ADVERTISEMENT

ಮಹಿಳೆಯರ ಕ್ರಿಕೆಟ್‌: ಭಾರತ–ದಕ್ಷಿಣ ಆಫ್ರಿಕಾ ಪೈಪೋಟಿ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಮಹಿಳೆಯರ ಕ್ರಿಕೆಟ್‌: ಭಾರತ–ದಕ್ಷಿಣ ಆಫ್ರಿಕಾ ಪೈಪೋಟಿ
ಮಹಿಳೆಯರ ಕ್ರಿಕೆಟ್‌: ಭಾರತ–ದಕ್ಷಿಣ ಆಫ್ರಿಕಾ ಪೈಪೋಟಿ   

ಕೇಪ್‌ಟೌನ್‌ (ಪಿಟಿಐ): ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಏಕದಿನ ಸರಣಿ ಗೆದ್ದುಕೊಂಡಿರುವ ಭಾರತ ಮಹಿಳೆಯರ ತಂಡವು ಚುಟುಕು ಕ್ರಿಕೆಟ್‌ನಲ್ಲಿಯೂ ಪ್ರಾಬಲ್ಯ ಸಾಧಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಭಾರತ ತಂಡ ಶುಕ್ರವಾರ ಐದನೇ ಟ್ವೆಂಟಿ–20 ಪಂದ್ಯವನ್ನು ದಕ್ಷಿಣ ಆಫ್ರಿಕಾ ಎದುರು ಆಡಲಿದೆ. ಈ ಪಂದ್ಯ ಗೆದ್ದರೆ ಹರ್ಮನ್‌ಪ್ರೀತ್‌ ಬಳಗ ಒಂದೇ ಪ್ರವಾಸದಲ್ಲಿ ಎರಡು ಸರಣಿ ಗೆದ್ದ ಅಪರೂಪದ ಸಾಧನೆ ಮಾಡಲಿದೆ. ಈ ಮೊದಲು ಭಾರತ ಮಹಿಳೆಯರು ಈ ಸಾಧನೆ ಮಾಡಿಲ್ಲ.

ಏಕದಿನ ಸರಣಿಯನ್ನು ಭಾರತ 2–1ರಲ್ಲಿ ಗೆದ್ದುಕೊಂಡಿತ್ತು. ಚುಟುಕು ಸರಣಿಯಲ್ಲಿ ಈಗಾಗಲೇ 2–1ರಲ್ಲಿ ಮುಂದಿದೆ. ಸೆಂಚೂರಿಯನ್‌ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದ್ದರಿಂದ ಈ ಪಂದ್ಯವು ‘ಫೈನಲ್‌’ ಹಣಾಹಣಿಯಾಗಿದೆ. ಮೊದಲ ಎರಡು ಪಂದ್ಯಗಳನ್ನು ಭಾರತ ತಂಡ ಕ್ರಮವಾಗಿ ಏಳು ಮತ್ತು ಒಂಬತ್ತು ವಿಕೆಟ್‌ಗಳಿಂದ ಗೆದ್ದಿದೆ. ಮೂರನೇ ಪಂದ್ಯವನ್ನು ಆತಿಥೇಯ ತಂಡವು ಐದು ವಿಕೆಟ್‌ಗಳಿಂದ ಗೆದ್ದಿತ್ತು.

ADVERTISEMENT

ಪ್ರವಾಸಿ ತಂಡದಲ್ಲಿ ಮಿಥಾಲಿ ರಾಜ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಮಿಥಾಲಿ (54, 76) ಅರ್ಧಶತಕ ದಾಖಲಿಸಿದ್ದರು. ಮೂರನೇ ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (28, 57, 37) ಕೂಡ ವಿಶ್ವಾಸ ಮೂಡಿಸಿದ್ದಾರೆ.

ಮೂರನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ವಿಫಲರಾಗಿದ್ದ ವೇಳೆ ಹರ್ಮನ್‌ಪ್ರೀತ್ ಕೌರ್ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. 30 ಎಸೆತಗಳಲ್ಲಿ ಅವರು 48ರನ್‌ ಗಳಿಸಿದ್ದರು.

ಕರ್ನಾಟಕದ ವೇದಾ ಕೃಷ್ಣಮೂರ್ತಿ ಎರಡು ಪಂದ್ಯಗಳಲ್ಲಿ 37, 23 ರನ್‌ ಗಳಿಸಿ ಭರವಸೆ ಉಳಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಆಫ್‌ ಸ್ಪಿನ್ನರ್‌ ಅನುಜಾ ಪಾಟೀಲ ಮಿಂಚಿದ್ದಾರೆ. ಸ್ಪಿನ್ನರ್ ಪೂನಮ್ ಯಾದವ್ ಮತ್ತು ಯುವ ಆಟಗಾರ್ತಿ ಪೂಜಾ ವಸ್ತ್ರಕರ್‌ ನಾಲ್ಕು ವಿಕೆಟ್ ಕಬಳಿಸಿದ್ದಾರೆ.

ಡೇನ್‌ ವಾನ್ ನೀಕರ್ಕ್‌ ಬಳಗವು ಸರಣಿಯನ್ನು ಸಮಬಲ ಮಾಡಿಕೊಳ್ಳುವ ಉದ್ದೇಶದಲ್ಲಿದೆ. ಮೂರನೇ ಪಂದ್ಯದ ಗೆಲುವಿನಲ್ಲಿ ಈ ತಂಡದ ಬೌಲರ್‌ ಶಬ್ನಿಮ್ ಇಸ್ಮಾಯಿಲ್ ಅವರ ಪಾಲು ಹೆಚ್ಚಿದೆ. ಐದು ವಿಕೆಟ್ ಪಡೆದಿದ್ದ ಅವರು ವೃತ್ತಿಶ್ರೇಷ್ಠ ಬೌಲಿಂಗ್‌ ಸಾಧನೆ ಮಾಡಿದ್ದರು.

ಆರಂಭಿಕ ಬ್ಯಾಟ್ಸ್‌ವುಮನ್‌ಗಳಲ್ಲಿ ನಾಯಕಿ ನೀಕರ್ಕ್‌ ಸೇರಿದಂತೆ ಎರಡು ಅರ್ಧಶತಕ ದಾಖಲಿಸಿರುವ ಲಿಜೆಲ್ ಲೀ ಕೂಡ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.