ADVERTISEMENT

ಭಾರತದ ಮಡಿಲಿಗೆ ‘ಗಾಂಧಿ–ನೆಲ್ಸನ್’ ಟೆಸ್ಟ್‌ ಸರಣಿ

ಅಶ್ವಿನ್‌, ಮಿಶ್ರಾ ಸ್ಪಿನ್‌ ದಾಳಿಗೆ ದ.ಆಫ್ರಿಕಾ ಧೂಳಿಪಟ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 11:51 IST
Last Updated 27 ನವೆಂಬರ್ 2015, 11:51 IST

ನಾಗಪುರ (ಪಿಟಿಐ): ಆರ್. ಅಶ್ವಿನ್  (7/66)ಮತ್ತು ಅಮಿತ್‌ ಮಿಶ್ರಾ (3/51) ಸ್ಪಿನ್‌ ದಾಳಿಗೆ ತತ್ತರಿಸಿದ ಆಮ್ಲಾ ಪಡೆ, ಮಹಾತ್ಮಾ ಗಾಂಧಿ–ನೆಲ್ಸನ್ ಮಂಡೇಲಾ ಕ್ರಿಕೆಟ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಭಾರತಕ್ಕೆ 124ರನ್‌ಗಳಿಂದ ಶರಣಾಯಿತು.

ಈ ಮೂಲಕ ಭಾರತ, ‘ಅತ್ಯುತ್ತಮ ಪ್ರವಾಸಿ ಕ್ರಿಕೆಟ್ ತಂಡ’ ದಕ್ಷಿಣ ಆಫ್ರಿಕಾಕ್ಕೆ ಎಂಟು ವರ್ಷಗಳ ನಂತರ ಸರಣಿ ಸೋಲಿನ ಕಹಿ ಉಣಿಸಿ ( 2–0), ಗಾಂಧಿ–ನೆಲ್ಸನ್ ’ ಕ್ರಿಕೆಟ್‌ ಸರಣಿ ಕಪ್‌ ಎತ್ತಿ ಹಿಡಿಯಿತು. 

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ, ಸ್ವದೇಶದಲ್ಲಿ ಪಡೆಯುತ್ತಿರುವ ಮೊದಲ ಟೆಸ್ಟ್‌ ಸರಣಿ ಗೆಲುವು ಇದಾಗಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು ಮಳೆಯಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ 2ನೇ ಟೆಸ್ಟ್‌ ರದ್ದಾಗಿತ್ತು. ಇದೀಗ ಮೂರನೆಯ ಟೆಸ್ಟ್‌ ಕೂಡ ಭಾರತದ ಪಾಲಾಗಿದೆ.  ನಾಲ್ಕನೆಯ, ಅಂತಿಮ ಟೆಸ್ಟ್‌ ಡಿಸೆಂಬರ್‌ 3ರಂದು ದೆಹಲಿಯ ಫಿರೂಜ್‌ ಷಾ ಕೋಟ್ಲಾ ಅಂಗಳದಲ್ಲಿ ಆರಂಭಗೊಳ್ಳಲಿದೆ.

ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ, ಗುರುವಾರ ದಿನದಾಟದ ಅಂತ್ಯಕ್ಕೆ 14 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 31 ರನ್ ಗಳಿಸಿತ್ತು. ಗೆಲುವಿಗೆ ಇನ್ನೂ 8 ವಿಕೆಟ್‌ಗಳ ಮೂಲಕ 278 ರನ್ ಗಳಿಸಬೇಕಿತ್ತು. ಶುಕ್ರವಾರ ಈ ಮೊತ್ತಕ್ಕೆ 154 ರನ್‌ ಸೇರಿಸುವಷ್ಟರಲ್ಲಿ ಇನ್ನುಳಿದ ವಿಕೆಟ್‌ಗಳು ಪತನವಾದವು. ಹಾಶೀಮ್ ಆಮ್ಲಾ (39) ಮತ್ತು ಫಾಫ್ ಡು ಪ್ಲೆಸಿ (39) ರನ್‌ ಗಳಿಸಿದ್ದು ಬಿಟ್ಟರೆ ಪ್ರವಾಸಿ ತಂಡದ ಇನ್ನುಳಿದ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲು ಭಾರತದ ಸ್ಪಿನ್ನರ್‌ಗಳು ಬಿಡಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿದ್ದ ಚೆನ್ನೈ ಹುಡುಗ ಆರ್‌. ಅಶ್ವಿನ್‌ ಎರಡನೆಯ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಕಬಳಿಸುವ ಮೂಲಕ 3ನೇ ಟೆಸ್ಟ್‌ನಲ್ಲಿ ಒಟ್ಟು 12 ವಿಕೆಟ್ (12/98) ಪಡೆದ ಸಾಧನೆ ಮಾಡಿದರು.

ನಾಗಪುರದ ಜಮ್ತಾ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 79 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡವು ಹೊಸ ದಾಖಲೆ ಬರೆದಿತ್ತು.

ಭಾರತ ಮೊದಲ ಇನಿಂಗ್ಸ್‌  215  (78.2 ಓವರ್‌ಗಳಲ್ಲಿ)
ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್‌  79 (33.1  ಓವರ್‌ಗಳಲ್ಲಿ)
ಭಾರತ ಎರಡನೇ  ಇನಿಂಗ್ಸ್‌  173  (46.3ಓವರ್‌ಗಳಲ್ಲಿ)
ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್‌  185  (89.5 ಓವರ್‌ಗಳಲ್ಲಿ)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.