ADVERTISEMENT

ಬಿಸಿಸಿಐ ಮೇಲೆ ‘ಸುಪ್ರೀಂ’ ಚಾಟಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 19:30 IST
Last Updated 28 ಸೆಪ್ಟೆಂಬರ್ 2016, 19:30 IST
ಬಿಸಿಸಿಐ ಮೇಲೆ ‘ಸುಪ್ರೀಂ’ ಚಾಟಿ
ಬಿಸಿಸಿಐ ಮೇಲೆ ‘ಸುಪ್ರೀಂ’ ಚಾಟಿ   

ನವದೆಹಲಿ: ‘ನ್ಯಾಯಾಲಯದ  ಆದೇಶಗಳನ್ನು ಧಿಕ್ಕರಿಸಿ ಸರ್ವಾಧಿಕಾರಿ ಯಂತೆ ವರ್ತಿಸುವುದನ್ನು ನಿಲ್ಲಿಸಿ. ನಿಮ್ಮನ್ನು ಹೇಗೆ ಹದ್ದು ಬಸ್ತಿನಲ್ಲಿಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು. ಅದಕ್ಕೆ ಅವಕಾಶ ನೀಡಬೇಡಿ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ಚಾಟಿ ಬೀಸಿದೆ.

‘ಸುಪ್ರೀಂ ನಿರ್ದೇಶನ ನೀಡಿದ್ದರೂ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ಹೀಗಾಗಿ ನ್ಯಾಯಾಂಗ ನಿಂದನೆ ಆರೋಪದಡಿ ಮಂಡಳಿಯನ್ನು ತಕ್ಷಣವೇ ‘ಸೂಪರ್‌ ಸೀಡ್‌’ ಮಾಡಬೇಕು’ ಎಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಲೋಧಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಆಗ್ರಹಿಸಿದ್ದಾರೆ.

ಬಿಸಿಸಿಐ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌, ನ್ಯಾಯಮೂರ್ತಿ ಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದ ತ್ರಿ ಸದಸ್ಯ ಪೀಠ ಲೋಧಾ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಅಕ್ಟೋಬರ್‌ 6ರ ಒಳಗೆ ವರದಿ ನೀಡುವಂತೆ ಸೂಚಿಸಿದೆ.

ಸೆಪ್ಟೆಂಬರ್‌ 21ರಂದು ನಡೆದ ವಾರ್ಷಿಕ ವಿಶೇಷ ಸಭೆಯಲ್ಲಿ ಕಾರ್ಯ ದರ್ಶಿ ಸ್ಥಾನಕ್ಕೆ ಅಜಯ್‌ ಶಿರ್ಕೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾ ಗಿತ್ತು. ಈ ಮೂಲಕ ಆಗಸ್ಟ್‌ 31ರಂದು ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ಬಿಸಿಸಿಐ ಗಾಳಿಗೆ ತೂರಿತ್ತು.

ಈ ಅಂಶ ಪ್ರಸ್ತಾಪವಾಗುತ್ತಿದ್ದಂತೆ ಸಿಡಿಮಿಡಿಗೊಂಡ ಪೀಠ ‘ನೀವು ನ್ಯಾಯಾಲಯಕ್ಕಿಂತಲೂ ದೊಡ್ಡವರೇನೂ ಅಲ್ಲ. ದೇಶದಲ್ಲಿ ನಿಮಗೇ ಪ್ರತ್ಯೇಕ ಕಾನೂನಿದೆಯೇ. ನೀವು ಒಕ್ಕೂಟ ವ್ಯವಸ್ಥೆಯಲ್ಲಿದ್ದೀರಿ ಎಂಬುದನ್ನು ಮರೆತುಬಿಟ್ಟಿದ್ದೀರಾ’ ಎಂದು  ಹರಿಹಾಯ್ದಿತು.

ಮುಖ್ಯಾಂಶಗಳು
* ಅಕ್ಟೋಬರ್‌ 6ರ ಒಳಗೆ ವರದಿ ನೀಡಲು ಸೂಚನೆ

* ಬಿಸಿಸಿಐ ಅನ್ನು ‘ಸೂಪರ್‌ ಸೀಡ್‌’ ಮಾಡಲು ಮನವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT