ADVERTISEMENT

ಭಾರತಕ್ಕೆ ಮತ್ತೆರಡು ಬಂಗಾರದ ಪದಕ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 12:39 IST
Last Updated 2 ಅಕ್ಟೋಬರ್ 2014, 12:39 IST
ಎಪಿ ಚಿತ್ರ
ಎಪಿ ಚಿತ್ರ   

ಇಂಚೆನ್‌ (ಪಿಟಿಐ): ನಿರೀಕ್ಷೆ ಸುಳ್ಳಾಗಲಿಲ್ಲ. ಭಾರತದ ಹಾಕಿ ತಂಡವು   ಇಂಚೆನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್‌ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು  4–2 ಗೋಲುಗಳಿಂದ ಗೆಲುವು ದಾಖಲಿಸಿ ಚಿನ್ನದ ಸಾಧನೆ ತೋರಿತು.

ಈ ಮೂಲಕ 16 ವರ್ಷಗಳಿಂದ ಎದುರಾಗಿದ್ದ ಪದಕದ ಬರ ನೀಗುವ ಜೊತೆಗೆ 2016ರಲ್ಲಿ ನಡೆಯಲಿರುವ ರಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಿತು.

ಸೆಯೊನಹಾಕ್‌ ಕ್ರೀಡಾಂಗಣದಲ್ಲಿ ನಡೆದ  60 ನಿಮಿಷಗಳ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡು ಬಂತು.

ADVERTISEMENT

ಭಾರತದ ಪರ ಆಕಾಶದೀಪ್‌ ಸಿಂಗ್‌,ರೂಪಿಂದರ್‌ಪಾಲ್‌ ಸಿಂಗ್, ಬಿರೇಂದ್ರ ಲಕ್ರಾ ಹಾಗೂ ಧರ್ಮವೀರ್‌ ಸಿಂಗ್‌ ಅವರು ಗೋಲು ಗಳಿಸಿದರು.

ಆದರೆ ಗೆಲುವಿನ ಬಹುತೇಕ ಶ್ರೇಯ  ತಂಡದ ಉಪನಾಯಕರೂ ಆಗಿರುವ ಗೋಲ್ಕಿ ಪಿ.ಆರ್‌. ಶ್ರೀಜೇಶ್‌ ಅವರಿಗೆ ಸಲ್ಲಬೇಕು.

ಪಾಕಿಸ್ತಾನದ ಪರ ಮುಹಮ್ಮದ್ ವಕಾಸ್‌ ಹಾಗೂ ಶಫಕತ್‌ ರಸೂಲ್‌ ಅವರು ಗೋಲು ತಂದಿತ್ತರು.

1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಕೊನೆಯ ಬಾರಿಗೆ ಚಿನ್ನ ಗೆದ್ದಿತ್ತು.

ರಿಲೇಯಲ್ಲೂ ಬಂಗಾರ: ಇನ್ನು, ಕರ್ನಾಟಕದ ಎಂ.ಆರ್‌.ಪೂವಮ್ಮ ಅವರನ್ನೊಳಗೊಂಡ ಭಾರತದ ಮಹಿಳೆಯರ ತಂಡವು 4*400 ರಿಲೇಯಲ್ಲಿ ಸ್ವರ್ಣ ಸಾಧನೆ ಮಾಡಿತು.

ಪ್ರೀಯಾಂಕಾ ಪನ್ವರ್‌, ಟಿಂಟು ಲೂಕಾ, ಮನ್‌ದೀಪ್‌ ಕೌರ್‌ ಹಾಗೂ ಎಂ. ಆರ್‌. ಪೂವಮ್ಮ ಅವರಿದ್ದ ತಂಡವು 3:28.68 ನಿಮಿಷಗಳಲ್ಲಿ ಗುರಿ ಮುಟ್ಟಿ ಬಂಗಾರ ಗೆದ್ದಿತು. ಜಪಾನ್‌ ಬೆಳ್ಳಿ ಗೆದ್ದರೆ ಚೀನಾ ಕಂಚಿಗೆ ತೃಪ್ತಿ ಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.