ADVERTISEMENT

ಮಿಂಚು ಹರಿಸಿದ ಅನೂಪ್‌: ಮುಂಬಾಗೆ ಭರ್ಜರಿ ಜಯ

ಭರಪೂರ ಮನರಂಜನೆ ನೀಡಿದ ‘ತವರಿನ’ ತಂಡಗಳು

ವಿಕ್ರಂ ಕಾಂತಿಕೆರೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಪಾಯಿಂಟ್‌ಗಾಗಿ ಪೈಪೋಟಿ... ಮುಂಬೈಯಲ್ಲಿ ಗುರುವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯು ಮುಂಬಾ ಮತ್ತು ಪುಣೇರಿ ಪಲ್ಟನ್ ತಂಡದ ಆಟಗಾರರ ನಡುವಿನ ಹೋರಾಟದ ಕ್ಷಣ –ಪಿಟಿಐ ಚಿತ್ರ
ಪಾಯಿಂಟ್‌ಗಾಗಿ ಪೈಪೋಟಿ... ಮುಂಬೈಯಲ್ಲಿ ಗುರುವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯು ಮುಂಬಾ ಮತ್ತು ಪುಣೇರಿ ಪಲ್ಟನ್ ತಂಡದ ಆಟಗಾರರ ನಡುವಿನ ಹೋರಾಟದ ಕ್ಷಣ –ಪಿಟಿಐ ಚಿತ್ರ   

ಮುಂಬೈ:  ಜೀತೇಗಾ ಬಾಯಿ ಜೀತೇಗಾ... ಎಂಬ ಉದ್ಗೋಷಕ್ಕೆ ಪ್ರೇಕ್ಷಕರಿಂದ ‘ಯು ಮುಂಬಾ ಯು ಮುಂಬಾ’ ಎಂಬ ಉತ್ತರ ಸಿದ್ಧವಾಗಿಯೇ ಇತ್ತು. ಸಂಘಟಿತ ಹೋರಾಟ ಪ್ರದರ್ಶಿಸಿದ ಅನೂಪ್ ಕುಮಾರ್ ನೇತೃತ್ವದ  ಮುಂಬಾ ತಂಡದವರು ಪ್ರೇಕ್ಷಕರ ಆಶಯಕ್ಕೆ ಧಕ್ಕೆ ತರಲಿಲ್ಲ.

ಇಲ್ಲಿನ ನ್ಯಾಷನಲ್‌ ಸ್ಪೋರ್ಟ್ಸ್ ಕ್ಲಬ್‌ ಆಫ್‌ ಇಂಡಿಯಾದ ಅಂಕಣದಲ್ಲಿ ಬುಧವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ 43ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವನ್ನು 34–31 ಪಾಯಿಂಟ್‌ಗಳಿಂದ ಮಣಿಸಿದ ಮುಂಬಾ ತಂಡಸೆಮಿಫೈನಲ್‌ ಕನಸನ್ನು ಜೀವಂತವಾಗಿರಿಸಿತು.

ಮಹಾರಾಷ್ಟ್ರದ ಎರಡು ತಂಡಗಳ ಆಟ ಸವಿಯಲು ಪ್ರೇಕ್ಷಕರು ಗ್ಯಾಲರಿಗಳಲ್ಲಿ ತುಂಬುವರು ಎಂಬ ಸಂಘಟಕರ ನಿರೀಕ್ಷೆ ಈಡೇರಲಿಲ್ಲ. ನಾಲ್ಕೂ ಭಾಗದಲ್ಲೂ ಪ್ರೇಕ್ಷಕರ ಗ್ಯಾಲರಿಗಳಲ್ಲಿ ಖಾಲಿ ಜಾಗ ಸಾಕಷ್ಟು ಇತ್ತು. ಆದರೆ ಇದ್ದಷ್ಟು ಕಬಡ್ಡಿ ಪ್ರಿಯರು ಭರಪೂರ ರಂಜನೆ ಅನುಭವಿಸಿದರು.

ಅನೂಪ್ ಕುಮಾರ್ ಮತ್ತು ಅಜಯ್‌ ಠಾಕೂರ್ ಅವರ ಭರ್ಜರಿ ರೈಡಿಂಗ್‌, ಸೋಮವೀರ ಮತ್ತು ಜೋಗಿಂದರ್ ಅವರ ಅಮೋಘ ಟ್ಯಾಕ್ಲಿಂಗ್‌ಗೆ ಮಾರುಹೋದ ಪ್ರೇಕ್ಷಕರು ನಿರಂತರ ಕೇಕೆ ಹಾಕಿದರು.

ಉಭಯ ತಂಡಗಳ ಬೆಂಬಲಿಗರು ಗ್ಯಾಲರಿಯಲ್ಲಿದ್ದರೂ ‘ಯು ಮುಂಬಾ...ಯು ಮುಂಬಾ...’ ಕೂಗು ಹೆಚ್ಚು ಕೇಳಿಬರುತ್ತಿತ್ತು. ಇದಕ್ಕೆ ತಕ್ಕ ಆಟ ಪ್ರದರ್ಶಿಸಿದ ಅನೂಪ್‌  ಎರಡು ಟ್ಯಾಕಲ್‌ ಪಾಯಿಂಟ್ ಸೇರಿದಂತೆ ಒಟ್ಟು 11 ಪಾಯಿಂಟ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ರೈಡಿಂಗ್‌ ಮತ್ತು ಟ್ಯಾಕ್ಲಿಂಗ್‌ನಲ್ಲಿ ತಲಾ ಐದು ಪಾಯಿಂಟ್‌ ಕಲೆ ಹಾಕಿದ ರಿಶಾಂಕ ದೇವಾಡಿಗ ಮತ್ತು ಸುರ್ಜೀತ್‌ ಅವರು ನಾಯಕನಿಗೆ ಉತ್ತಮ ಸಹಕಾರ ನೀಡಿದರು.

ಎದುರಾಳಿ ಅಂಕಣದ ಆಟಗಾರರೂ ಮನಮೋಹಕ ಆಟ ಪ್ರದರ್ಶಿಸಿದರು. ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಕಾಲಿನ ಮಣಿಗಂಟು ನೋವಿಗೆ ಒಳಗಾಗಿದ್ದ ನಾಯಕ ಮಂಜೀತ್ ಚಿಲ್ಲಾರ್‌ ಅಂಗಣಕ್ಕೆ ಇಳಿಯದಿದ್ದರೂ ತಂಡ ಎದೆಗುಂದಲಿಲ್ಲ. ಅಜಯ್ ಠಾಕೂರ್ ಏಕಾಂಗಿಯಾಗಿ ಒಟ್ಟು 9 ರೈಡಿಂಗ್ ಪಾಯಿಂಟ್‌ಗಳನ್ನು ತಂಡದ ಬುಟ್ಟಿಗೆ ಸೇರಿಸಿದರೆ, ಪರಿಣಾಮಕಾರಿ ರೈಡಿಂಗ್ ಪ್ರದರ್ಶಿಸಿದ ದೀಪಕ್‌ ನಿವಾಸ್‌ ಹೂಡ  ಏಳು ಪಾಯಿಂಟ್‌ ಗಳಿಸಿದರು. ಇವರಿಬ್ಬರೂ ತಲಾ ಎರಡು ಬೋನಸ್ ಪಾಯಿಂಟ್‌ಗಳನ್ನು ಕೂಡ ತಂಡಕ್ಕೆ ಕಾಣಿಕೆ ನೀಡಿದರು.

ಆರಂಭದಲ್ಲಿ ಸಮಬಲದ ಹೋರಾಟ: ನಟಿ ಸೋನಾಕ್ಷಿ ಸಿನ್ಹಾ ಅವರು ರಾಷ್ಟ್ರಗೀತೆ ಹಾಡಿದ ನಂತರ ಟಾಸ್‌ ಗೆದ್ದ ಬದಲಿ ನಾಯಕ ಜೋಗೀಂದರ್ ಸಿಂಗ್ ನರ್ವಾಲ್ ಎಡಬದಿಯ ಅಂಕಣ ಆಯ್ದುಕೊಂಡರು. ಮೊದಲ ರೈಡ್‌ನಲ್ಲೇ ಒಂದು ಪಾಯಿಂಟ್‌ ಗಳಿಸಿದ ಯು ಮುಂಬಾ ನಾಯಕ ಉತ್ತಮ ಆರಂಭ ಒದಗಿಸಿದರು. ಆದರೆ ಪುಣೇರಿ ಪರ ರೈಡ್ ಮಾಡಿದ ಅಜಯ ಠಾಕೂರ್‌ ಖಾಲಿ ಕೈಯೊಂದಿಗೆ ಮರಳಿದರು. ಯು ಮುಂಬಾದ ರಿಶಾಂಕ್ ದೇವಾಡಿಗ ಕೂಡ ಬರಿಗೈಯಲ್ಲಿ ವಾಪಸಾದರು. ದೀಪಕ್‌ ನಿವಾಸ್  ಹೂಡ ಮತ್ತು ಅನೂಪ್ ಕುಮಾರ್‌ ತಮ್ಮ ತಂಡಕ್ಕಾಗಿ ಒಂದೊಂದು ಪಾಯಿಂಟ್ ಗಳಿಸಿದಾಗ ಪಂದ್ಯ 2–2ರಿಂದ ಸಮವಾಯಿತು. ಸಮಬಲದ ಹೋರಾಟ ಮುಂದುವರಿದು ಪಂದ್ಯ ಮೊದಲರ್ಧವನ್ನು ಪೂರೈಸಿದಾಗ ಯು ಮುಂಬಾ ಕೇವಲ ಎರಡು ಪಾಯಿಂಟ್‌ಗಳ ಮುನ್ನಡೆ (15–13) ಗಳಿಸಿ ನಿಟ್ಟುಸಿರು ಬಿಟ್ಟಿತು.

ಆದರೆ ದ್ವಿತೀಯಾರ್ಧದಲ್ಲಿ ಆಟ ಇನ್ನಷ್ಟು ಕಳೆಗಟ್ಟಿತು. ಜೋಗಿಂದರ್‌ ಸಿಂಗ್ ನರ್ವಾಲ್ ತಂದುಕೊಟ್ಟ ಮೂರು ಟ್ಯಾಕ್ಲಿಂಗ್ ಪಾಯಿಂಟ್‌ ಬಲದಿಂದ 30ನೇ ನಿಮಿಷದ ವರೆಗೆ ಮುನ್ನಡೆ ಸಾಧಿಸಿದ ಪುಣೇರಿ ಪಲ್ಟಾನ್‌ಗೆ 31ನೇ ನಿಮಿಷದಲ್ಲಿ ನಾಯಕ ಹಳದಿ ಕಾರ್ಡ್‌ ಪಡೆದು ಹೊರ ನಡೆದ ಪ್ರಸಂಗ ಪೆಟ್ಟು ನೀಡಿತು. ನಂತರ ಮೇಲುಗೈ ಸಾಧಿಸಿದ ಯು ಮುಂಬಾಗೆ 34ನೇ ನಿಮಿಷದಲ್ಲಿ ಸ್ವಲ್ಪ ಹಿನ್ನಡೆಯಾಯಿತು. 25–25ರಿಂದ ಸಮಬಲ ಸಾಧಿಸಿದ ಪುಣೇರಿ ತಂಡಕ್ಕೆ ಈ ಲಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮ ನಿಮಿಷಗಳಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಯು ಮುಂಬಾ ಗೆಲುವು ಪಡೆಯಿತು.

ಸ್ಟಾರ್ಮ್‌ ಕ್ವೀನ್ಸ್‌ಗೆ ಜಯ: ಮಹಿಳಾ ಕಬಡ್ಡಿಯಲ್ಲಿ  ಸ್ಟಾರ್ಮ್‌ ಕ್ವೀನ್ಸ್‌ ತಂಡ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿತು. ತೇಜಸ್ವಿನಿಬಾಯಿ ಮತ್ತು ದೀಪಿಕಾ ಜೋಸೆಫ್ ಅವರು ತಂದು ಕೊಟ್ಟ ತಲಾ ಮೂರು ಪಾಯಿಂಟ್‌ಗಳ ಬಲದಿಂದ ಈ ತಂಡ ಮಮತಾ ಪೂಜಾರಿ ನೇತೃತ್ವದ ಫಯರ್‌ ಬರ್ಡ್ಸ್‌ ತಂಡವನ್ನು   21–11ರಿಂದ ಮಣಿಸಿತು.

ಚಿಲ್ಲಾರ್ ಶೀಘ್ರ ಗುಣಮುಖ
ಕಾಲಿನ ಮಣಿಗಂಟಿಗೆ ಗಾಯಗೊಂಡಿರುವ ಆಲ್‌ರೌಂಡರ್‌ ಮಂಜೀತ್ ಚಿಲ್ಲಾರ್‌ ಶೀಘ್ರ ಗುಣಮುಖರಾಗಲಿದ್ದಾರೆ ಎಂದು ಕೋಚ್‌ ಕೆ.ಭಾಸ್ಕರನ್ ತಿಳಿಸಿದರು.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಚಿಲ್ಲಾರ್‌ ಅವರ ಗಾಯ ಗಂಭೀರವಲ್ಲ. ಮುಂದಿನ ಪಂದ್ಯಕ್ಕೆ ಸುಧಾರಿಸಿಕೊಳ್ಳುವುದಕ್ಕಾಗಿ ಅವರಿಗೆ ಬುಧವಾರ ವಿಶ್ರಾಂತಿ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT