ADVERTISEMENT

ಮುಂಬೈಗೆ ಮತ್ತೆ ತಪ್ಪದ ಸೋಲು

ಚೆನ್ನೈ ಸೂಪರ್‌ ಕಿಂಗ್ಸ್‌ಗೆ 6 ವಿಕೆಟ್‌ ಜಯ; ಸ್ಮಿತ್‌ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 19:38 IST
Last Updated 17 ಏಪ್ರಿಲ್ 2015, 19:38 IST

ಮುಂಬೈ: ಶ್ರೇಷ್ಠ ಆಟಗಾರರನ್ನು ಹೊಂದಿರುವ 2013ರ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೋಲಿನ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯದಲ್ಲೂ ಮುಂಬೈ ನಿರಾಸೆಗೆ ಒಳಗಾಯಿತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ  ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್‌ ಮೊದಲು ಬ್ಯಾಟ್‌್ ಮಾಡಿ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 183 ರನ್‌ ಕಲೆ ಹಾಕಿತು. ಈ ಗುರಿಯ ಎದುರು ಆರಂಭದಿಂದಲೇ ದಿಟ್ಟ ಹೋರಾಟ ನಡೆಸಿದ ಸೂಪರ್‌ ಕಿಂಗ್ಸ್‌ 16.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಸೂಪರ್‌ ಕಿಂಗ್ಸ್‌ ಮೊದಲ ಐದು ಓವರ್‌ಗಳು ಪೂರ್ಣಗೊಂಡಾಗ ವಿಕೆಟ್‌ ನಷ್ಟವಿಲ್ಲದೆ 72 ರನ್‌ಗಳನ್ನು ಗಳಿಸಿ ಗೆಲುವನ್ನು ಸುಲಭ ಮಾಡಿಕೊಂಡಿತು. ಇದಕ್ಕೆ ಕಾರಣವಾಗಿದ್ದು ಡ್ವೇನ್‌ ಸ್ಮಿತ್‌, ಬ್ರೆಂಡನ್‌ ಮೆಕ್ಲಮ್‌ ಮತ್ತು ಸುರೇಶ್‌ ರೈನಾ ಅವರ ಅಬ್ಬರದ ಆಟ.

ಆರಂಭಿಕ ಬ್ಯಾಟ್ಸ್‌ಮನ್‌ ಸ್ಮಿತ್‌ ಕೇವಲ 30 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸೇರಿದಂತೆ 62 ರನ್‌ ಸಿಡಿಸಿದರು. ಮೆಕ್ಲಮ್‌ (46, 20ಎಸೆತ, 6ಬೌಂಡರಿ, 2 ಸಿಕ್ಸರ್‌) ಮತ್ತು ರೈನಾ (43, 29ಎಸೆತ, 4ಬೌಂಡರಿ, 2 ಸಿಕ್ಸರ್‌) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ ಸೂಪರ್‌ ಕಿಂಗ್ಸ್ 128 ರನ್‌ ಗಳಿಸಿದ್ದಾಗಲೇ ಗೆಲುವು ಖಚಿತವಾಗಿತ್ತು. ಲಸಿತ್‌ ಮಾಲಿಂಗ, ಕರ್ನಾಟಕದ ಜೆ. ಸುಚಿತ್‌, ಹರಭಜನ್‌ ಸಿಂಗ್‌, ಕೀರನ್‌ ಪೊಲಾರ್ಡ್‌ ಸೇರಿದಂತೆ ಯಾವ ಬೌಲರ್‌ಗಳಿಗೂ ಸೂಪರ್‌ ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ.

ಪರದಾಟ: ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲಿ ಪರದಾಡಿ ನಂತರ ಅಮೋಘ ಆಟವಾಡಿತು.  ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡ ಮುಂಬೈ ತಂಡ ಆರಂಭದಲ್ಲಿ ಪರದಾಡಿತು. ನಂತರ ರೋಹಿತ್‌ ಶರ್ಮ ಮತ್ತು ಕೀರನ್‌ ಪೊಲಾರ್ಡ್‌ ಅರ್ಧಶತಕ ಗಳಿಸಿ ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು.

5, 0, 4. ಇದು ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಲಿಂಡ್ಲ್‌ ಸಿಮನ್ಸ್‌, ಪಾರ್ಥೀವ್‌ ಪಟೇಲ್‌ ಮತ್ತು ಕೋರಿ ಆ್ಯಂಡರ್‌ಸನ್‌ ಗಳಿಸಿದ ರನ್‌ಗಳು. ಈ ತಂಡದ ಒಟ್ಟು ಮೊತ್ತ 12 ರನ್‌ ಆಗುವಷ್ಟುರಲ್ಲಿ ಪ್ರಮುಖ ಮೂರು ವಿಕೆಟ್‌ಗಳು ಪತನವಾಗಿದ್ದವು. ಬಲಗೈ ವೇಗಿ ಆಶಿಶ್‌  ನೆಹ್ರಾ ಎರಡು ವಿಕೆಟ್‌ ಪಡೆದು ಆರಂಭಿಕ ಮೇಲುಗೈ ಒದಗಿಸಿದರು.

ಆದರೆ, ನಾಯಕ ರೋಹಿತ್‌ ತಮ್ಮ ಜವಾಬ್ದಾರಿಗೆ ತಕ್ಕಂತೆ ಆಡಿದರು. ಸೂಪರ್‌ ಕಿಂಗ್ಸ್ ಬೌಲರ್‌ಗಳ ಚಳಿ ಬಿಡಿಸಿದ ಮುಂಬೈನ ರೋಹಿತ್‌ 31 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 50 ರನ್‌ ಕಲೆ ಹಾಕಿದರು. ಇವರ ಆಟಕ್ಕೆ ವೆಸ್ಟ್‌ ಇಂಡೀಸ್‌ನ ಪೊಲಾರ್ಡ್‌ ನೆರವಾದರು.

ಮೋಹಿತ್‌ ಶರ್ಮ, ರವೀಂದ್ರ ಜಡೇಜ ಅವರ ಬೌಲಿಂಗ್‌ನಲ್ಲಿ ಹೆಚ್ಚು ರನ್‌ಗಳನ್ನು ಬಾರಿಸಿದ ಪೊಲಾರ್ಡ್‌ ಮುಂಬೈ ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು. ಈ ಬ್ಯಾಟ್ಸ್‌ಮನ್‌ ಕೇವಲ 30 ಎಸೆತಗಳಲ್ಲಿ 64 ರನ್‌ ಬಾರಿಸಿದರು. ಬೌಂಡರಿ (4) ಮತ್ತು ಸಿಕ್ಸರ್‌ಗಳ (5) ಮೂಲಕವೇ 54 ರನ್‌ಗಳನ್ನು ಸಿಡಿಸಿದರು. ಪೊಲಾರ್ಡ್‌ ಅಬ್ಬರ ಹೇಗಿತ್ತು ಎನ್ನುವುದಕ್ಕೆ ಈ ಅಂಕಿಅಂಶವೇ ಸಾಕ್ಷಿ.

ಐದನೇ ವಿಕೆಟ್‌ಗೆ ಈ ಜೋಡಿ 33 ಎಸೆತಗಳಲ್ಲಿ 75 ರನ್‌ಗಳನ್ನು ಕಲೆ ಹಾಕಿತು. ಆರನೇ ವಿಕೆಟ್‌ ಜೊತೆಯಾಟದಲ್ಲಿ ಅಂಬಟಿ ರಾಯುಡು ಮತ್ತು ಪೊಲಾರ್ಡ್‌ 49 ರನ್‌ ಕಲೆ ಹಾಕಿದರು. ಈ ಎರಡು ಜೊತೆಯಾಟಗಳು ಮುಂಬೈ ತಂಡಕ್ಕೆ ನೆರವಾದವು. ಮುಂಬೈ ತಂಡ ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ 62 ರನ್‌ಗಳನ್ನಷ್ಟೇ ಗಳಿಸಿತ್ತು. ಕೊನೆಯ 60 ಎಸೆತಗಳಲ್ಲಿ 131 ರನ್‌ಗಳ ಹರಿದು ಬಂದವು. ಆದರೆ,
ತಂಡ ಸೋಲು ಕಂಡ ಕಾರಣ ಬ್ಯಾಟ್ಸ್‌ಮನ್‌ಗಳ ಅಬ್ಬರದ ಹೊಳಪು ಕಡಿಮೆಯಾಯಿತು.

ಸ್ಕೋರು ವಿವರ

ಮುಂಬೈ ಇಂಡಿಯನ್ಸ್‌  7ಕ್ಕೆ 183 (20 ಓವರ್‌)
ಲೆಂಡ್ಲ್ ಸಿಮನ್ಸ್ ಸಿ ಡು ಪ್ಲೆಸಿಸ್ ಬಿ ಈಶ್ವರ್ ಪಾಂಡೆ  05
ಪಾರ್ಥಿವ್ ಪಟೇಲ್ ಎಲ್‌ಬಿಡಬ್ಲ್ಯು ಬಿ ಆಶಿಶ್ ನೆಹ್ರಾ  00
ಕೋರಿ ಆ್ಯಂಡರ್ಸನ್ ಸಿ ಡು ಪ್ಲೆಸಿಸ್ ಬಿ ಆಶಿಶ್ ನೆಹ್ರಾ  04
ರೋಹಿತ್ ಶರ್ಮಾ ಸಿ ಬ್ರಾವೊ ಬಿ ಆಶಿಶ್ ನೆಹ್ರಾ  50
ಹರಭಜನ್ ಸಿಂಗ್ ಸಿ ರವೀಂದ್ರ ಜಡೇಜಾ ಬಿ ಮೋಹಿತ್ ಶರ್ಮಾ  24
ಕೀರನ್ ಪೋಲಾರ್ಡ್ ಸಿ ಸ್ಮಿತ್ ಬಿ ಬ್ರಾವೊ   64
ಅಂಬಟಿ ರಾಯುಡು ಸಿ ಜಡೇಜಾ ಬಿ ಬ್ರಾವೊ  29
ಜೆ. ಸುಚಿತ್ ಔಟಾಗದೆ  00
ವಿನಯಕುಮಾರ್ ಔಟಾಗದೇ  00

ಇತರೆ:  (ಬೈ 2, ಲೆಗ್‌ಬೈ 1, ವೈಡ್ 4)  07

ವಿಕೆಟ್‌ ಪತನ: 1–1 (ಪಟೇಲ್ 0.4), 2–6 (ಆ್ಯಂಡರ್ಸನ್ 2.5), 3–12 (ಸಿಮನ್ಸ್ 3.4), 4–57 (ಹರಭಜನ್ ಸಿಂಗ್ 9.3), 5–132 (ಶರ್ಮಾ 14.6), 6–181 (ರಾಯುಡು 19.4), 7–181 (ಪೊಲಾರ್ಡ್ 19.5)

ADVERTISEMENT

ಬೌಲಿಂಗ್‌:  ಆಶಿಶ್ ನೆಹ್ರಾ 4–0–23–3 (ವೈಡ್ 1), ಈಶ್ವರ್ ಪಾಂಡೆ 3–1–22–1 (ವೈಡ್ 1), ಮೋಹಿತ್ ಶರ್ಮಾ 4–0–43–1, ರವೀಂದ್ರ ಜಡೇಜಾ 4–0–49–0 (ವೈಡ್ 2), ಆರ್. ಅಶ್ವಿನ್ 1–0–13–0, ಡ್ವೆನ್ ಬ್ರಾವೊ 4–0–30–2

ಚೆನ್ನೈ ಸೂಪರ್‌ ಕಿಂಗ್ಸ್‌ 4ಕ್ಕೆ 189 (16.4 ಓವರ್‌)
ಡ್ವೇನ್‌ ಸ್ಮಿತ್‌ ಸಿ ಮೋಹಿತ್‌ ಶರ್ಮ ಬಿ ಹರಭಜನ್‌ ಸಿಂಗ್‌  62
ಬ್ರೆಂಡನ್ ಮೆಕ್ಲಮ್‌ ಸಿ ವಿನಯ್‌ ಕುಮಾರ್‌ ಬಿ ಹರಭಜನ್‌ ಸಿಂಗ್‌  46
ಸುರೇಶ್‌ ರೈನಾ ಔಟಾಗದೆ  43
ಫಾಫ್‌ ಡು ಪ್ಲೆಸಿಸ್‌ ಬಿ ಲಸಿತ್‌ ಮಾಲಿಂಗ 11
ಮಹೇಂದ್ರ ಸಿಂಗ್‌ ದೋನಿ ಸಿ ಮತ್ತು ಬಿ ಪೊಲಾರ್ಡ್‌  03
ಡ್ವೇನ್‌ ಬ್ರಾವೊ ಔಟಾಗದೆ   13
ಇತರೆ: (ವೈಡ್‌–8, ನೋ ಬಾಲ್‌–3)   11

ವಿಕೆಟ್‌ ಪತನ: 1–109 (ಮೆಕ್ಲಮ್‌; 7.2), 2–115 (ಸ್ಮಿತ್‌; 7.6), 3–144 (ಪ್ಲೆಸಿಸ್‌; 12.2), 4–166 (ದೋನಿ; 14.5)

ಬೌಲಿಂಗ್‌:  ಪವನ್‌ ಸುಯಲ್‌ 3–0–28–0, ಲಸಿತ್‌ ಮಾಲಿಂಗ 4–0–40–1, ಜಗದೀಶ ಸುಚಿತ್‌ 2–0–33–0, ಹರಭಜನ್‌ ಸಿಂಗ್‌ 4–0–44–2, ವಿನಯ್‌ ಕುಮಾರ್‌ 2–0–18–0, ಕೀರನ್‌ ಪೊಲಾರ್ಡ್‌ 1.4–0–26–1.

ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ 6 ವಿಕೆಟ್‌ ಗೆಲುವು ಹಾಗೂ ಎರಡು ಪಾಯಿಂಟ್‌

ಪಂದ್ಯಶ್ರೇಷ್ಠ: ಆಶಿಶ್‌ ನೆಹ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.