ADVERTISEMENT

ಫತೇ ಹೈದರಾಬಾದ್ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಫತೇ ಹೈದರಾಬಾದ್ ತಂಡಕ್ಕೆ ಜಯ
ಫತೇ ಹೈದರಾಬಾದ್ ತಂಡಕ್ಕೆ ಜಯ   
ಬೆಂಗಳೂರು: ಫತೇ ಹೈದರಾಬಾದ್ ತಂಡ ಗುರುವಾರ ಇಲ್ಲಿ ನಡೆದ ಐಲೀಗ್ ಎರಡನೇ ಡಿವಿಷನ್‌ ಪಂದ್ಯದಲ್ಲಿ ಓಜೋನ್ ಎಫ್‌ಸಿ ಎದುರು ಜಯದಾಖಲಿಸಿದೆ. 
 
ಅಂತಿಮ ಹಂತ ತಲುಪಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಓಜೋನ್ ಎಫ್‌ಸಿ ತಂಡ  1–2 ಗೋಲುಗಳಲ್ಲಿ ಫತೇ ಹೈದರಾಬಾದ್ ಎದುರು ಸೋಲು ಕಂಡಿದೆ. 
 
ಈ ಸೋಲಿನಿಂದ ಓಜೋನ್ ತಂಡ ‘ಸಿ’ ಗುಂಪಿನಲ್ಲಿ ಏಳು ಪಾಯಿಂಟ್ಸ್‌ಗಳಿಂದ ಮೂರನೇ ಸ್ಥಾನದಲ್ಲಿದೆ. ಹೈದರಾಬಾದ್ ಒಂಬತ್ತು ಪಾಯಿಂಟ್ಸ್‌ಗಳಿಂದ ಅಗ್ರ ಸ್ಥಾನಕ್ಕೆ ಏರಿದೆ. ಅಲ್ಲದೇ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿದೆ. 
 
ಫೆಬ್ರುವರಿ 24 ರಂದು ನಡೆಯುವ ಅಂತಿಮ ಲೀಗ್ ಪಂದ್ಯದಲ್ಲಿ ಓಜೋನ್ ತಂಡ ಮುಂಬೈ ಕೆಂಕ್ರೆ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಓಜೋನ್ ತಂಡದ ಅಂತಿಮ ಹಂತ ತಲುಪುವ ಹಾದಿ ಕಠಿಣವಾಗಿದೆ. ಇತರ ತಂಡಗಳ ಫಲಿತಾಂಶದ ಮೇಲೆ ಓಜೋನ್‌ ಭವಿಷ್ಯ ನಿರ್ಧಾರವಾಗಲಿದೆ.
 
ಪಂದ್ಯದ ಮೂರನೇ ನಿಮಿಷದಲ್ಲಿ ನಿಖಿಲ್‌ ಬರ್ನಾರ್ಡ್‌ ಓಜೋನ್ ತಂಡದ ಮೊದಲ ಗೋಲು ತಂದುಕೊಟ್ಟರು. 
 
23ನೇ ನಿಮಿಷದಲ್ಲಿ ಹೈದರಾಬಾದ್ ತಂಡದ ನೊಂಗ್‌ಮಿದೆಮ್ ಸಿಂಗ್ ಹೆಡರ್ ಮಾಡುವ ಮೂಲಕ ಗೋಲು ಗಳಿಸಿ ಸಮಬಲ ಮಾಡಿಕೊಂಡರು. 
 
ಹೈದರಾಬಾದ್ ತಂಡದ ಅಗ್ರಗಣ್ಯ ಆಟಗಾರ ಆ್ಯಂಟೊ ಕ್ಸೇವಿಯರ್ 40ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೆಲುವು ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.