ADVERTISEMENT

ಫೈನಲ್‌ ಪ್ರವೇಶಿಸಿದ ಆರ್‌ಸಿಬಿ

ಡಿವಿಲಿಯರ್ಸ್‌, ಇಕ್ಬಾಲ್‌ ಆಟಕ್ಕೆ ಶರಣಾದ ಲಯನ್ಸ್‌, ಚಿನ್ನಸ್ವಾಮಿ ಅಂಗಳದಲ್ಲಿ ಎಬಿಡಿ ಮೇನಿಯಾ

ಪ್ರಮೋದ ಜಿ.ಕೆ
Published 24 ಮೇ 2016, 20:10 IST
Last Updated 24 ಮೇ 2016, 20:10 IST
ಫೈನಲ್‌ ಪ್ರವೇಶಿಸಿದ ಆರ್‌ಸಿಬಿ
ಫೈನಲ್‌ ಪ್ರವೇಶಿಸಿದ ಆರ್‌ಸಿಬಿ   

ಬೆಂಗಳೂರು: ಇಬ್ಬರು ಬ್ಯಾಟ್ಸ್‌ಮನ್‌ಗಳು. ಒಬ್ಬ ಬೌಲರ್‌. 35,000 ಜನ ಫೀಲ್ಡರ್‌ಗಳು!

ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿ ಎ.ಬಿ ಡಿವಿಲಿಯರ್ಸ್ ಮತ್ತು ಇಕ್ಬಾಲ್ ಅಬ್ದುಲ್ಲಾ ಅವರು ಮೈದಾನದ ಮೂಲೆ ಮೂಲೆಗಳಿಗೆ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದಾಗ ಕ್ರೀಡಾಂಗಣದಲ್ಲಿರುವ ಎಲೆಕ್ರ್ಟಾನಿಕ್‌ ಬೋರ್ಡ್‌ನ ಮೇಲೆ ಕಾಣಿಸಿಕೊಂಡ ಸಂದೇಶವಿದು. ಇವರ ಬ್ಯಾಟಿಂಗ್ ಅಬ್ಬರ ಹೇಗಿತ್ತು ಎನ್ನುವುದಕ್ಕೆ ಮೇಲಿನ ಸಂದೇಶವೇ ಸಾಕ್ಷಿ.

ಸುನಾಮಿಯ ಅಲೆಗಳಂತೆ ಅಪ್ಪಳಿಸಿದ ಲಯನ್ಸ್‌ ತಂಡದ ಧವಳ್‌ ಕುಲಕರ್ಣಿ ಚುರುಕಿನ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇವರು ಐಪಿಎಲ್ ಒಂಬತ್ತನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ನಾಲ್ಕು ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಇದರಿಂದ ಬೆಂಗಳೂರಿನ ತಂಡ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದದ್ದು ಅಮೋಘ ಹೋರಾಟ. ಡಿವಿಲಿಯರ್ಸ್‌ ಮತ್ತು ಅಬ್ದುಲ್ಲಾ ಅವರು ಕಟ್ಟಿದ್ದು ಪ್ರತಿಯೊಬ್ಬ ಕ್ರಿಕೆಟ್‌ ಪ್ರೇಮಿಯೂ ಜೀವನಪೂರ್ತಿ ನೆನಪಿನಲ್ಲಿಡಬೇಕಾದ ಅತ್ಯದ್ಭುತ ಇನಿಂಗ್ಸ್‌.

ಚೊಚ್ಚಲ ಟ್ರೋಫಿ ಗೆಲ್ಲುವ ಆಸೆ ಹೊಂದಿರುವ ಆರ್‌ಸಿಬಿ ಈ ಬಾರಿಯ ಟೂರ್ನಿಯ ಹಿಂದಿನ ಪಂದ್ಯಗಳಲ್ಲಿ ಗುರಿ ಬೆನ್ನು ಹತ್ತಿ ಗೆಲುವು ಪಡೆದದ್ದೇ ಹೆಚ್ಚು. ಆದ್ದರಿಂದ ನಾಯಕ ವಿರಾಟ್‌ ಕೊಹ್ಲಿ ಮಂಗಳವಾರ ರಾತ್ರಿ ಟಾಸ್‌ ಗೆದ್ದು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಲಯನ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಆ್ಯರನ್‌ ಫಿಂಚ್‌, ಬ್ರೆಂಡನ್ ಮೆಕ್ಲಮ್‌ ಮತ್ತು ಸುರೇಶ್ ರೈನಾ  ಬೇಗನೆ ವಿಕೆಟ್‌ ಒಪ್ಪಿಸಿದರು. ಆದ್ದರಿಂದ ಈ ತಂಡ ಸಾಕಷ್ಟು ಪರದಾಡಿ ಅಂತಿಮವಾಗಿ 20 ಓವರ್‌ಗಳಲ್ಲಿ 158 ರನ್ ಕಲೆ ಹಾಕಿ ಆಲೌಟ್‌ ಆಯಿತು.

ಈ ಗುರಿಯನ್ನು ಆರ್‌ಸಿಬಿ 18.2 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಮುಟ್ಟಿ ಐಪಿಎಲ್‌ನಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸಿತು. ಈ ತಂಡ 2009 ಮತ್ತು 2011ರ ಟೂರ್ನಿಗಳಲ್ಲಿಯೂ ಪ್ರಶಸ್ತಿ ಸುತ್ತು ತಲುಪಿತ್ತು.

ಚುರುಕಿನ ಬೌಲಿಂಗ್‌: ಆರ್‌ಸಿಬಿ ಬೌಲರ್‌ಗಳು ಮೊದಲ 15 ಓವರ್‌ಗಳಲ್ಲಿ ಕರಾರುವಾಕ್ಕಾದ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದರು. ಮೊದಲ ಐದು ಓವರ್‌ಗಳು ಪೂರ್ಣಗೊಂಡಾಗ ಲಯನ್ಸ್‌ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ತಂಡದ ಖಾತೆಯಲ್ಲಿ ಇದ್ದಿದ್ದು 20 ರನ್ ಮಾತ್ರ.

ಐಪಿಎಲ್‌ನಲ್ಲಿ ಮೊದಲ ಓವರ್‌ನಿಂದಲೇ ಸಿಕ್ಸರ್‌ಗಳ ಮಳೆ ಸುರಿಯುತ್ತಿದೆ. ಆದರೆ ಈ ಪಂದ್ಯದಲ್ಲಿ ಮೊದಲ ಸಿಕ್ಸರ್‌ ದಾಖಲಾಗಲು ಏಳು ಓವರ್‌ಗಳವರೆಗೆ ಕಾಯಬೇಕಾಯಿತು. ಆರ್‌ಸಿಬಿ ತಂಡದ ಇಕ್ಬಾಲ್‌ ಅಬ್ದುಲ್ಲಾ ಮತ್ತು ವೇಗಿ ಶೇನ್‌ ವ್ಯಾಟ್ಸನ್‌ ಚುರುಕಿನ ಬೌಲಿಂಗ್ ಮಾಡಿ ಲಯನ್ಸ್‌ ಗರ್ಜಿಸದಂತೆ ನೋಡಿಕೊಂಡರು.

ಬೇಗನೆ ವಿಕೆಟ್ ಕಳೆದುಕೊಂಡ ಕಾರಣ ಲಯನ್ಸ್‌ ನೂರು ರನ್‌ ಒಳಗೆ ಆಲೌಟ್‌ ಆಗುವ ಆತಂಕಕ್ಕೆ ಸಿಲುಕಿತ್ತು. ಈ ವೇಳೆ ದಿನೇಶ್ ಕಾರ್ತಿಕ್‌ ಮತ್ತು ಡ್ವೇನ್ ಸ್ಮಿತ್‌ ಸೊಗಸಾದ ಇನಿಂಗ್ಸ್‌ ಕಟ್ಟಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

30 ಎಸೆತಗಳನ್ನು ಎದುರಿಸಿದ ಕಾರ್ತಿಕ್‌ ಎರಡು ಬೌಂಡರಿ ಸೇರಿದಂತೆ 26 ರನ್ ಕಲೆ ಹಾಕಿದರು. ಸ್ಮಿತ್‌ 41 ಎಸೆತಗಳಲ್ಲಿ 73 ರನ್ ಬಾರಿಸಿದರು. ಐದು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಸಿಡಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 85 ರನ್ ಕಲೆ ಹಾಕಿತು. ಲಯನ್ಸ್ ತಂಡ ಒಟ್ಟು ನೂರು ರನ್‌ಗಳನ್ನು ಗಳಿಸಲು 14.3 ಓವರ್‌ಗಳನ್ನು ತೆಗೆದುಕೊಂಡಿತು. ಕೊನೆಯ ಐದು ಓವರ್‌ಗಳಲ್ಲಿ 54 ರನ್ ಕಲೆ ಹಾಕಿ ಅಬ್ಬರಿಸಿತು.

ವ್ಯಾಟ್ಸನ್‌ ಮಿಂಚು: ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಚುರುಕಿನ ಬೌಲಿಂಗ್ ಮಾಡಿದ್ದ ಆರ್‌ಸಿಬಿ ಕ್ವಾಲಿಫೈಯರ್‌ನಲ್ಲಿಯೂ ಇದೇ ವಿಭಾಗದಲ್ಲಿ ಮಿಂಚಿತು.

ಇಕ್ಬಾಲ್‌ ಅಬ್ದುಲ್ಲಾ ಆರಂಭದಲ್ಲಿಯೇ ಎರಡು ವಿಕೆಟ್ ಪಡೆದರೆ, ಕ್ರಿಸ್‌ ಜೋರ್ಡಾನ್‌ ಕೂಡ ಇಷ್ಟೇ ವಿಕೆಟ್‌ ಕಬಳಿಸಿದರು. ವ್ಯಾಟ್ಸನ್‌ ನಾಲ್ಕು ವಿಕೆಟ್‌ ಉರುಳಿಸಿ ಲಯನ್ಸ್ ತಂಡದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು.

ಆತಂಕ, ಖುಷಿ, ಸಂಭ್ರಮ: ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಆರ್‌ಸಿಬಿ ತಂಡ ಮೊದಲ ಆರು ಓವರ್‌ಗಳು ಮುಗಿಯವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸಂಕಷ್ಟಕ್ಕೆ ಸಿಲುಕಿತ್ತು.

ಈ ಬಾರಿಯ ಐಪಿಎಲ್‌ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಅಬ್ಬರಿಸಿದ್ದ ಕೊಹ್ಲಿ, ಕೆ.ಎಲ್‌. ರಾಹುಲ್ ಮತ್ತು ಶೇನ್‌ ವ್ಯಾಟ್ಸನ್‌ ವಿಫಲರಾದರು. ಕ್ರಿಸ್‌ ಗೇಲ್‌ ನೀರಸ ಬ್ಯಾಟಿಂಗ್ ಮಹತ್ವದ ಪಂದ್ಯದಲ್ಲಿಯೂ ಮುಂದುವರಿಯಿತು.

ಮೊದಲ ಆರು ಓವರ್‌ಗಳು ಮುಗಿಯುವ ವೇಳೆಗೆ ಮೇಲಿನ ಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ದರು.

ಆದ್ದರಿಂದ ಆರ್‌ಸಿಬಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಬಹುತೇಕರು ಅಂದುಕೊಂಡು ಮೈದಾನದಿಂದ ಹೊರನಡೆದಿದ್ದರು. ಆದರೆ ಏಳನೇ ವಿಕೆಟ್‌ಗೆ ಡಿವಿಲಿಯರ್ಸ್ ಮತ್ತು ಅಬ್ದುಲ್ಲಾ ಜೋಡಿ ಮಾಡಿದ ಮೋಡಿ ಅಭಿಮಾನಿಗಳನ್ನು ತಬ್ಬಿಬ್ಬುಗೊಳಿಸಿತು.

ಡಿವಿಲಿಯರ್ಸ್‌ (ಔಟಾಗದೆ 79, 47ಎಸೆತ, 5 ಬೌಂಡರಿ, 5ಸಿಕ್ಸರ್‌) ಮತ್ತು ಅಬ್ದುಲ್ಲಾ (ಔಟಾಗದೆ 33, 25ಎ., 3 ಬೌಂ., 1ಸಿ.,) ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಈ ಜೋಡಿ ಸೃಜನಶೀಲತೆ ತೋರಿತು. ಇವರು ಏಳನೇ ವಿಕೆಟ್‌ಗೆ ಮರಿಯದ ಜೊತೆಯಾಟದಲ್ಲಿ 53 ಎಸೆತಗಳಲ್ಲಿ 91 ರನ್‌ ಕಲೆ ಹಾಕಿದರು.

ಒಂದೆಡೆ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸುತ್ತಿದ್ದರೂ ಡಿವಿಲಿಯರ್ಸ್ ಮಾತ್ರ ತಾಳ್ಮೆ ಕಳೆದುಕೊಳ್ಳಲಿಲ್ಲ. ಸ್ಟುವರ್ಟ್‌ ಬಿನ್ನಿ (21) ಜೊತೆ ಉತ್ತಮ ಜೊತೆಯಾಟವಾಡಿದರು. ಆರ್‌ಸಿಬಿ ತಂಡದ ಜಯಕ್ಕೆ ಕೊನೆಯ ಐದು ಓವರ್‌ಗಳಲ್ಲಿ 49 ರನ್ ಅಗತ್ಯವಿತ್ತು. ಡಿವಿಲಿಯರ್ಸ್‌ ಅವರ ಅಬ್ಬರ ಶುರುವಾಗಿದ್ದೇ ಕೊನೆಯಲ್ಲಿ. ಅಬ್ದುಲ್ಲಾ  ಒಂದೊಂದೇ ರನ್‌ ತೆಗೆದು ಡಿವಿಲಿಯರ್ಸ್‌ ಬ್ಯಾಟಿಂಗ್‌ಗೆ ಅವಕಾಶ ಕೊಡುತ್ತಿದ್ದರು. ಎಬಿಡಿ ಬೌಂಡರಿ, ಸಿಕ್ಸರ್‌ ಬಾರಿಸುತ್ತಿದ್ದರು.

ಇದರಿಂದ ಭಾರಿ ಖುಷಿಪಟ್ಟ ಅಭಿಮಾನಿಗಳು ಬೆಂಗಳೂರು ತಂಡ ಪಂದ್ಯ ಗೆಲ್ಲುವವರೆಗೂ ‘ಎಬಿಡಿ... ಎಬಿಡಿ... ಆರ್‌ಸಿಬಿ... ಆರ್‌ಸಿಬಿ’ ಎಂದು ಕೂಗಿ ಸಂಭ್ರಮಿಸಿದರು. ಡಿವಿಲಿಯರ್ಸ್‌ ಹಾಗೂ ಅಬ್ದುಲ್ಲಾ 16ನೇ ಓವರ್‌ನಲ್ಲಿ 16 ರನ್ ಬಾರಿಸಿ ಜಯದ ಹಾದಿಯನ್ನು ಸುಲಭ ಮಾಡಿದರು.

ಕ್ರಿಸ್‌ಗೆ ಕಚ್ಚಿಕೊಂಡು ಲಯನ್ಸ್ ಬೌಲರ್‌ಗಳ ಮರ್ಮವನ್ನು ಚೆನ್ನಾಗಿ ಅರಿತ ಅಬ್ದುಲ್ಲಾ ಕೂಡ ಎದುರಾಳಿ ತಂಡದ ಬೆವರಿಳಿಸಿದರು. ಈ ಬ್ಯಾಟ್ಸ್‌ಮನ್‌ 18ನೇ ಓವರ್‌ನಲ್ಲಿ ಹ್ಯಾಟ್ರಿಕ್‌ ಬೌಂಡರಿ ಬಾರಿಸಿ ಜಯ ಖಚಿತಪಡಿಸಿದರು.

19ನೇ ಓವರ್‌ನ ಎರಡನೇ ಎಸೆತದಲ್ಲಿ ಎರಡು ರನ್‌ ಬಾರಿಸಿ ಅಬ್ದುಲ್ಲಾ ಜಯ ತಂದುಕೊಟ್ಟರು. ಈ ವೇಳೆ ಆರ್‌ಸಿಬಿ ಆಟಗಾರರು ಮೈದಾನದೊಳಕ್ಕೆ ಬಂದು ಡಿವಿಲಿಯರ್ಸ್‌ ಮತ್ತು ಅಬ್ದುಲ್ಲಾ ಅವರನ್ನು ಬಿಗಿದಪ್ಪಿ ಸಂಭ್ರಮಿಸಿದರು. ವಿಜಯದ ಸಂಭ್ರಮ ಆಚರಿಸುವ ವೇಳೆ ನಾಯಕ ಕೊಹ್ಲಿ ಅವರ ಖುಷಿಗಂತೂ ಪಾರವೇ ಇರಲಿಲ್ಲ.

ಸ್ಕೋರ್‌ಕಾರ್ಡ್‌

ಗುಜರಾತ್‌ ಲಯನ್ಸ್‌  158  (20 ಓವರ್‌ಗಳಲ್ಲಿ)

ಆ್ಯರನ್‌ ಫಿಂಚ್‌್ ಸಿ. ಕ್ರಿಸ್‌ ಗೇಲ್‌ ಬಿ. ಇಕ್ಬಾಲ್‌ ಅಬ್ದುಲ್ಲಾ  04
ಬ್ರೆಂಡನ್‌ ಮೆಕ್ಲಮ್‌ ಸಿ. ಡಿವಿಲಿಯರ್ಸ್‌ ಬಿ. ಇಕ್ಬಾಲ್‌ ಅಬ್ದುಲ್ಲಾ  01
ಸುರೇಶ್‌ ರೈನಾ ಸಿ. ಅರವಿಂದ್ ಬಿ. ಶೇನ್‌ ವ್ಯಾಟ್ಸನ್‌  01
ದಿನೇಶ್‌ ಕಾರ್ತಿಕ್‌ ಬಿ. ಕ್ರಿಸ್‌ ಜೋರ್ಡಾನ್‌  26
ಡ್ವೇನ್‌ ಸ್ಮಿತ್‌ ಸಿ. ವಿರಾಟ್‌ ಕೊಹ್ಲಿ ಬಿ. ಯಜುವೇಂದ್ರ ಚಾಹಲ್‌  73
ರವೀಂದ್ರ ಜಡೇಜ ಸಿ. ಕ್ರಿಸ್‌ ಗೇಲ್‌ ಬಿ. ಶೇನ್‌ ವ್ಯಾಟ್ಸನ್‌  03
ಡ್ವೇನ್‌ ಬ್ರಾವೊ ಬಿ. ಶೇನ್‌ ವ್ಯಾಟ್ಸನ್‌  08
ಏಕಲವ್ಯ ದ್ವಿವೇದಿ ಸಿ. ವಿರಾಟ್‌ ಕೊಹ್ಲಿ ಬಿ. ಶೇನ್‌ ವ್ಯಾಟ್ಸನ್‌್  19
ಪ್ರವೀಣ್ ಕುಮಾರ್‌ ಬಿ. ಕ್ರಿಸ್‌ ಜೋರ್ಡಾನ್‌  01
ಧವಳ್‌ ಕುಲಕರ್ಣಿ ರನ್‌ ಔಟ್‌ (ಸಚಿನ್‌ ಬೇಬಿ/ರಾಹುಲ್‌)  10
ಶಹಬದ್‌ ಜಕಾತಿ ಔಟಾಗದೆ  01
ಇತರೆ:  (ಲೆಗ್‌ ಬೈ–6, ವೈಡ್‌–5)   11
ವಿಕೆಟ್‌ ಪತನ: 1–2 (ಮೆಕ್ಲಮ್‌; 1.1), 2–6 (ಫಿಂಚ್‌; 1.4), 3–9 (ರೈನಾ; 3.4), 4–94 (ಕಾರ್ತಿಕ್‌; 13.5), 5–107 (ಜಡೇಜ; 15.5), 6–115 (ಸ್ಮಿತ್‌; 16.3), 7–145 (ದ್ವಿವೇದಿ; 18.3), 8–145 (ಬ್ರಾವೊ;18.4), 9–156 (ಪ್ರವೀಣ್‌; 19.3), 10–158 (ಧವಳ್‌; 19.6).
ಬೌಲಿಂಗ್‌: ಎಸ್‌. ಅರವಿಂದ್‌ 3–0–13–0, ಇಕ್ಬಾಲ್‌ ಅಬ್ದುಲ್ಲಾ 4–0–38–2, ಶೇನ್‌ ವ್ಯಾಟ್ಸನ್‌ 4–0–29–4, ಕ್ರಿಸ್‌ ಜೋರ್ಡಾನ್‌ 4–0–26–2, ಯಜುವೇಂದ್ರ ಚಾಹಲ್‌ 4–0–42–1, ಸ್ಟುವರ್ಟ್ ಬಿನ್ನಿ 1–0–4–0.

ಆರ್‌ಸಿಬಿ  6 ಕ್ಕೆ 159    (18.2 ಓವರ್‌ಗಳಲ್ಲಿ)

ADVERTISEMENT

ಕ್ರಿಸ್‌ ಗೇಲ್‌ ಬಿ. ಧವಳ್‌ ಕುಲಕರ್ಣಿ  09
ವಿರಾಟ್‌ ಕೊಹ್ಲಿ ಬಿ. ಧವಳ್‌ ಕುಲಕರ್ಣಿ  00
ಎ.ಬಿ ಡಿವಿಲಿಯರ್ಸ್‌ ಔಟಾಗದೆ  79
ಕೆ.ಎಲ್‌. ರಾಹುಲ್‌ ಸಿ. ಡ್ವೇನ್‌ ಸ್ಮಿತ್‌ ಬಿ. ಧವಳ್ ಕುಲಕರ್ಣಿ  00
ಶೇನ್‌ ವ್ಯಾಟ್ಸನ್‌ ಸಿ. ಡ್ವೇನ್ ಸ್ಮಿತ್‌ ಬಿ. ರವೀಂದ್ರ ಜಡೇಜ  01
ಸಚಿನ್‌ ಬೇಬಿ ಸಿ. ಶಹದಬ್‌ ಜಕಾತಿ ಬಿ. ಧವಳ್‌ ಕುಲಕರ್ಣಿ  00
ಸ್ಟುವರ್ಟ್ ಬಿನ್ನಿ ಎಲ್‌ಬಿಡಬ್ಲ್ಯು ಬಿ. ರವೀಂದ್ರ ಜಡೇಜ  21
ಇಕ್ಬಾಲ್‌ ಅಬ್ದುಲ್ಲಾ ಔಟಾಗದೆ  33
ಇತರೆ:( ಲೆಗ್‌ ಬೈ–7, ವೈಡ್‌್–8, ನೋ ಬಾಲ್‌–1)  16
ವಿಕೆಟ್‌ ಪತನ:  1–12 (ಕೊಹ್ಲಿ; 1.2), 2–25 (ಗೇಲ್‌; 3.2), 3–25 (ರಾಹುಲ್‌; 3.3), 4–28 (ವ್ಯಾಟ್ಸನ್‌; 4.5), 5–29 (ಬೇಬಿ; 5.3), 6–68 (ಬಿನ್ನಿ; 9.4).
ಬೌಲಿಂಗ್‌: ಪ್ರವೀಣ್‌ ಕುಮಾರ್‌ 3.2–0–32–0, ಧವಳ್‌ ಕುಲಕರ್ಣಿ 4–1–14–4, ರವೀಂದ್ರ ಜಡೇಜ 4–0–21–2, ಶಹದಬ್‌ ಜಕಾತಿ 3–0–45–0, ಡ್ವೇನ್‌ ಬ್ರಾವೊ 3–0–26–0, ಡ್ವೇನ್‌ ಸ್ಮಿತ್‌ 1–0–14–0.

ಫಲಿತಾಂಶ:   ಆರ್‌ಸಿಬಿ ತಂಡಕ್ಕೆ 4 ವಿಕೆಟ್‌ ಜಯ ಹಾಗೂ ಫೈನಲ್ ಪ್ರವೇಶ.
ಪಂದ್ಯಶ್ರೇಷ್ಠ: ಎ.ಬಿ ಡಿವಿಲಿಯರ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.