಲವು ಆಟಗಾರರು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಕಳೆದ ಬಾರಿ ಚಾಂಪಿಯನ್‌ ಆಗಿದ್ದ ಭಾರತೀಯ ಸರ್ಫರ್‌ಗಳಾದ ಧರಣಿ, ಶೇಖರ್‌, ಮಣಿಕಂಠನ್‌, ಸಿಂಚನಾ ಗೌಡ, ಅನೀಷಾ, ತನ್ವಿ ಸೇರಿದಂತೆ ಹಲವರು ಈ ಬಾರಿಯೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಉತ್ಸುಕತೆ ತೋರಿದ್ದಾರೆ. ಸ್ಪರ್ಧೆಗಾಗಿ ಹಲವು ದಿನಗಳಿಂದ ಸಮುದ್ರದ ಅಲೆಗಳ ಜತೆಗೆ ಸಾಹಸಕ್ಕೆ ಇಳಿದ್ದಾರೆ.

ADVERTISEMENT

ಮಹಿಳೆಯರ ಮುಕ್ತ ಸರ್ಫಿಂಗ್‌ ವಿಭಾಗದಲ್ಲಿ ಈ ಬಾರಿ ಹೆಚ್ಚು ಸ್ಪರ್ಧೆ ಏರ್ಪಡಲಿದೆ. ಸ್ಪರ್ಧೆಗೆ ಹಲವು ಹೊಸ ಸರ್ಫರ್‌ಗಳ ಪ್ರವೇಶ ಆಗಿದೆ.  
ಮಳೆ ಬರುವ ಸಾಧ್ಯತೆ:  ಕರಾವಳಿ ಭಾಗ ದಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ  ಸರ್ಫಿಂಗ್‌ಗೆ ಅಡ್ಡಿಯಾಗುವ ಆತಂಕ  ಇದೆ.
ತಾಸುಗಟ್ಟಲೇ ಮಳೆ ಸುರಿದರೆ ಮಾತ್ರ ಸ್ಪರ್ಧೆ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇದೆ.  ಸಾಧಾರಣ ಮಳೆ ಬಂದರೆ ಸ್ಪರ್ಧೆಗೆ ಅಡ್ಡಿಯಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ವ್ಯವಸ್ಥೆ: ಸರ್ಫಿಂಗ್‌ ನಡೆಯುವ ಸಸಿಹಿತ್ಲು ಬೀಚ್‌ನಲ್ಲಿ  ಹೋಂ ಗಾರ್ಡ್‌ ಹಾಗೂ ಜೀವ ರಕ್ಷಕ ಸಿಬ್ಬಂದಿ, ಸಂಚಾರ ಆಸ್ಪತ್ರೆ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಫಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾದ ಉಪಾಧ್ಯಕ್ಷ ರಾಮ್‌ಮೋಹನ್‌ ಪರಾಂಜಪೆ ಹೇಳಿದರು.

ಮೊದಲ ಬಾರಿ
ಪುದುಚೇರಿ ಕಲಿಕಲೈ ಸರ್ಫಿಂಗ್‌ ಸ್ಕೂಲ್‌ನ ಸುಹಾಸಿನಿ ಡಾಮಿನ್‌, ಸ್ಟೋಕ್‌ ಕ್ಲಬ್‌ನ ಕಾರುಣ್ಯ (ಮಹಿಳಾ ಮುಕ್ತ ವಿಭಾಗ), ಚೆನ್ನೈನ 11 ವರ್ಷದ ಅಖಿಲನ್‌ (14 ವರ್ಷ ವಯೋಮಿತಿಯ) ಮೊದಲ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

-ಮಹೇಶ ಕನ್ನೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.