ADVERTISEMENT

ಬಾಂಗ್ಲಾದೇಶ ಫೈನಲ್‌ಗೆ; ಲಂಕಾಗೆ ನಿರಾಸೆ

ನಿದಾಸ್ ಕಪ್‌ ಟ್ವೆಂಟಿ–20 ತ್ರಿಕೋನ ಕ್ರಿಕೆಟ್ ಸರಣಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 20:19 IST
Last Updated 16 ಮಾರ್ಚ್ 2018, 20:19 IST
ಬಾಂಗ್ಲಾದೇಶ ಫೈನಲ್‌ಗೆ; ಲಂಕಾಗೆ ನಿರಾಸೆ
ಬಾಂಗ್ಲಾದೇಶ ಫೈನಲ್‌ಗೆ; ಲಂಕಾಗೆ ನಿರಾಸೆ   

ಕೊಲಂಬೊ:ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್ ಇಕ್ಬಾಲ್ ಮತ್ತು ಆರನೇ ಕ್ರಮಾಂಕದ ಮಹಮ್ಮದುಲ್ಲಾ ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ಅವರ ಪರಿಣಾಮಕಾರಿ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ ನಿದಾಸ್ ಕಪ್‌ ತ್ರಿಕೋನ ಟ್ವೆಂಟಿ–20 ಸರಣಿಯ ಫೈನಲ್‌ಗೆ ಪ್ರವೇಶಿಸಿತು.

160 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡಕ್ಕೆ ತಮೀಮ್‌ (50; 42 ಎ, 2 ಸಿ, 4 ಬೌಂ) ಉತ್ತಮ ಬುನಾದಿ ಹಾಕಿಕೊಟ್ಟರು. 33 ರನ್‌ಗಳಿಗೆ ತಂಡ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗಲೂ ನಿರಾತಂಕವಾಗಿ ಬ್ಯಾಟಿಂಗ್ ಮಾಡಿದ ಅವರು ಮುಷ್ಫಿಕುರ್ ರಹೀಮ್ ಅವರ ಜೊತೆಗೂಡಿ ತಂಡವನ್ನು ನೂರರ ಸನಿಹ ಕೊಂಡೊಯ್ದರು. ಎಂಟು ರನ್‌ಗಳ ಅಂತರದಲ್ಲಿ ಮತ್ತೆ ಎರಡು ವಿಕೆಟ್ ಕಳೆದುಕೊಂಡಾಗ ಬಾಂಗ್ಲಾ ಆತಂಕಕ್ಕೆ ಒಳಗಾಯಿತು. ಆದರೆ 18 ಎಸೆತಗಳಲ್ಲಿ 43 ರನ್‌ ಗಳಿಸಿದ ಮಹಮ್ಮದುಲ್ಲಾ ಪಂದ್ಯದ ಗತಿಯನ್ನೇ ಬದಲಿಸಿದರು. ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಗಳಿಸಿ ಅಜೇಯರಾಗಿ ಉಳಿದ ಅವರು ಒಂದು ಎಸೆತ ಬಾಕಿ ಇರುವಾಗ ತಂಡಕ್ಕೆ ಜಯ ತಂದುಕೊಟ್ಟರು.

ಪೆರೇರದ್ವಯರ ಅಬ್ಬರ

ADVERTISEMENT

ಟಾಸ್‌ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್  ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದ ಶಿಸ್ತಿನ ಬೌಲಿಂಗ್‌ ದಾಳಿಗೆ ನಲುಗಿದ ಲಂಕಾ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಆದರೆ ಕುಶಾಲ್‌ ಪೆರೇರ (61; 40 ಎ, 1 ಸಿಕ್ಸರ್‌, 7 ಬೌಂ) ಮತ್ತು ತಿಸಾರ ಪೆರೇರ (58; 37 ಎ, 3 ಸಿ, 3 ಬೌಂ) ಎದುರಾಳಿಗಳ ದಾಳಿಯನ್ನು ಮೆಟ್ಟಿನಿಂತು ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

ಸಂಕ್ಷಿ‌ಪ್ತ ಸ್ಕೋರ್‌: ಶ್ರೀಲಂಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 159 (ಕುಶಾಲ್‌ ಮೆಂಡಿಸ್‌ 11, ಕುಶಾಲ್ ಪೆರೇರ 61, ತಿಸಾರ ಪೆರೇರ 58; ಮುಸ್ತಫಿಜುರ್ ರೆಹಮಾನ್‌ 39ಕ್ಕೆ2); ಬಾಂಗ್ಲಾದೇಶ: 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 160 (ತಮೀಮ್ ಇಕ್ಬಾಲ್‌ 50, ಶಬ್ಬೀರ್ ರೆಹಮಾನ್ 13, ಮುಷ್ಫಿಕುರ್ ರಹೀಮ್‌ 28, ಮಹಮ್ಮದುಲ್ಲಾ 43; ಅಖಿಲ ಧನಂಜಯ 37ಕ್ಕೆ2). ಫಲಿತಾಂಶ: ಬಾಂಗ್ಲಾದೇಶಕ್ಕೆ ಎರಡು ವಿಕೆಟ್ ಜಯ; ಫೈನಲ್‌ಗೆ ಪ್ರವೇಶ. ಫೈನಲ್ ಪಂದ್ಯ: ಭಾರತ–ಬಾಂಗ್ಲಾದೇಶ; ಮಾರ್ಚ್‌ 18, ಸಂಜೆ 7.00.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.