ADVERTISEMENT

ಭಾರತಕ್ಕೆ ಐದು ಪದಕ ಖಚಿತ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ಗುವಾಹಟಿ: ಭಾರತದ ಬಾಕ್ಸರ್‌ಗಳು ಮಹಿಳೆಯರ ಎಐಬಿಎ ಯೂತ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಮೂಲಕ ಒಟ್ಟು ಐದು ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.

ಹಿಂದಿನ ಟೂರ್ನಿಗಳಿಗೆ ಹೋಲಿಸಿದರೆ ಭಾರತದ ಅತ್ಯುತ್ತಮ ಸಾಧನೆ ಇದಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಜಯದಾಖಲಿಸಿದ ಭಾರತದ ಜ್ಯೋತಿ ಗುಲಿಯಾ (51ಕೆ.ಜಿ), ಶಶಿ ಚೋಪ್ರಾ (57ಕೆ.ಜಿ), ಅಂಕುಶಿತಾ ಬೋರಾ (64ಕೆ.ಜಿ) ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ.

ಈಗಾಗಲೇ ನೇಹಾ ಯಾದವ್‌ (81ಕೆ.ಜಿ) ಹಾಗೂ ಅನುಪಮಾ (81ಕೆ.ಜಿ) ಸೆಮಿಫೈನಲ್ ತಲುಪಿದ್ದಾರೆ.

ADVERTISEMENT

ಮೊದಲ ಪಂದ್ಯ ಆಡಿದ ಗುಲಿಯಾ ಇಟಲಿಯ ಗಿವನ್ನಾ ಮಾರ್ಕೆಸ್‌ ವಿರುದ್ಧ ಜಯಭೇರಿ ದಾಖಲಿಸಿದರು. ಹರಿಯಾಣದ ಆಟಗಾರ್ತಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಐದು ಸುತ್ತುಗಳಲ್ಲಿಯೂ ಪ್ರಾಬಲ್ಯ ಮೆರೆದ ಅವರು 5–0ರಲ್ಲಿ ಎದುರಾಳಿಗೆ ಸೋಲುಣಿಸಿದರು.

ಚೋಪ್ರಾ ಹತ್ತನೇ ಶ್ರೇಯಾಂಕದ ಕಜಕಸ್ತಾನದ ಸಂದುಗಶ್‌ ಅದಿಲ್‌ಖಾನ್‌ ವಿರುದ್ಧ ಗೆದ್ದರು. ಹರಿಯಾಣದ ಬಾಕ್ಸರ್‌ 5–0ರಲ್ಲಿ ಏಕಪಕ್ಷೀಯವಾಗಿ ಪಂದ್ಯ ಗೆದ್ದರು. ಮೊದಲ ಮೂರು ನಿಮಿಷಗಳಲ್ಲಿ ಅದಿಲ್‌ಖಾನ್ ಅಮೋಘ ಹೋರಾಟ ನಡೆಸಿದರು. ಆದರೆ ಭಾರತದ ಬಾಕ್ಸರ್ ಎದುರು ಅವರ ತಂತ್ರಗಳು ಫಲಿಸಲಿಲ್ಲ.

ಅಂಕುಶಿತಾ ಎರಡು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಬೆಳ್ಳಿ ಗೆದ್ದಿದ್ದಾರೆ. ಸ್ಥಳೀಯ ಆಟಗಾರ್ತಿ ರೆಬೆಕಾ ನಿಕೋಲಿ ಎದುರು ಅಮೋಘ ಹೋರಾಟದ ಮೂಲಕ ಜಯದಾಖಲಿಸಿದರು. ಮೊದಲ ಎರಡು ಬೌಟ್‌ಗಳಲ್ಲಿ ಇಬ್ಬರು ಆಟಗಾರ್ತಿಯರು ಸಮಬಲ ಹೊಂದಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಭಾರತದ ಬಾಕ್ಸರ್‌ ಮಿಂಚಿದರು.

ನಿಹಾರಿಕಾಗೆ ಸೋಲು: ಮಹಿಳೆಯರ 75ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಿಹಾರಿಕಾ ಗೊನೆಲ್ಲಾ ಇಂಗ್ಲೆಂಡ್‌ನ ಜಾರ್ಜಿಯಾ ಕಾರ್ನರ್ ವಿರುದ್ಧ ಸೋಲು ಅನುಭವಿಸುವ ಮೂಲಕ ಪದಕ ಸುತ್ತು ತಲುಪುವಲ್ಲಿ ವಿಫಲರಾಗಿದ್ದಾರೆ.

2011ರ ಟೂರ್ನಿಯಲ್ಲಿ ಭಾರತ ಕೇವಲ ಒಂದು ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿ 38 ದೇಶಗಳ 150 ಬಾಕ್ಸರ್‌ಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.