ADVERTISEMENT

ಭಾರತದ ಸವಾಲು ಅಂತ್ಯ

ಸುದಿರ್ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಗೆ ಚೀನಾ

ಪಿಟಿಐ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಭಾರತದ ಕೆ. ಶ್ರೀಕಾಂತ್‌ ಸರ್ವ್‌ ಮಾಡಲು ಮುಂದಾದ ರೀತಿ
ಭಾರತದ ಕೆ. ಶ್ರೀಕಾಂತ್‌ ಸರ್ವ್‌ ಮಾಡಲು ಮುಂದಾದ ರೀತಿ   

ಗೋಲ್ಡ್‌ಕೋಸ್ಟ್, ಆಸ್ಟ್ರೇಲಿಯಾ:   ಸುದಿರ್ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡದ ಹೋರಾಟವು ಶುಕ್ರವಾರ ಅಂತ್ಯಗೊಂಡಿತು.

ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡವು 0–3ರಿಂದ ಚೀನಾ ಎದುರು ಸೋತಿತು.  ವಿಶ್ವ ಕ್ರಮಾಂಕದಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ಚೀನಾ ತಂಡವನ್ನು ಸೋಲಿಸುವುದು ಭಾರತಕ್ಕೆ ಕಠಿಣ ಸವಾಲಾಗಿತ್ತು.  ಅದನ್ನು ಮೀರಿ ನಿಲ್ಲುವಲ್ಲಿ  ತಂಡವು ವಿಫಲವಾಯಿತು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಜೋಡಿಯು 21–16, 13–21, 16–21ರಿಂದ ಚೀನಾದ ಲೂ ಕೈ ಮತ್ತು ಹಾಂಗ್ ಯಾಕಿಯಾಂಗ್ ವಿರುದ್ಧ ಪರಾಭವಗೊಂಡರು. ಪುರುಷರ ಸಿಂಗಲ್ಸ್‌ನಲ್ಲಿ ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ 16–21,  17–21ರಿಂದ ಚೀನಾದ ಚೆನ್ ಲಂಗ್ ವಿರುದ್ಧ ಸೋತರು. 48 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ  ಒಲಿಂಪಿಕ್ಸ್‌ ಚಾಂಪಿ ಯನ್  ಲಂಗ್ ಅವರು  ಅಮೋಘ ಆಟವಾಡಿದರು. ಮಿಂಚಿನ ವೇಗದ ಸ್ಮ್ಯಾಷ್‌ಗಳ ಮೂಲಕ ಹೈದರಾಬಾದ್‌ನ ಶ್ರೀಕಾಂತ್ ಅವರನ್ನು ಮಣಿಸಿದರು.

ADVERTISEMENT

ಪುರುಷರ ಡಬಲ್ಸ್‌ನಲ್ಲಿಯೂ  ಭಾರತದ ಜೋಡಿ ನಿರಾಸೆ ಅನುಭವಿ ಸಿತು.  ಸಾತ್ವಿಕ್‌ ರಾಜ್ ಮತ್ತು ಚಿರಾಗ್ ಸೇನ್ 9–21, 11–21ರಿಂದ ಫು ಹೈಫೆಂಗ್‌ ಮತ್ತು ಝಾಂಗ್ ನಾನ್ ವಿರುದ್ಧ ಸೋಲನುಭವಿಸಿದರು.   ಹೊಂದಾಣಿಕೆಯ ಕೊರತೆ ಮತ್ತು ಚುರುಕಿನ ಆಟವಾಡುವಲ್ಲಿ ಭಾರತದ ಜೋಡಿಯು ವೈಫಲ್ಯ ಅನುಭವಿಸಿತು. ಅದರ ಸಂಪೂರ್ಣ ಪ್ರಯೋಜನ ಪಡೆದ ಚೀನಾದ ಆಟಗಾರರು ಜಯದತ್ತ ಸಾಗಿದರು. ಎರಡು ಗೇಮ್‌ಗಳಲ್ಲಿಯೂ ಚೀನಾದ ಆರ್ಭಟಕ್ಕೆ ಭಾರತದ ಜೋಡಿಯು ಸರಿಸಮಾನವಾಗಲಿಲ್ಲ.

ಇದರೊಂದಿಗೆ ಪಂದ್ಯದ  ಐದು ಸುತ್ತುಗಳ ಪಂದ್ಯದಲ್ಲಿ ಚೀನಾ ತಂಡವು 3–0 ಮುನ್ನಡೆ ಗಳಿಸಿತು. ಆದ್ದರಿಂದ ಇನ್ನುಳಿದ ಎರಡು ಪಂದ್ಯಗಳನ್ನು ಆಡಿಸ ಲಿಲ್ಲ.  ಅದರಿಂದಾಗಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಮತ್ತು ಮಹಿಳೆಯರ ಡಬಲ್ಸ್‌ ಪಂದ್ಯಗಳು ನಡೆಯಲಿಲ್ಲ.  ಈ ಟೂರ್ನಿಯಲ್ಲಿ ಭಾರತ ತಂಡವು ಎರಡನೇ ಬಾರಿ ಕ್ವಾರ್ಟರ್‌ಫೈನಲ್‌ ಹಂತ ಪ್ರವೇಶಿಸಿತ್ತು. 2011 ರಲ್ಲಿ  ಎಂಟರ ಘಟ್ಟದಲ್ಲಿ ಆಡಿತ್ತು.  ಆಗ 1–3 ರಿಂದ ಚೀನಾ ಎದುರು ಸೋತು ನಿರ್ಗಮಿಸಿತ್ತು.

ರೌಂಡ್‌ ರಾಬಿನ್ ಲೀಗ್ ಹಂತದಲ್ಲಿ ಚೀನಾ ತಂಡವು 10 ಪಂದ್ಯಗಳನ್ನು ಆಡಿತ್ತು. ಅದರಲ್ಲಿ ಒಂದರಲ್ಲಿ ಮಾತ್ರ ಸೋಲನುಭವಿಸಿತ್ತು. ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್ ಮತ್ತು ಮಲೇಷ್ಯಾ ತಂಡಗಳು ಮುಖಾಮುಖಿಯಾಗಲಿವೆ. ಅದರಲ್ಲಿ ಗೆಲ್ಲುವ ತಂಡವು ಸೆಮಿಫೈನಲ್‌ನಲ್ಲಿ ಚೀನಾ ಬಳಗವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.