ADVERTISEMENT

ಮೂರನೇ ಸುತ್ತಿಗೆ ನಡಾಲ್

​ಪ್ರಜಾವಾಣಿ ವಾರ್ತೆ
Published 28 ಮೇ 2015, 19:30 IST
Last Updated 28 ಮೇ 2015, 19:30 IST

ಪ್ಯಾರಿಸ್‌ (ಎಪಿ/ಐಎಎನ್‌ಎಸ್‌): ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಒಂಬತ್ತು ಸಲ ಚಾಂಪಿಯನ್‌ ಆಗಿರುವ ಸ್ಪೇನ್‌ನ ರಫೆಲ್ ನಡಾಲ್‌ ಈ ಬಾರಿಯೂ ಗೆಲುವಿನ ಓಟ ಮುಂದುವರಿಸಿದ್ದಾರೆ. ಸ್ಪೇನ್‌ನ ಈ ಆಟಗಾರ ತಮ್ಮದೇ ದೇಶದ ನಿಕೊಲಸ್‌ ಅಲ್ಮಾರ್ಗೊ ಅವರನ್ನು ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಇಲ್ಲಿ ಆರನೇ ಶ್ರೇಯಾಂಕ ಹೊಂದಿರುವ ನಡಾಲ್‌ ಒಟ್ಟು 14 ಬಾರಿ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇಲ್ಲಿ ಸತತ ಐದು ವರ್ಷಗಳಿಂದ ಚಾಂಪಿಯನ್‌ ಆಗುತ್ತಾ ಬಂದಿರುವ ನಡಾಲ್‌ 6–4, 6–3, 6–1ರಲ್ಲಿ ಗೆಲುವು ದಾಖಲಿಸಿದರು.

ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ನಡಾಲ್‌ ಅವರ ಬಲಿಷ್ಠ ಸರ್ವ್‌ಗಳ ಮುಂದೆ ಪರದಾಡಿದ ಅಲ್ಮಾರ್ಗೊ ಪಂದ್ಯದ ಮೊದಲ ಸೆಟ್‌ನಿಂದಲೂ ರಕ್ಷಣಾತ್ಮಕ ಆಟದ ಮೊರೆ ಹೋದರು. ಎರಡು ಬ್ರೇಕ್‌ ಪಾಯಿಂಟ್‌ಗಳನ್ನು ಉಳಿಸಿದ ಬಳಿಕ ಚುರುಕಿನ ಆಟ ತೋರಿದರು. 5–4ರಲ್ಲಿ ಮುನ್ನಡೆ ಗಳಿಸಿದಾಗ ಒಂದು ಪಾಯಿಂಟ್‌ ಕಲೆ ಹಾಕಿದರು.

ಹೋದ ವರ್ಷ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ ಮೂರನೇ ಸುತ್ತಿಗೆ ಮುನ್ನಡೆದರು. ಎರಡನೇ ಸುತ್ತಿನ ಹೋರಾಟದಲ್ಲಿ ಈ ಆಟಗಾರ 6–3, 6–4, 5–7, 6–3ರಲ್ಲಿ ಸರ್ಬಿಯಾದ ದೂಸಾನ್‌ ಲಾಜೊವಿಕ್‌ ಎದುರು ಗೆಲುವು ಪಡೆದರು.

ಮೊದಲ ಎರಡೂ ಸೆಟ್‌ಗಳಲ್ಲಿ ಗೆಲುವು ಪಡೆದ ವಾವ್ರಿಂಕ ಮೂರನೇ ಸೆಟ್‌ನಲ್ಲಿ ಪ್ರಬಲ ಹೋರಾಟ ನಡೆಸಿ ಸೋಲು ಕಂಡರು. ವಿಶ್ವ ರ್‍ಯಾಂಕ್‌ನಲ್ಲಿ ಎಂಟನೇ ಸ್ಥಾನ ಹೊಂದಿರುವ ಈ ಆಟಗಾರ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಸರ್ಜೆಯಾ ಸ್ಟೆಕೊವಿಸ್ಕ್‌ ಹಾಗೂ ಅಮೆರಿಕದ ಸ್ಟೀವ್ ಜಾನ್ಸನ್‌ ನಡುವಿನ ಪಂದ್ಯದಲ್ಲಿ ಗೆಲ್ಲುವ ಆಟಗಾರನ ಎದುರು ಪೈಪೋಟಿ ನಡೆಸಲಿದ್ದಾರೆ. ಒಂದು ವೇಳೆ ವಾವ್ರಿಂಕ ಮೂರನೇ ಸುತ್ತಿನಲ್ಲಿ ಜಯ ಪಡೆದರೆ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ರೋಜರ್ ಫೆಡರರ್‌ ಸವಾಲು ಎದುರಿಸಬೇಕಾಗುತ್ತದೆ.

ವಾವ್ರಿಂಕ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಒಂದು ಸಲವಷ್ಟೇ ಚಾಂಪಿಯನ್‌ ಆಗಿದ್ದಾರೆ. ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ 2013ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿದೆ. 2014ರಲ್ಲಿ ವಿಂಬಲ್ಡನ್‌ ಮತ್ತು 2013ರಲ್ಲಿ ಅಮೆರಿಕ ಓಪನ್‌ ಟೂರ್ನಿಯಲ್ಲಿ ನಾಲ್ಕರ ಘಟ್ಟ ತಲುಪಿದ್ದರು.

ನಾಲ್ಕನೇ ಸುತ್ತಿಗೆ ನಿಷಿಕೋರಿ:
ಅಮೆರಿಕ ಓಪನ್‌ ಟೂರ್ನಿಯಲ್ಲಿ ಹೋದ ವರ್ಷ ಫೈನಲ್‌ ಪ್ರವೇಶಿಸಿ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದ ಜಪಾನ್‌ನ ಕೀ ನಿಷಿಕೋರಿ ಇಲ್ಲಿ ನಾಲ್ಕನೇ ಸುತ್ತಿಗೆ ಸುಲಭವಾಗಿ ಲಗ್ಗೆ ಇಟ್ಟಿದ್ದಾರೆ.

ನಿಷಿಕೋರಿ ಅವರು ಬೆಂಜಮಿನ್‌ ಬೇಕರ್‌ ಎದುರು ಪೈಪೋಟಿ ನಡೆಸಬೇಕಿತ್ತು. ಆದರೆ , ಅವರು ಭುಜದ ನೋವಿನಿಂದ ಬಳಲಿದ ಕಾರಣ ಜಪಾನ್‌ ಆಟಗಾರನ ಮುಂದಿನ ಸುತ್ತಿನ ಪ್ರವೇಶ ಸುಗಮವಾಯಿತು. ಫ್ರೆಂಚ್‌ ಓಪನ್ ಟೂರ್ನಿಯಲ್ಲಿ 2013ರಲ್ಲಿ ನಿಷಿಕೋರಿ ನಾಲ್ಕನೇ ಸುತ್ತಿನಲ್ಲಿ ಸೋತಿದ್ದರು. ಇದೇ ಅವರ ಉತ್ತಮ ಸಾಧನೆ ಎನಿಸಿದೆ.

‘ಬೆಂಜಮಿನ್‌ ಭುಜದ ನೋವಿನಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಆಡುತ್ತಿಲ್ಲ.  ಆದ್ದರಿಂದ ನಿಷಿಕೋರಿ 16ರ ಘಟ್ಟ ತಲುಪಿದ್ದಾರೆ’ ಎಂದು ಟೂರ್ನಿಯ ಸಂಘಟಕರು ಟ್ವಿಟ್‌ ಮಾಡಿದ್ದಾರೆ.

ಸಾನಿಯಾ–ಬ್ರುನೊಗೆ ಆಘಾತ
ಪ್ಯಾರಿಸ್(ಪಿಟಿಐ):  ಭಾರತದ ಸಾನಿಯಾ ಮಿರ್ಜಾ ಮತ್ತು ಬ್ರೆಜಿಲ್‌ನ ಬ್ರುನೊ ಸೋರ್ಸ್ ಜೋಡಿಯು ಗುರುವಾರ ಫ್ರೆಂಚ್‌ ಓಪನ್ ಟೆನಿಸ್‌ನ ಮಿಶ್ರ ಡಬಲ್ಸ್‌ನ ಪ್ರಥಮ ಸುತ್ತಿನಲ್ಲಿ ಆಘಾತ ಅನುಭವಿಸಿದರು .

ಮೊದಲ ಸುತ್ತಿನಲ್ಲಿ ಸಾನಿಯಾ ಮತ್ತು ಬ್ರುನೊ ಜೋಡಿಯು 2–6, 2–6ರಿಂದ ಶ್ರೇಯಾಂಕರಹಿತ ಅನ್ನಾಲೆನಾ ಗ್ರೋನ್‌ಫೆಲ್ಡ್ ಮತ್ತು ಜೀನ್ ಜುಲಿಯನ್ ರೋಜರ್ ವಿರುದ್ಧ ಸೋಲನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT