ADVERTISEMENT

ಭಾರತ ‘ಎ’ ತಂಡದಿಂದ ಗೌತಮ್‌ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಕೆ. ಗೌತಮ್‌
ಕೆ. ಗೌತಮ್‌   

ಹುಬ್ಬಳ್ಳಿ: ದುಲೀಪ್‌ ಟ್ರೋಫಿ ಟೂರ್ನಿಯ ವೇಳೆ ಅನಾರೋಗ್ಯದ ಕಾರಣ ಹೇಳಿ ಹೊರಬಂದು ಕೆಪಿಎಲ್‌ ಟೂರ್ನಿಯಲ್ಲಿ ಆಡುತ್ತಿರುವ ಕರ್ನಾಟಕದ ಕೆ. ಗೌತಮ್‌ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಭಾರತ ‘ಎ’ ತಂಡದಿಂದ ಕೈಬಿಟ್ಟಿದೆ.

ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಫ್‌ ಸ್ಪಿನ್ನರ್ ಗೌತಮ್‌ ಅವರನ್ನು ದುಲೀಪ್‌ ಟ್ರೋಫಿಗೆ ಇಂಡಿಯಾ ರೆಡ್‌ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಲಖನೌದಲ್ಲಿ ನಡೆದ ಇಂಡಿಯಾ ಗ್ರೀನ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಆಡಿದ್ದರು.  ಪಂದ್ಯದಲ್ಲಿ ನಾಲ್ಕನೇಯ ದಿನ ಗೌತಮ್‌ ಫೀಲ್ಡಿಂಗ್‌ ಮಾಡಿರಲಿಲ್ಲ. ಜ್ವರ ಬಂದಿದೆ ಎಂದು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ ಟೂರ್ನಿಯಿಂದ ಹೊರಬಂದಿದ್ದರು.

ಬೆಳಗಾವಿ ಪ್ಯಾಂಥರ್ಸ್ ತಂಡದಲ್ಲಿರುವ ಅವರು ಸೆ. 12ರಂದು ಮೈಸೂರಿನಲ್ಲಿ ನಡೆದ ಕೆಪಿಎಲ್‌ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ವಿರುದ್ಧ ಪಂದ್ಯವಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ‘ಅಶಿಸ್ತಿನ ವರ್ತನೆ’ ಎಂದು ಹೇಳಿ ಭಾರತ ‘ಎ’ ತಂಡದಿಂದ ಕೈಬಿಟ್ಟಿದೆ.

ADVERTISEMENT

ಸೆ. 23ರಿಂದ ವಿಜಯವಾಡದಲ್ಲಿ ನಡೆಯಲಿರುವ ನಾಲ್ಕು ದಿನಗಳ ಎರಡು ಪಂದ್ಯಗಳಿಗೆ ಆಯ್ಕೆ ಮಾಡಲಾದ ಭಾರತ ‘ಎ’ ತಂಡದಲ್ಲಿ ಗೌತಮ್‌ ಸ್ಥಾನ ಪಡೆದಿದ್ದರು. ಕೊನೆಯಲ್ಲಿ ಬಿಸಿಸಿಐ ಅವರ ಹೆಸರನ್ನು ತೆಗೆದು ಹಾಕಿ ವಿದರ್ಭದ ಕರಣ್‌ ಶರ್ಮಾಗೆ ಸ್ಥಾನ ನೀಡಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಗೌತಮ್‌ ನಿರಾಕರಿಸಿದರು.‘ಮೊಬೈಲ್‌ ದುರಸ್ಥಿಯಲ್ಲಿದೆ. ಈಗ ಮಾತನಾಡಲು ಆಗುವುದಿಲ್ಲ’ ಎಂದು ಹೇಳಿದರು.

‘ದುಲೀಪ್‌ ಟ್ರೋಫಿಯ ಮೊದಲ ಪಂದ್ಯ ಪೂರ್ಣಗೊಳ್ಳುವ ಮೊದಲೇ ಗೌತಮ್‌ ತಂಡವನ್ನು ತೊರೆದಿದ್ದರು. ಇದಾದ ಎರಡೇ ದಿನಗಳಲ್ಲಿ ಕೆಪಿಎಲ್‌ನಲ್ಲಿ ಆಡಿ ಕ್ರಿಕೆಟ್‌ ಮಂಡಳಿಯ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದು ನಮ್ಮ ಕ್ರಿಕೆಟ್‌ ವ್ಯವಸ್ಥೆಗೆ ಮಾಡಿದ ಅವಮಾನ’ ಎಂದು ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಜೋಹ್ರಿ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನುಮತಿ ಪಡೆದ ಕರುಣ್‌: ದುಲೀಪ್‌ ಟ್ರೋಫಿ ಟೂರ್ನಿಯ ಇಂಡಿಯಾ ಗ್ರೀನ್‌ ತಂಡದಲ್ಲಿದ್ದ ಕರ್ನಾಟಕದ ಇನ್ನೊಬ್ಬ ಆಟಗಾರ ಕರುಣ್‌ ನಾಯರ್‌ ಅವರು ಅನುಮತಿ ಪಡೆದು ಕೆಪಿಎಲ್‌ನಲ್ಲಿ ಆಡಲು ಬಂದಿದ್ದಾರೆ. ಅವರು ಇಂಡಿಯಾ ರೆಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿದ್ದರು. ಸುಧಾಕರರಾವ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

₹ 7.2 ಲಕ್ಷಕ್ಕೆ ಹರಾಜು
ಕೆಪಿಎಲ್‌ ಟೂರ್ನಿಗೆ ನಡೆದ ಹರಾಜಿನಲ್ಲಿ ಗೌತಮ್‌ ಅವರನ್ನು ಬೆಳಗಾವಿ ಪ್ಯಾಂಥರ್ಸ್‌ ₹ 7.2 ಲಕ್ಷಕ್ಕೆ ಖರೀದಿಸಿತ್ತು. ಈ ಬಾರಿಯ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.