ADVERTISEMENT

ಪ್ರಶಸ್ತಿ ಸುತ್ತಿಗೆ ಪೇಸ್ ಲಗ್ಗೆ

ವಿನ್ಸ್‌ಟನ್–ಸಲೇಮ್ ಓಪನ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:47 IST
Last Updated 27 ಆಗಸ್ಟ್ 2016, 19:47 IST
ಲಿಯಾಂಡರ್‌ ಪೇಸ್‌ ಸಂಭ್ರಮ
ಲಿಯಾಂಡರ್‌ ಪೇಸ್‌ ಸಂಭ್ರಮ   

ವಿನ್ಸ್‌ಟನ್–ಸಲೇಮ್, ಅಮೆರಿಕ (ಪಿಟಿಐ): ಭಾರತದ ಲಿಯಾಂಡರ್ ಪೇಸ್ ಮತ್ತು ಜರ್ಮನಿಯ ಆ್ಯಂಡ್ರೆ ಬೆಗ್ಮನ್ ಜೋಡಿಯು ಇಲ್ಲಿ ನಡೆಯು ತ್ತಿರುವ ಎಟಿಪಿ  ವಿನ್ಸ್‌ಟನ್ ಸಲೇಮ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ.

ರಿಯೊ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ರೋಹನ್ ಬೋಪಣ್ಣ ಅವರೊಂದಿಗೆ ಕಣಕ್ಕಿಳಿದಿದ್ದ  ಪೇಸ್ ನಿರಾಸೆ ಅನು ಭವಿಸಿದ್ದರು. ಅದರ ನಂತರ ಆಡಿದ ಮೊದಲ ಟೂರ್ನಿಯಲ್ಲಿಯೇ ಪ್ರಶಸ್ತಿಯ ಸನಿಹ ಬಂದು ನಿಂತಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪೇಸ್ ಜೋಡಿಯು 1–6, 7–6, 10–4ರಿಂದ  ಸ್ವೀಡನ್‌ನ ರಾಬರ್ಟ್ ಲಿಂಡ್ಸೆಟೆಡ್ ಮತ್ತು ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿತು.

ಫೈನಲ್‌ನಲ್ಲಿ ಪೇಸ್ ಮತ್ತು ಬೆಗೆಮನ್  ಅವರು ಸ್ಪೇನ್‌ ದೇಶದ ಗಿಲೆರ್ಮೊ ಗಾರ್ಸಿಯಾ ಲೋಪೆಜ್ ಮತ್ತು ಫಿನ್ಲೆಂಡ್‌ನ ಹೆನ್ರಿ ಕಾಂಟಿನೆನ್ ವಿರುದ್ಧ ಸೆಣಸಲಿದ್ದಾರೆ.
ಪೇಸ್ ಜೋಡಿಗೆ ಕಠಿಣ ಜಯ: ನಾಲ್ಕರ ಘಟ್ಟದ ಪಂದ್ಯದಲ್ಲಿ ಬಲಿಷ್ಠ  ಎದುರಾಳಿಯ ವಿರುದ್ಧ ಟೈಬ್ರೇಕರ್‌ನಲ್ಲಿ ಪೇಸ್ ಜೋಡಿಯು ಜಯ ಸಾಧಿಸಿತು.

43 ವರ್ಷದ ಪೇಸ್ ಮತ್ತು ಅವರ ಜೊತೆಗಾರ 32 ವರ್ಷದ ಬೆಗೆಮನ್‌ ಅವರು ಮೊದಲ ಸೆಟ್‌ನಲ್ಲಿ ಖುರೇಷಿ ಜೋಡಿಯ ಎದುರು 1–6ರಿಂದ ಪರಾಭವಗೊಂಡರು.
ರಾಬರ್ಟ್ ಮತ್ತು ಖುರೇಷಿ ಜೋಡಿಯ ಹೊಂದಾಣಿಕೆಯ ಆಟದ ಮುಂದೆ ಪೇಸ್ ಜೋಡಿಯು ಮಂಕಾಯಿತು.  ಸರ್ವ್‌ಗಳಲ್ಲಿ ವೈಫಲ್ಯ ಅನುಭವಿಸಿದರು. 

ಆದರೆ, ಎರಡೇ ಸೆಟ್‌ನಲ್ಲಿ  ಪೇಸ್ ಜೋಡಿಯು ಎದುರಾಳಿಗಳಿಗೆ ತಿರುಗೇಟು ನೀಡಿತು. ಖುರೇಷಿ ಜೋಡಿಯ ಪ್ರತಿಯೊಂದು ತಂತ್ರಕ್ಕೂ ಪೇಸ್ ಬಳಿ ಉತ್ತರ ಇತ್ತು.  ಅಮೋಘವಾದ ಹೊಂದಾಣಿಕೆಯ ಆಟವಾಡಿದ್ದ ಇಬ್ಬರೂ ಖುರೇಷಿ ಜೊಡಿಗೆ ಕಠಿಣ ಸವಾಲು ಒಡ್ಡಿದರು. ಇದರಿಂದಾಗಿ ಎರಡನೇ ಸೆಟ್‌ ಟೈಬ್ರೇಕರ್‌ವರೆಗೂ ಲಂಬಿಸಿತು.  ಬಿರುಸಿನ ಸಂಘರ್ಷದ ನಂತರದ 7–6 ರಿಂದ ಪೇಸ್ ಜೋಡಿಯು ಗೆದ್ದಿತು.

ಮೂರನೇ ಸೆಟ್‌ ಕೂಡ ಸಂಘರ್ಷಮಯವಾಗಿತ್ತು. ಆದರೆ, ಪೇಸ್ ಜೋಡಿಯು ಯಾವುದೇ ಹಂತದಲ್ಲಿಯೂ ಕೈಚೆಲ್ಲಲಿಲ್ಲ. ಎದುರಾಳಿ ಜೋಡಿಗೆ ದಿಟ್ಟ ಉತ್ತರ ನೀಡಿ 10–4 ರಿಂದ ಗೆದ್ದು ಫೈನಲ್‌ ಪ್ರವೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.