ADVERTISEMENT

ಬೆಂಗಳೂರಿನಲ್ಲಿ ಬ್ಯಾಸ್ಕೆಟ್‌ಬಾಲ್‌ ಅಕಾಡೆಮಿ

ಬಿಎಫ್‌ಐ ಅಧ್ಯಕ್ಷರಾಗಿ ಗೋವಿಂದರಾಜ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST
ಬೆಂಗಳೂರಿನಲ್ಲಿ ಬ್ಯಾಸ್ಕೆಟ್‌ಬಾಲ್‌ ಅಕಾಡೆಮಿ
ಬೆಂಗಳೂರಿನಲ್ಲಿ ಬ್ಯಾಸ್ಕೆಟ್‌ಬಾಲ್‌ ಅಕಾಡೆಮಿ   

ಬೆಂಗಳೂರು: ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಮತ್ತು ವಿಧಾನ ಪರಿಷತ್‌ ಸದಸ್ಯ ಕೆ. ಗೋವಿಂದರಾಜ್ ಅವರು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಏರಿದ ಮೊದಲ ಕನ್ನಡಿಗ ಇವರು.

ಶುಕ್ರವಾರ ನಗರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಎಂಟು ವರ್ಷಗಳಿಂದ ಬಿಎಫ್‌ಐ ಹಿರಿಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಗೋವಿಂದರಾಜ್‌ ಅವಿರೋಧವಾಗಿ ಆಯ್ಕೆಯಾದರು. ನಿರ್ಗಮಿತ ಅಧ್ಯಕ್ಷ ಆರ್‌.ಎಸ್‌. ಗಿಲ್‌ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. 2015ರಿಂದ 2019ರ ವರೆಗೆ ಇವರ ಅಧಿಕಾರವಧಿ ಇರುತ್ತದೆ.

ಇದೇ ವೇಳೆ ಚಂಡಿಗಡದ ಚಂದ್ರಮುಖಿ ಶರ್ಮಾ ಮಹಾ ಕಾರ್ಯದರ್ಶಿಯಾಗಿ ಮತ್ತು  ಪುದುಚೇರಿಯ ವಿ. ರಘೋತ್ತಮನ್‌ ಖಚಾಂಚಿಯಾಗಿ ಆಯ್ಕೆಯಾದರು.
ನಿವೃತ್ತ ಐಎಎಸ್‌ ಅಧಿಕಾರಿ ಸಿದ್ದಯ್ಯ  ಚುನಾವಣಾ ಅಧಿಕಾರಿಯಾಗಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಚ್‌.ಎಸ್.  ವೆಂಕಟೇಶ್‌, ಕೇಂದ್ರ ಕ್ರೀಡಾ ಸಚಿವಾಲಯದ ಸತ್ಯಜಿತ್‌ ಸಂಕೀರ್ತ್‌ ಮತ್ತು ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ ಬಾಲ್‌ ಫೆಡರೇಷನ್‌ನ ಮಘೇಶ್ವರನ್‌ ಸಬಾ ಚುನಾವಣಾ ವೀಕ್ಷಕರಾಗಿದ್ದರು.

ಬೆಂಗಳೂರಿನಲ್ಲಿ ಅಕಾಡೆಮಿ: ‘ಈಗ ನನ್ನ ಜವಾಬ್ದಾರಿ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆ. ಬೆಂಗಳೂರಿನಲ್ಲಿ ಅಕಾಡೆಮಿ ಆರಂಭಿಸಲಾಗುವುದು’ ಎಂದು ನೂತನ ಅಧ್ಯಕ್ಷ ಗೋವಿಂದರಾಜ್‌  ಹೇಳಿದರು.

‘ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮೈಸೂರಿನಲ್ಲಿ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ನಡೆಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಟೂರ್ನಿಗಳನ್ನು ಆಯೋಜಿಸಲು ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಸ್ಥಳೀಯರ ಬೆಂಬಲ ಅಗತ್ಯವಿದೆ’ ಎಂದೂ ನುಡಿದರು.

ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಕೆ. ಗೋವಿಂದರಾಜ್‌ (ಕರ್ನಾಟಕ). ಹಿರಿಯ ಉಪಾಧ್ಯಕ್ಷರು: ತೇಜ್‌ಸಿಂಗ್‌ ದಾಲಿವಾಲ್‌ (ಪಂಜಾಬ್‌). ಉಪಾಧ್ಯಕ್ಷರು: ಅಜಯ್‌ ಸೂದ್‌ (ಹಿಮಾಚಲ ಪ್ರದೇಶ), ಡಿ.ಆರ್‌. ಸೈನಿ (ದೆಹಲಿ), ಶಫೀಕ್‌ ಶೇಖ್‌ (ಗುಜರಾತ್), ಭೂಪೇಂದ್ರ ಷಾಹಿ (ಉತ್ತರ ಪ್ರದೇಶ), ಎಲ್‌. ಸುರೇನ್‌ (ತಮಿಳುನಾಡು). ಮಹಾ ಕಾರ್ಯದರ್ಶಿ: ಚಂದ್ರಮುಖಿ ಶರ್ಮಾ (ಚಂಡಿಗಡ). ಸಹ ಕಾರ್ಯದರ್ಶಿಗಳು: ಶಕ್ತಿಸಿಂಗ್‌ ಗೋಹಿಲ್‌ (ಗುಜರಾತ್‌), ಜುಗರಾಜ್‌ ಸಿಂಗ್‌ (ಚಂಡಿಗಡ), ರಾಲಿನ್ ಡಿಸೋಜಾ (ಗೋವಾ), ಟಿ. ಚಂಗಲರಾಯ ನಾಯ್ಡು (ಆಂಧ್ರ). ಖಚಾಂಚಿ: ವಿ. ರಘೋತ್ತಮನ್ (ಪುದುಚೇರಿ). ಕಾರ್ಯಕಾರಿ ಸಮಿತಿ ಸದಸ್ಯರು: ಮುನೀಷ್‌ ಶರ್ಮ (ಹಿಮಾಚಲ ಪ್ರದೇಶ), ಆ್ಯಷ್ಲೆ ರೊಸಾರಿಯೊ (ಗೋವಾ), ಟಿ.ಎ. ಆಂಧ್ರಪತಿ (ತಮಿಳುನಾಡು), ಟಿವಿಎಸ್‌ಎನ್  ಪ್ರಸಾದ್ (ಆಂಧ್ರ), ನರ್ಮನ್‌ ಐಸಾಕ್‌ (ತೆಲಂಗಾಣ) ಪ್ರಕಾಶ್‌ ಪಿ. ಸಂಧು (ಪುದುಚೇರಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.