ADVERTISEMENT

ಫೆಡರರ್, ಪೆಟ್ರಾಗೆ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಸಾನಿಯಾ ಜೋಡಿಗೆ ಜಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಲಂಡನ್ (ರಾಯಿಟರ್ಸ್/ ಐಎಎನ್‌ಎಸ್‌): ರೋಜರ್ ಫೆಡರರ್, ಆ್ಯಂಡಿ ಮರ್ರೆ ಮತ್ತು ಪೆಟ್ರಾ ಕ್ವಿಟೊವಾ ಗುರುವಾರ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ  ಮೂರನೇ ಸುತ್ತಿಗೆ ಪ್ರವೇಶಿಸಿದರು.

ಎಂಟನೇ ವಿಂಬಲ್ಡನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರೋಜರ್ ಫೆಡರರ್ 6–4, 6–2, 6–2ರಿಂದ ಅಮೆರಿಕದ ಸ್ಯಾಮ್ ಕ್ವೆರ್ರಿ ವಿರುದ್ಧ ಗೆದ್ದರು.  ಆ್ಯಂಡಿ ಮರ್ರೆ 6–1, 6–1, 6–4 ರಿಂದ ರಾಬಿನ್ ಹಾಸೆ ವಿರುದ್ಧ ಜಯಿಸಿದರು. ಮಹಿಳಾ ವಿಭಾಗದಲ್ಲಿ ಪೆಟ್ರಾ ಕ್ವಿಟೊವಾ 6–2, 6–0ಯಿಂದ ಕುರುಮಿ ನಾರಾ ವಿರುದ್ಧ ಗೆದ್ದರು.

ಭೂಪತಿ ಜೋಡಿಗೆ ಸೋಲು:  ಭಾರತದ ಮಹೇಶ್ ಭೂಪತಿ ಮತ್ತು ಸರ್ಬಿಯಾದ ಜಾಂಕೊ ತಿಪ್ಸರೆವಿಕ್ ಜೋಡಿಯು ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿಯೇ ಸೋತಿತು. ಭೂಪತಿ ಮತ್ತು ಜಾಂಕೋ 3–6, 3–6,  2–6ರಿಂದ ಆಸ್ಟ್ರೀಯಾದ ಜರ್ಗನ್ ಮೆಲ್ಜರ್ ಮತ್ತು ಸ್ವೀಡನ್‌ ಆಟಗಾರ ರಾಬರ್ಟ್ ಲಿಂಡ್ಸೆಟೆಡ್ ವಿರುದ್ಧ ಪರಾಭವಗೊಂಡರು.

ಸಾನಿಯಾ–ಮಾರ್ಟಿನಾ ಮುನ್ನಡೆ: ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್  ಮಹಿಳೆಯರ ಡಬಲ್ಸ್‌ನಲ್ಲಿ ಗುರುವಾರ ಎರಡನೇ ಸುತ್ತಿಗೆ ಮುನ್ನಡೆದರು. ಮೊದಲ ಸುತ್ತಿನ ಹಣಾಹಣಿಯಲ್ಲಿ ಸಾನಿಯಾ ಜೋಡಿಯು 6–2, 6–2ರ ನೇರ ಸೆಟ್‌ಗಳಿಂದ ಕಜಕಿಸ್ತಾನದ ಜರೀನಾ ದಿಯಾಸ್ ಮತ್ತು ಚೀನಾದ ಝೆಂಗ್ ಸೈಸೈ  ಅವರನ್ನು ಪರಾಭವಗೊಳಿಸಿದರು.

ಅಗ್ರಶ್ರೇಯಾಂಕದ ಸಾನಿಯಾ, ಹಿಂಗಿಸ್ ಜೋಡಿಯು 68 ನಿಮಿಷ ನಡೆದ ಪಂದ್ಯದಲ್ಲಿ ಎದುರಾಳಿ ಜೋಡಿಯನ್ನು ಸೋಲಿಸಿತು. 15 ಸರ್ವಗಳ ಪೈಕಿ 10ರಲ್ಲಿ ಪಾಯಿಂಟ್ ಗಳಿಸಿದ ಸಾನಿಯಾ ಜೋಡಿಯು ಎರಡು ಬ್ರೇಕ್ ಪಾಯಿಂಟ್‌ ಗಳೊಂದಿಗೆ ಮೊದಲ ಸೆಟ್‌ನಲ್ಲಿ 6–2ರಿಂದ  ಸುಲಭವಾಗಿ  ಜಯ ಸಾಧಿಸಿತು.

ಎರಡನೇ ಸೆಟ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಾನಿಯಾ–ಹಿಂಗಿಸ್ ಗೆದ್ದರು. ‘ಆರಂಭ ಉತ್ತಮವಾಗಿತ್ತು. ನಂತರವೂ  ಆಟದ ಗುಣಮಟ್ಟ ವೃದ್ಧಿಸುತ್ತಲೇ ಹೋಗಿದ್ದು ಜಯಕ್ಕೆ ಕಾರಣವಾಯಿತು’ ಎಂದು ಸಾನಿಯಾ ಪಂದ್ಯದ ನಂತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.