ADVERTISEMENT

ಫೈನಲ್‌ಗೆ ಪ್ರೇರಣಾ, ನತಾಶಾ

ಆರ್‌ಜಿಯುಎಚ್‌ಎಸ್‌ ಐಟಿಎಫ್ ಕಲಬುರ್ಗಿ ಓಪನ್‌

ಕೃಷ್ಣಕುಮಾರ್ ಪಿ.ಎಸ್.
Published 27 ನವೆಂಬರ್ 2015, 19:46 IST
Last Updated 27 ನವೆಂಬರ್ 2015, 19:46 IST

ಕಲಬುರ್ಗಿ: ಟೂರ್ನಿಯ ಮೊದಲೆರಡು ಶ್ರೇಯಾಂಕಿತರಾದ ಪ್ರೇರಣಾ ಭಾಂಬ್ರಿ ಹಾಗೂ ನತಾಶಾ ಪಲಾ ಇಲ್ಲಿನ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣದ ಟೆನಿಸ್‌ ಅಂಗಣದಲ್ಲಿ ನಡೆಯುತ್ತಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್‌) ಪ್ರಾಯೋಜಕತ್ವದ  10 ಸಾವಿರ ಡಾಲರ್ ಮೊತ್ತದ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಫೈನಲ್‌ ಹಂತಕ್ಕೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತೆ ನತಾಶಾ ಪಲಾ 6–1,6–3ರಲ್ಲಿ ಏಳನೇ ಶ್ರೇಯಾಂಕಿತೆ ಈತಿ ಮಹೆತಾ ವಿರುದ್ಧ ಗೆದ್ದು ಐದನೇ ಬಾರಿ ಐಟಿಎಫ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ ಹಂತದ ವರೆಗಿನ ಎಲ್ಲಾ ಪಂದ್ಯಗಳನ್ನು ಸುಲಭವಾಗಿ ಗೆಲ್ಲುತ್ತಾ ಬಂದಿದ್ದ ಗುಜರಾತಿನ ಈತಿ ಮಹೆತಾಗೆ ಸೆಮಿಫೈನಲ್‌ನಲ್ಲಿ ನತಾಶಾ ಆಟದ ಮುಂದೆ ನಿಲ್ಲಲಾಗಲಿಲ್ಲ.

ಮೊದಲ ಸೆಟ್‌ನ ಆರಂಭದ ಮೂರು ಗೇಮ್‌ಗಳನ್ನು ಗೆದ್ದ ನತಾಶಾ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ನಾಲ್ಕನೇ ಗೇಮ್‌ನಲ್ಲಿ ಸರ್ವಿಸ್‌ ಉಳಿಸಿಕೊಂಡ ಈತಿ 1–3ರಲ್ಲಿ ಸೆಟ್‌ನಲ್ಲಿ ಮರುಹೋರಾಟಕ್ಕೆ ಸಿದ್ಧರಾದರು. ಆದರೆ ತನ್ನ ಪೂರ್ಣ ಫಾರ್ಮ್‌ನಲ್ಲಿದ್ದ ನತಾಶಾ ಕೊನೆಯ ಮೂರು ಗೇಮ್‌ಗಳನ್ನು ಗೆದ್ದು ಮೊದಲ ಸೆಟ್‌ ತಮ್ಮದಾಗಿಸಿಕೊಂಡರು. ಎರಡನೆ ಸೆಟ್‌ನಲ್ಲಿಯೂ ನತಾಶಾ ಆಕ್ರಮಣಕಾರಿ ಆಟವಾಡಿ ಎದುರಾಳಿಗೆ ಯಾವುದೇ ಅವಕಾಶ ನೀಡದೆ ಸೆಟ್‌ ಹಾಗೂ ಪಂದ್ಯ ಗೆದ್ದು ಪ್ರಶಸ್ತಿಯ ಹಂತಕ್ಕೆ ಪ್ರವೇಶಿಸಿದರು.

ಎರಡನೆ ಸೆಮಿಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್‌ನ ತಮಚಾನ್‌ ಮೊಮ್ಕೂಂತೊಡ್‌ ಅವರನ್ನು ಪ್ರೇರಣಾ ಭಾಂಬ್ರಿ ಸುಲಭವಾಗಿ ಬೇಟೆಯಾಡಿ 6–1,6–2ರಲ್ಲಿ ಸೋಲಿಸುವ ಮೂಲಕ ಕಲಬುರ್ಗಿ ಟೆನಿಸ್‌ ಅಂಗಣದಲ್ಲಿ ಮೂರನೇ ಸಲ ಪ್ರಶಸ್ತಿ ಗೆಲ್ಲಲು ಸಿದ್ದರಾಗಿದ್ದಾರೆ.

ಒಳ್ಳೆಯ ಪ್ರತಿರೋಧ ತೋರಿಸುವಲ್ಲಿ ವಿಫಲರಾದ ಎಡಗೈ ಆಟಗಾರ್ತಿ ತಮಚಾನ್‌ ಮೊದಲ ಸೆಟ್‌ನ ಎರಡನೇ ಗೇಮ್‌ನ ಸರ್ವಿಸ್‌ ಮಾತ್ರ ಉಳಿಸಿಕೊಳ್ಳುವಲ್ಲಿ ಸಫಲರಾದರು. ಎದುರಾಳಿಯ ಸರ್ವಿಸ್‌ ಬ್ರೇಕ್‌ ಮಾಡುತ್ತಾ ಮತ್ತು ತಮ್ಮ ಸರ್ವಿಸ್‌ಗಳನ್ನು ಉಳಿಸಿಕೊಳ್ಳುತ್ತಾ ಸೆಟ್‌ನ ಕೊನೆಯ ಐದು ಗೇಮ್‌ಗಳನ್ನು ನಿರಂತರವಾಗಿ ಗೆದ್ದು ಟೂರ್ನಿಯ ನೆಚ್ಚಿನ ಆಟಗಾರ್ತಿ ಎಂದು ಸಾಬೀತು ಪಡಿಸಿದರು.

ಧೃತಿ–ಕರ್ಮನ್‌ ಜೋಡಿಗೆ ಡಬಲ್ಸ್‌: ಶುಕ್ರವಾರ ನಡೆದ ರೋಚಕ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಧೃತಿ ತಾತಾಚಾರ್‌ ವೇಣುಗೋಪಾಲ್–ಕರ್ಮನ್‌ ಕೌರ್‌ ಜೊಡಿ ಕಲಬುರ್ಗಿಯಲ್ಲಿ ಟೂರ್ನಿಯ ಡಬಲ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿದರು.
ಈತಿ ಮಹೆತಾ ಮತ್ತು ನಿಧಿ ಚಿಲುಮುಲ ಜೋಡಿಯನ್ನು 6–4, 6–7(5),10–7 ರಲ್ಲಿ ಸೋಲಿಸಿ ಧೃತಿ–ಕರ್ಮನ್‌ ಜೋಡಿ ಕಲಬುರ್ಗಿಯಲ್ಲಿ ಸತತ ಎರಡನೇ ಡಬಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.