ADVERTISEMENT

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಮುಂಬೈ (ಐಎಎನ್‌ಎಸ್): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಪಟ್ಟಕ್ಕೆ ಶಶಾಂಕ್ ಮನೋಹರ್ ಅವರನ್ನು ನೇಮಕ ಮಾಡಲು ವೇದಿಕೆ ಸಿದ್ಧವಾಗಿದೆ.

ಭಾನುವಾರ ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಶಶಾಂಕ್ ಮನೋ ಹರ್ ಸರ್ವಾನುಮತದ ಅಭ್ಯರ್ಥಿಯಾಗಿ ನೇಮಕಗೊಳ್ಳಲಿದ್ದಾರೆ. ಎರಡು ವಾರಗಳ ಹಿಂದೆ ಜಗಮೋಹನ್ ದಾಲ್ಮಿಯ ಅವರ ನಿಧನದಿಂದ ಬಿಸಿಸಿಐ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಅದಕ್ಕಾಗಿ ಎನ್. ಶ್ರೀನಿವಾಸನ್, ಶರದ್ ಪವಾರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಅನು ರಾಗ್ ಠಾಕೂರ್ ಅವರ ಆಪ್ತ ಬಣಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೆರೆಮ ರೆಯ ಸ್ಪರ್ಧೆ ಏರ್ಪಟ್ಟಿತ್ತು.

ಅಂತಿಮವಾಗಿ ಅನುರಾಗ್ ಠಾಕೂರ್ ಮೇಲುಗೈ ಸಾಧಿಸಿ ದ್ದಾರೆ. ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮತ್ತು ಅವರ ಆಪ್ತ ವಲಯವನ್ನು ಬಿಸಿಸಿಐ ಅಧಿಕಾರ ಕೇಂದ್ರದಿಂದ ದೂರವಿಡುವ ಅವರ ಪ್ರಯತ್ನ ಬಹುತೇಕ ಫಲಿಸಿದಂತಾಗಿದೆ.

ಸೌರವ್‌ ಗಂಗೂಲಿಯಿಂದ ಪ್ರಸ್ತಾವ: ಶಶಾಂಕ್ ಮನೋಹರ್ ಅವರ ಹೆಸರನ್ನು ಪೂರ್ವ ವಲಯದ ಯಾವುದಾದರೂ ಕ್ಲಬ್ ಪ್ರಸ್ತಾವ ಮಾಡಬಹುದು ಎಂದು ಹೇಳಲಾಗಿತ್ತು.  ತ್ರಿಪುರ ಕ್ರಿಕೆಟ್ ಸಂಸ್ಥೆಯ ಹೆಸರು ದಟ್ಟವಾಗಿ ಕೇಳಿಬಂದಿತ್ತು.

ಆದರೆ, ಇದೀಗ  ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಮತ್ತು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾನುವಾರದ ಸಭೆಯಲ್ಲಿ ಶಶಾಂಕ್ ಅವರ    ಹೆಸರನ್ನು ಸೂಚಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಒಂದು ವಾರದ ಹಿಂದೆ ಅನುರಾಗ್ ಠಾಕೂರ್, ಮಾಜಿ ಖಜಾಂಚಿ ಶ್ರೀಕಾಂತ್ ಶಿರ್ಕೆ ಮತ್ತು ಶಶಾಂಕ್ ಮನೋಹರ್ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಚರ್ಚಿಸಿದ್ದರು.

ಈ ಸಂದರ್ಭದಲ್ಲಿ ಶಶಾಂಕ್ ಅವರನ್ನೇ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳು ವಂತೆ ಮನವೋಲಿಸುವ ಕಾರ್ಯವೂ ನಡೆದಿತ್ತು. ಈಗ ಶರದ್ ಪವಾರ್ ಅವರೂ ಶಶಾಂಕ್ ಅವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಒಟ್ಟು 29 ಮತದಾರರು ಇದ್ದಾರೆ.

ಶನಿವಾರ ಸಂಜೆಯವರೆಗೂ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗುವ ಕುರಿತು ಯಾರೂ  ನಾಮಪತ್ರ ಸಲ್ಲಿಸಿಲ್ಲ. ಆದ ಕಾರಣ ಶಶಾಂಕ್ ಅವರು ಅವಿರೋಧ ವಾಗಿ ಆಯ್ಕೆಯಾಗುವ ಸಂಭವವೇ ಹೆಚ್ಚಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಐಸಿಸಿ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರು ಈ ಸಭೆಯಲ್ಲಿ ಭಾಗವಹಿಸುವಂತಿಲ್ಲ.  ಆದರೆ, ಅವರು ತಮ್ಮ ಮತ ಚಲಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.