ADVERTISEMENT

ಮಾರ್ಷ್‌ ಬದಲು ಜೋ ಬರ್ನ್ಸ್‌ಗೆ ಸ್ಥಾನ

ಮೂರನೇ ಟೆಸ್ಟ್‌ಗೆ ಆಸ್ಟ್ರೇಲಿಯ ತಂಡ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:51 IST
Last Updated 21 ಡಿಸೆಂಬರ್ 2014, 19:51 IST

ಬ್ರಿಸ್ಬೇನ್‌ (ಪಿಟಿಐ/ಐಎಎನ್‌ಎಸ್‌): ಭಾರತದ ಎದುರು ಡಿಸೆಂಬರ್‌ 26ರಿಂದ  ಆರಂಭವಾಗುವ ಮೂರನೇ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯ
ತಂಡವನ್ನು ಪ್ರಕಟಿಸಲಾಗಿದ್ದು, ಗಾಯದಿಂದ ಬಳಲುತ್ತಿರುವ  ಆಲ್‌ರೌಂಡರ್‌ ಮಿಷೆಲ್‌ ಮಾರ್ಷ್‌ ಬದಲಿಗೆ ಜೋ ಬರ್ನ್ಸ್‌ಗೆ  ಸ್ಥಾನ ನೀಡಲಾಗಿದೆ.

‘ಆಸ್ಟ್ರೇಲಿಯ ರಾಷ್ಟ್ರೀಯ ಆಯ್ಕೆ ಸಮಿತಿ ಮೂರನೇ ಟೆಸ್ಟ್‌ ಪಂದ್ಯಕ್ಕೆ ಪ್ರಕಟಿಸಿರುವ 13 ಸದಸ್ಯರ ತಂಡದಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಜೋ ಬರ್ನ್ಸ್‌ಗೆ ಸ್ಥಾನ ನೀಡುವ ಮೂಲಕ ಅಚ್ಚರಿಯ ನಿರ್ಧಾರ ತಳೆದಿದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬರ್ನ್ಸ್‌ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಈ ಋತುವಿನ ಶೆಫೀಲ್ಡ್‌ ಶೀಲ್ಡ್‌ ಕ್ರಿಕೆಟ್‌ ಟೂರ್ನಿಯಲ್ಲಿ 55ರ ಸರಾಸರಿಯಲ್ಲಿ 439ರನ್‌ ಗಳಿಸಿ ಗಮನ ಸೆಳೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬರ್ನ್ಸ್‌ 2978ರನ್‌ ಕಲೆಹಾಕಿದ್ದಾರೆ.

ತಂಡ ಇಂತಿದೆ: ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಕ್ರಿಸ್‌ ರೋಜರ್ಸ್‌, ಶೇನ್‌ ವಾಟ್ಸನ್‌, ಶಾನ್‌ ಮಾರ್ಷ್‌, ಜೋ ಬರ್ನ್ಸ್, ಬ್ರಾಡ್‌ ಹಡಿನ್‌, ಮಿಷೆಲ್‌ ಸ್ಟಾರ್ಕ್‌, ಮಿಷೆಲ್‌ ಜಾನ್ಸನ್‌, ನಥಾನ್‌ ಲಿಯೊನ್‌, ಜೋಶ್‌ ಹಜ್ಲೆವುಡ್‌, ರ್‍ಯಾನ್‌ ಹ್ಯಾರಿಸ್‌ ಮತ್ತು ಪೀಟರ್‌ ಸಿಡ್ಲ್‌.

‘ಸ್ಮಿತ್‌ ಎಲ್ಲಾ ಮಾದರಿಯ ನಾಯಕತ್ವ ವಹಿಸಿಕೊಳ್ಳಲಿ’
‘ಮುಂಬರುವ ಏಕದಿನ ವಿಶ್ವಕಪ್‌ ವೇಳೆಗೆ ಮೈಕಲ್‌ ಕ್ಲಾರ್ಕ್‌ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ಸ್ಟೀವನ್‌ ಸ್ಮಿತ್‌  ಅವರು ಎಲ್ಲಾ ಮಾದರಿಯಲ್ಲೂ ತಂಡದ ನಾಯಕತ್ವ ವಹಿಸಿಕೊಳ್ಳಲಿ’ ಎಂದು  ಆಸ್ಟ್ರೇಲಿಯ ತಂಡದ ವೇಗಿ ರ್‍ಯಾನ್‌ ಹ್ಯಾರಿಸ್‌ ಅಭಿಪ್ರಾಯಪಟ್ಟಿದ್ದಾರೆ.
ಕ್ಲಾರ್ಕ್‌ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಭಾರತದ ಎದುರಿನ ಎರಡನೇ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಮಿತ್‌ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದರು.

ಡಿಆರ್‌ಎಸ್‌ ನಿಯಮ ಒಪ್ಪಿಕೊಳ್ಳಿ
ನವದೆಹಲಿ (ಪಿಟಿಐ):
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಂಪೈರ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನೆರವಾಗುವ  ಡಿಆರ್‌ಎಸ್‌ ನಿಯಮವನ್ನು  ಒಪ್ಪಿಕೊಳ್ಳಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ.

ಆಸ್ಟ್ರೇಲಿಯ ಎದುರಿನ  ಮೊದಲ ಎರಡು ಟೆಸ್ಟ್‌ ಪಂದ್ಯಗಳ ವೇಳೆ  ಅಂಪೈರ್‌ಗಳು ನೀಡಿದ್ದ ಕೆಲ ತೀರ್ಪುಗಳು ಭಾರತಕ್ಕೆ ವಿರುದ್ಧವಾಗಿದ್ದವು. ಶನಿವಾರ ಈ ಕುರಿತು ನಾಯಕ ಮಹೇಂದ್ರ ಸಿಂಗ್‌ ದೋನಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

‘ಬಿಸಿಸಿಐ ಡಿಆರ್‌ಎಸ್‌ ನಿಯಮದ ಅಳವಡಿಕೆಯನ್ನು ಒಪ್ಪಿಕೊಳ್ಳಲು ಇದು ಸೂಕ್ತ ಸಮಯ’ ಎಂದು ಹರಭಜನ್‌ ಸಿಂಗ್‌ ನುಡಿದಿದ್ದಾರೆ. ‘ನಾನು ಹಾಟ್‌ಸ್ಪಾಟ್‌ ಇಲ್ಲವೇ ಹಾವ್ಕ್‌ಐ ಅನ್ನು ಒಪ್ಪುವುದಿಲ್ಲ. ಆದರೆ ಡಿಆರ್‌ಎಸ್‌ ಅಳವಡಿಕೆಗೆ ನನ್ನ ಸಮ್ಮತಿ ಇದೆ’ ಎಂದು ವಿ.ವಿ.ಎಸ್‌. ಲಕ್ಷ್ಮಣ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT