ADVERTISEMENT

ಮುಂಬೈಗೆ ಮತ್ತೊಂದು ಜಯದ ನಿರೀಕ್ಷೆ

ಇಂದು ಕಿಂಗ್ಸ್ ಇಲೆವೆನ್‌ ಪಂಜಾಬ್‌ ಎದುರು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 2 ಮೇ 2015, 20:23 IST
Last Updated 2 ಮೇ 2015, 20:23 IST
ಕೀರನ್‌ ಪೊಲಾರ್ಡ್‌(ಎಡ) ಮತ್ತು ಲೆಂಡ್ಲ್‌ ಸಿಮನ್ಸ್‌ ಮುಂಬೈ ತಂಡದ ಶಕ್ತಿ ಎನಿಸಿದ್ದಾರೆ
ಕೀರನ್‌ ಪೊಲಾರ್ಡ್‌(ಎಡ) ಮತ್ತು ಲೆಂಡ್ಲ್‌ ಸಿಮನ್ಸ್‌ ಮುಂಬೈ ತಂಡದ ಶಕ್ತಿ ಎನಿಸಿದ್ದಾರೆ   

ಮೊಹಾಲಿ (ಪಿಟಿಐ): ಹಿಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ವನ್ನು ಎಂಟು ರನ್‌ಗಳಿಂದ ಮಣಿಸಿ ವಿಶ್ವಾ ಸದಲ್ಲಿರುವ ಮುಂಬೈ ಇಂಡಿಯನ್ಸ್‌ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಭಾನುವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ರೋಹಿತ್‌ ಶರ್ಮಾ ನಾಯ ಕತ್ವದ ಮುಂಬೈ ತಂಡ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಎದುರು ಪೈಪೋಟಿ ನಡೆಸಲಿದೆ.

ಐಪಿಎಲ್ ಎಂಟನೇ ಆವೃತ್ತಿಯ ಆರಂಭದ ಪಂದ್ಯಗಳಲ್ಲಿ ನೀರಸ ಆಟವಾಡಿದ್ದ ಮುಂಬೈ ತಂಡ ಈಗ ಚುರುಕಿನ ಸಾಮರ್ಥ್ಯ ನೀಡುತ್ತಿದೆ. ರೋಹಿತ್ ಪಡೆ ಆಡಿರುವ ಎಂಟು ಪಂದ್ಯಗಳಲ್ಲಿಮೂರರಲ್ಲಿ ಗೆಲುವು ಪಡೆದಿದೆ. ಆದರೆ, ಹೋದ ವರ್ಷದ ರನ್ನರ್ಸ್‌ ಅಪ್‌ ಪಂಜಾಬ್‌ ತನ್ನ ಕಳಪೆ ಆಟವನ್ನು ಮುಂದುವರಿಸಿದೆ.

ಪ್ರೀತಿ ಜಿಂಟಾ ಒಡೆತನದ ಈ ತಂಡ ಎಂಟು ಪಂದ್ಯಗಳನ್ನು ಆಡಿದ್ದು ಆರರಲ್ಲಿ ಸೋಲು ಕಂಡಿದೆ. ಶುಕ್ರವಾರ ದೆಹಲಿ ಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ಎದುರು ಸುಲಭವಾಗಿ ಶರಣಾಗಿತ್ತು. ವೀರೇಂದ್ರ ಸೆಹ್ವಾಗ್‌, ಮನನ್‌ ವೋಹ್ರಾ, ಶಾನ್‌ ಮಾರ್ಷ್‌, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ, ನಾಯಕ ಜಾರ್ಜ್‌ ಬೇಲಿ ಅವರಂಥ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಗಳು ಇದ್ದರೂ ಪಂಜಾಬ್‌ ತಂಡಕ್ಕೆ ಈ ಬಾರಿ ನಿರೀಕ್ಷಿತ ಆಟವಾಡಲು ಸಾಧ್ಯವಾ ಗುತ್ತಿಲ್ಲ.

ಡೇರ್‌ಡೆವಿಲ್ಸ್ ಎದುರು ಡೇವಿಡ್‌ ಮಿಲ್ಲರ್ 42 ರನ್‌ ಗಳಿಸಿದ್ದರು. ಇವರನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಆಟಗಾರರು ವೈಫಲ್ಯ ಅನುಭವಿಸಿದ್ದರು. ಡೇರ್‌ಡೆವಿಲ್ಸ್ ಎದುರು 118 ರನ್‌ಗೆ ಕುಸಿದದ್ದು ಇದಕ್ಕೆ ಸಾಕ್ಷಿ. ಸಂದೀಪ್‌ ಶರ್ಮಾ, ಶಾರ್ದೂಲ್‌ ಠಾಕೂರ್‌, ಅನುರೀತ್‌ ಸಿಂಗ್ ಅವರನ್ನು ಹೊಂದಿರುವ ತಂಡ ಬೌಲಿಂಗ್‌ನಲ್ಲಿಯೂ ಬಲಿಷ್ಠವಾಗಿದೆ. ಆದರೂ ಈ ತಂಡಕ್ಕೆ ಯಶಸ್ಸು ಸಿಗುತ್ತಿಲ್ಲ. ಟೂರ್ನಿ ಈಗಾಗಲೇ ಅರ್ಧ ಹಾದಿ ಸವೆಸಿದೆ. ‘ಪ್ಲೇ ಆಫ್‌’ ಹಂತದ ಕನಸು ಉಳಿಯಬೇಕಾದರೆ ಪಂಜಾಬ್‌ಗೆ ಉಳಿದ ಪ್ರತಿ ಪಂದ್ಯದಲ್ಲಿಯೂ ಗೆಲುವು ಅನಿವಾರ್ಯ.

ವಿಶ್ವಾಸದಲ್ಲಿ ಮುಂಬೈ: ಈ ಸಲದ ಟೂರ್ನಿಯಲ್ಲಿ ಸತತ ಐದು ಪಂದ್ಯಗಳಲ್ಲಿ ಗೆಲುವು ಪಡೆದಿದ್ದ ರಾಜಸ್ತಾನ ತಂಡವನ್ನು ಹಿಂದಿನ ಪಂದ್ಯವನ್ನು ಮಣಿಸಿರುವ ಮುಂಬೈ ಇಂಡಿಯನ್ಸ್‌ ಭಾನುವಾರದ ಪಂದ್ಯದಲ್ಲಿ ಗೆಲುವು ಪಡೆಯುವ ನೆಚ್ಚಿನ ತಂಡವೆನಿಸಿದೆ. ಲಿಂಡ್ಲ್ ಸಿಮನ್ಸ್‌, ಪಾರ್ಥೀವ್‌ ಪಟೇಲ್‌, ರೋಹಿತ್‌ ಶರ್ಮಾ, ಉನ್ಮುಕ್ತ್‌ ಚಾಂದ್‌, ರಾಯಲ್ಸ್‌ ಎದುರು ಅರ್ಧಶತಕ ಗಳಿಸಿದ್ದ ಅಂಬಟಿ ರಾಯುಡು ಬ್ಯಾಟಿಂಗ್‌ ವಿಭಾಗದ ಶಕ್ತಿ ಎನಿಸಿದ್ದಾರೆ. ಈ ತಂಡ ಹಿಂದಿನ ಪಂದ್ಯದಲ್ಲಿ ಬೌಲಿಂಗ್‌ ಮೂಲಕ ಪಂದ್ಯ ಜಯಿಸಿತ್ತು. ಕರ್ನಾಟಕ ವಿನಯ್‌ ಕುಮಾರ್‌, ಮಿಷೆಲ್‌ ಮೆಕ್‌ಲಾಗೆನ್‌, ಲಸಿತ್‌ ಮಾಲಿಂಗ, ಸ್ಪಿನ್ನರ್‌ಗಳಾದ ಹರಭಜನ್ ಸಿಂಗ್‌ ಮತ್ತು ಕರ್ನಾಟಕದ ಜೆ. ಸುಚಿತ್‌ ಬೌಲಿಂಗ್‌ನ ಶಕ್ತಿ ಎನಿಸಿದ್ದಾರೆ.
*
ಇಂದಿನ ಪಂದ್ಯಗಳು
ಕಿಂಗ್ಸ್ ಇಲೆವೆನ್‌ ಪಂಜಾಬ್‌-ಮುಂಬೈ ಇಂಡಿಯನ್ಸ್‌

ಸ್ಥಳ: ಮೊಹಾಲಿ, ಆರಂಭ: ಸಂಜೆ 4ಕ್ಕೆ.
ರಾಜಸ್ತಾನ ರಾಯಲ್ಸ್‌-ಡೆಲ್ಲಿ ಡೇರ್‌ಡೆವಿಲ್ಸ್‌
ಸ್ಥಳ: ಮುಂಬೈ, ಆರಂಭ: ರಾತ್ರಿ 8ಕ್ಕೆ.
ನೇರ ಪ್ರಸಾರ: ಸೋನಿ ಸಿಕ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.