ADVERTISEMENT

ಬುಲ್ಸ್ ಹೋರಾಟಕ್ಕೆ ಒಲಿಯದ ಜಯ

ಪಂದ್ಯ ವೀಕ್ಷಿಸಿದ ಅಭಿಷೇಕ್ ಬಚ್ಚನ್, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಪ್ಯಾಂಥರ್ಸ್

ಗಿರೀಶದೊಡ್ಡಮನಿ
Published 13 ಜುಲೈ 2016, 20:22 IST
Last Updated 13 ಜುಲೈ 2016, 20:22 IST
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಜಸ್ವೀರ್‌ ಸಿಂಗ್‌ ಅವರನ್ನು ಬೆಂಗಳೂರು ಬುಲ್ಸ್‌ ತಂಡದ ಆಟಗಾರರು ಹಿಡಿತಕ್ಕೆ ಪಡೆದ ರೀತಿ  ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಜಸ್ವೀರ್‌ ಸಿಂಗ್‌ ಅವರನ್ನು ಬೆಂಗಳೂರು ಬುಲ್ಸ್‌ ತಂಡದ ಆಟಗಾರರು ಹಿಡಿತಕ್ಕೆ ಪಡೆದ ರೀತಿ ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌.   

ಬೆಂಗಳೂರು:  ತವರಿನ ಅಂಗಳದಲ್ಲಿ  ದಿಟ್ಟ ಹೋರಾಟ ನಡೆಸಿದ  ಬೆಂಗಳೂರು ಬುಲ್ಸ್ ತಂಡಕ್ಕೆ ಬುಧವಾರ ಅದೃಷ್ಟ ಜೊತೆಗೂಡಲಿಲ್ಲ. ಆದರೆ ಛಲದ ಆಟ ವಾಡಿದ ಜೈಪುರ್ ಪಿಂಕ್ ಪ್ಯಾಂಥರ್ಸ್‌ಗೆ ಜಯ ಒಲಿಯಿತು.

ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಉದ್ಯಾನನಗರಿಯ ಕಬಡ್ಡಿಪ್ರಿಯರಿಗೆ ಭರಪೂರ ಮನ ರಂಜನೆ ನೀಡಿದ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ 24–22 ರಿಂದ ಆತಿಥೇಯ ಬುಲ್ಸ್ ತಂಡಕ್ಕೆ ಸೋಲುಣಿಸಿತು.

ತಂಡದ ನಾಯಕ ಜಸ್ವೀರ್ ಸಿಂಗ್ (5 ಪಾಯಿಂಟ್) ಮತ್ತು ರಾಜೇಶ್ ನರ್ವಾಲ್ ಅವರ (5 ಪಾಯಿಂಟ್) ಅಮೋಘ ಆಟ ಪ್ಯಾಂಥರ್ಸ್ ಗೆಲುವಿಗೆ ಕಾರಣವಾಯಿತು. ಪ್ರೊ ಕಬಡ್ಡಿ ನಾಲ್ಕನೇ ಋತುವಿನಲ್ಲಿ ಸುರೇಂದರ್ ನಾಡಾ ನಾಯಕತ್ವದ ಬುಲ್ಸ್ ತಂಡಕ್ಕೆ ಇದು ಸತತ ನಾಲ್ಕನೇ ಸೋಲು. ಮಂಗಳವಾರ ತೆಲುಗು ಟೈಟನ್ಸ್ ಎದುರು ಎಂಟು ಪಾಯಿಂಟ್‌ ಗಳ ಅಂತರದಿಂದ ಶರಣಾಗಿತ್ತು. ಆ ಪಂದ್ಯವು ಏಕಪಕ್ಷೀಯವಾಗಿತ್ತು.

ಆದರೆ, ಬುಧವಾರ ಆತಿಥೇಯ ಬಳಗವು ದಿಟ್ಟ ಹೋರಾಟ ಮಾಡಿತು. ಬುಲ್ಸ್‌ನ ಆರಂಭವೂ ಚೆನ್ನಾಗಿತ್ತು. ರೋಹಿತ್ ಕುಮಾರ್ ತಮ್ಮ ಚುರುಕಿನ ದಾಳಿಯೊಂದಿಗೆ ಐದು ಪಾಯಿಂಟ್ ಗಳಿಸಿದರು. ದೀಪಕ್ ಕುಮಾರ್ ದಹಿಯಾ (3) ಮತ್ತು ಆಶಿಶ್ ಕುಮಾರ್ (2) ಅವರ ದಾಳಿ ಮತ್ತು ಮೋಹಿತ್ ಚಿಲ್ಲಾರ್ (3) ಅವರು ರಕ್ಷಣೆಯಲ್ಲಿ ತೋರಿದ ಆಟದಿಂದ ಬುಲ್ಸ್ ತಂಡವು ಗೆಲುವಿನ ಸನಿಹ ಬಂದಿತ್ತು. ಆದರೆ ಅದಋಷ್ಟ ಜೊತೆಗೂಡಲಿಲ್ಲ.

ಉತ್ತಮ ಆರಂಭ:  ಬೆಂಗಳೂರು ಬುಲ್ಸ್ ತಂಡದ ಆರಂಭವು ಚೆನ್ನಾಗಿತ್ತು.  ಎರಡನೇ ನಿಮಿಷದಲ್ಲಿ ದೀಪಕ್ ಕುಮಾರ್ ದಹಿಯಾ ಒಂದೇ ದಾಳಿಯಲ್ಲಿ ಮೂರು ಅಂಕಗಳನ್ನು ಗಳಿಸಿಕೊಂಡು ಬಂದಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿ ಸಿತ್ತು. ದಾಳಿಗೆ ಬಂದ ಪ್ಯಾಂಥರ್ಸ್ ರೈಡರ್ ತುಷಾರ್ ಪಾಟೀಲ ಅವರನ್ನೂ ಕಟ್ಟಿಹಾಕಿದರು. ನಂತರ ದಾಳಿಗೆ ಹೋದ ಆಶಿಶ್ ಕುಮಾರ್ ಕೂಡ ಒಂದು ಪಾಯಿಂಟ್ ಗಳಿಸಿ ಮರಳಿದರು. 5–1 ರವರೆಗೆ ಮುನ್ನಡೆ ಪಡೆಯಿತು.

ಆದರೆ, ನಂತರ ಎಚ್ಚೆತ್ತ ಪ್ಯಾಂಥರ್ಸ್ ಬಳಗವು ತಿರುಗೇಟು ನೀಡಲು ಆರಂಭಿ ಸಿತು. ಒಂದೊಂದೆ ಪಾಯಿಂಟ್ ಶೇಖರಿ ಸುತ್ತ ಮುನ್ನಡೆ ಸಾಧಿಸಿತು. ಐದೇ ನಿಮಿಷ ಗಳ ಅಂತರದಲ್ಲಿ 8–5ರ ಮುನ್ನಡೆ ಪಡೆಯಿತು. ಈ ಹಂತದಲ್ಲಿ ಬುಲ್ಸ್ ತಂಡಕ್ಕೆ ಒಂದೂ ಪಾಯಿಂಟ್ ಬಿಟ್ಟು ಕೊಡಲಿಲ್ಲ. ಇದು ಮೊದಲರ್ಧದ ವಿರಾಮದ ವೇಳೆಗೆ ಬುಲ್ಸ್ ತಂಡವು 9–15ರ ಹಿನ್ನಡೆ ಸಾಧಿಸಲು ಕಾರಣವಾಯಿತು.

ಪುಟಿದೆದ್ದ ಬುಲ್ಸ್: ವಿರಾಮದ ನಂತರದ ಆಟ ಮಾತ್ರ ಪ್ರೇಕ್ಷಕರು ಹುಚ್ಚೆದ್ದು ಕುಣಿಯುಂತೆ ಮಾಡಿತು. ಈ ಅವಧಿಯ ಮೊದಲ ದಾಳಿಯಲ್ಲಿಯೇ ರೋಹಿತ್ ಕುಮಾರ್ ಅವರು ಪ್ಯಾಂಥರ್ಸ್‌ನ ಇಬ್ಬರು ಆಟಗಾರರನ್ನು  ಮುಟ್ಟಿ ತಮ್ಮ ಅಂಕಣಕ್ಕೆ ಡೈವ್ ಮಾಡಿದರು. ಅಂಪೈರ್ ರಾಣಾ ರಂಜೀತ್ ಸಿಂಗ್ ಅವರು ಟಿವಿ ರಿಪ್ಲೆ ನಂತರ ಬುಲ್ಸ್‌ಗೆ ಎರಡು ಪಾಯಿಂಟ್ ನೀಡಿದರು.

ದಾಳಿಗೆ ಬಂದ ಅಜಯಕುಮಾರ್ ಅವರ ಕಾಲೆಳೆದ ಸುರೇಂದರ್ ನಾಡಾ ಬುಲ್ಸ್ ತಂಡದ ಖಾತೆಗೆ ಮತ್ತೊಂದು ಪಾಯಿಂಟ್ ಸೇರಿಸಿದರು. ದಾಳಿಗೆ ಇಳಿದ ಆಶಿಶ್ ಕುಮಾರ್ ಎರಡು ಪಾಯಿಂಟ್‌ ಗಳೊಂದಿಗೆ ಮರಳಿದರು. ಇದರಿಂದಾಗಿ ಪ್ಯಾಂಥರ್ಸ್ ಅಂಗಳ ಖಾಲಿಯಾಯಿತು. ಲೋನಾ ಪಾಯಿಂಟ್ಸ್ ಪಡೆದ ಬುಲ್ಸ್ 17–16ರ ಮುನ್ನಡೆ ಸಾಧಿಸಿತು.

ನಂತರ ಉಭಯ ತಂಡಗಳ ಜಿದ್ದಾ ಜಿದ್ದಿ ಮೇರೆ ಮಿರಿತು. ಮುನ್ನಡೆಯು ಒಮ್ಮೆ ಅತ್ತ, ಇನ್ನೊಮ್ಮೆ ಇತ್ತ ವಾಲಿತು. ಪಂದ್ಯದ ಮುಕ್ತಾಯಕ್ಕೆ ನಾಲ್ಕು ನಿಮಿಷ ಗಳು ಬಾಕಿಯಿದ್ದಾಗ ಉಭಯ ತಂಡ ಗಳು 21–21ರ ಸಮಬಲ ಸಾಧಿಸಿದ್ದವು. 38ನೇ ನಿಮಿಷದಲ್ಲಿ ದಾಳಿ ಮಾಡಿದ ಪ್ಯಾಂಥರ್ಸ್‌ನ ರಾಜೇಶ್ ನರ್ವಾಲ್ ಒಂದು ಪಾಯಿಂಟ್ ಗಳಿಸಿದರು. ಬುಲ್ಸ್‌ ರೈಡರ್ ಆಶಿಶ್ ಕುಮಾರ್ ಅವರನ್ನು ಮಹಿಪಾಲ್ ನರ್ವಾಲ್ ಕಟ್ಟಿ ಹಾಕಿದರು. ಇದರಿಂದ ಜೈಪುರ ತಂಡವು 23–21ರ ಮುನ್ನಡೆ ಗಳಿಸಿತು.

ಕೊನೆಯ 15 ಸೆಕೆಂಡುಗಳಿದ್ದಾಗ  ದಾಳಿ ಮಾಡಿದ ಪವನ್ ಕುಮಾರ್ ಅವರನ್ನೂ ಪ್ಯಾಂಥರ್ಸ್‌ ಪಡೆ ಹೆಡೆಮುರಿ ಕಟ್ಟತು. ಕೊನೆಯ ಸೆಕೆಂಡ್‌ನಲ್ಲಿ ದಾಳಿ ಮಾಡಿದ ಜಸ್ವೀರ್ ಸಿಂಗ್ ಅವರನ್ನು ಬುಲ್ಸ್ ಆಟಗಾರರು ಕಟ್ಟಿಹಾಕಿದರು. ಒಂದು ಪಾಯಿಂಟ್ ಲಭಿಸಿತು. ಅದು ಸೋಲಿನ ಅಂತರ ತಗ್ಗಿಸಲು ಮಾತ್ರ ಸಹಾಯಕವಾಯಿತು.

ಐಸ್‌ ದಿವಾಸ್‌ಗೆ ಎರಡನೇ ಜಯ
ಅಭಿಲಾಷಾ ಮಾತ್ರೆ ಅವರ ಐಸ್‌ ದಿವಾಸ್ ಬಳಗವು ಬುಧವಾರ ರಾತ್ರಿ  ವನಿತೆಯರ ಕಬಡ್ಡಿ ಚಾಲೆಂಜರ್ಸ್ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.

ಐಸ್‌ ದಿವಾಸ್ ವನಿತೆಯರ ತಂಡವು 24–14 ರಿಂದ ಅನುಭವಿ ಆಟಗಾರ್ತಿ ಮಮತಾ ಪೂಜಾರಿ ಅವರ ಫೈರ್ ಬರ್ಡ್ಸ್ ಬಳಗದ ವಿರುದ್ಧ ಜಯಿಸಿತು.  ಟೂರ್ನಿಯ ಮೊದಲ ಪಂದ್ಯದಲ್ಲಿ ಐಸ್ ದಿವಾಸ್ ಮಮತಾ ಬಳಗದ ಎದುರು ಸೋತಿತ್ತು. ಜೈಪುರದಲ್ಲಿ ತೇಜಸ್ವಿನಿಬಾಯಿ ನಾಯಕತ್ವದ ಸ್ಟಾರ್ಮ್ ಕ್ವೀನ್ಸ್‌ ಎದುರು ಗೆದ್ದಿದ್ದ ಐಸ್ ದಿವಾಸ್ ಬೆಂಗಳೂರಿನ ಅಂಗಳದಲ್ಲಿಯೂ ಮೆರೆಯಿತು.

ಆರಂಭದಿಂದಲೇ ಉತ್ತಮ ಆಟವಾಡಿದ ಐಸ್ ದಿವಾಸ್ ತಂಡದ ರೈಡರ್ ಮಿನಾಲ್ ಜಾಧವ್ (4ಪಾ) ಮತ್ತು ರಕ್ಷಣಾ ಆಟಗಾರ್ತಿ ಮೋನು (4 ಪಾ) ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಒಟ್ಟು ಹತ್ತು ಪಾಯಿಂಟ್ ಗಳಿಸಿರುವ ಐಸ್ ದಿವಾಸ್ ಅಗ್ರಸ್ಥಾನಕ್ಕೇರಿತು.
ಫೈರ್ ಬರ್ಡ್ಸ್‌ನ ಪ್ರಮುಖ ರೈಡರ್ ಕವಿತಾ ಠಾಕೂರ್ ಒಂದೂ ಪಾಯಿಂಟ್ ಗಳಿಸಲಿಲ್ಲ.

ADVERTISEMENT


ಗುರುವಾರದ ಪಂದ್ಯಗಳು.
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯು ಮುಂಬಾ (ರಾತ್ರಿ 8)
ಬೆಂಗಳೂರು ಬುಲ್ಸ್ ವಿರುದ್ಧ ಪಟ್ನಾ ಪೈರೆಟ್ಸ್ (ರಾತ್ರಿ 9).
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.