ADVERTISEMENT

ಮೂರನೇ ಸುತ್ತಿಗೆ ಶರಪೋವಾ

ಫ್ರೆಂಚ್‌ ಓಪನ್‌ ಟೆನಿಸ್‌: ಸಿಮೊನಾ ಹಲೆಪ್‌ಗೆ ಆಘಾತ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST
ಗೆಲುವಿನ ಆಟ... ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದ ರಷ್ಯಾದ ಮರಿಯಾ ಶರಪೋವಾ ಆಟದ ವೈಖರಿ ಎಎಫ್‌ಪಿ ಚಿತ್ರ
ಗೆಲುವಿನ ಆಟ... ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದ ರಷ್ಯಾದ ಮರಿಯಾ ಶರಪೋವಾ ಆಟದ ವೈಖರಿ ಎಎಫ್‌ಪಿ ಚಿತ್ರ   

ಪ್ಯಾರಿಸ್‌ (ರಾಯಿಟರ್ಸ್‌): ಅಮೋಘ ಆಟ ಮುಂದುವರಿಸಿರುವ ಸ್ವಿಟ್ಜರ್‌ಲೆಂಡ್‌ ನ ರೋಜರ್ ಫೆಡರರ್‌ ಹಾಗೂ ರಷ್ಯಾದ ಮರಿಯಾ ಶರಪೋವಾ ಇಲ್ಲಿ ನಡೆಯು ತ್ತಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ ಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಫೆಡರರ್‌ 6–2, 7–6, 6–3ರ ನೇರ ಸೆಟ್‌ಗಳಿಂದ ಸ್ಪೇನ್‌ನ ಮಾರ್ಷೆಲ್‌ ಗ್ರಾನೊಲ್ಲರ್ಸ್‌ ಅವರನ್ನು ಮಣಿಸಿದರು.

ಆರಂಭದಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದ ಫೆಡರರ್‌ ನಿರಾಯಾಸ ವಾಗಿ ಮೊದಲ ಸೆಟ್‌ ಗೆದ್ದು ಮುನ್ನಡೆ ಪಡೆದುಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಪುಟಿದೆದ್ದ ಗ್ರಾನೊಲ್ಲರ್ಸ್‌ ತೀವ್ರ ಪೈಪೋಟಿ ಒಡ್ಡಿದರು. ಇದರ ನಡುವೆಯೂ ಸ್ವಿಸ್‌ ಆಟಗಾರ ಸೆಟ್‌ ತಮ್ಮದಾಗಿಸಿಕೊಂಡರು. ಮೂರನೇ ಸೆಟ್‌ನಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದ ಫೆಡರರ್‌ ಎದುರಾಳಿ ಆಟಗಾರ ನಿಗೆ ಚೇತರಿಸಿಕೊಳ್ಳಲು ಅವಕಾಶ ನೀಡದೆ ಗೆಲುವಿನ ಸಂಭ್ರಮ ಆಚರಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಸ್ಟಾನಿಸ್ಲಾಸ್‌ ವಾವ್ರಿಂಕಾ 6–3, 6–4, 5–7, 6–3ರಲ್ಲಿ ದುಸಾನ್‌ ಲಾಜೋವಿಚ್‌ ಎದುರೂ, ಸ್ಟೀವ್‌ ಜಾನ್ಸನ್‌ 2–6, 6–3, 7–6, 7–6ರಲ್ಲಿ ಸರ್ಜೀ ಸ್ಟಾಕೋವ್‌ಸ್ಕಿ ಮೇಲೂ, ಗಿಲ್ಲೆಸ್‌ ಸಿಮೊನ್‌ 7–5, 6–2, 6–3ರಲ್ಲಿ ಮಾರ್ಟಿನ್‌ ಕ್ಲಿಜಾನ್‌ ವಿರುದ್ಧವೂ, ಜೋ ವಿಲ್ಫ್ರೆಡ್‌ ಸೋಂಗ 6–4, 6–1, 6–1ರಲ್ಲಿ ದುದಿ ಸೆಲಾ ಮೇಲೂ, ನಿಕೋಲಸ್‌ ಮಹುತ್‌ 6–3, 3–6, 7–5, 6–3ರಲ್ಲಿ ಅರ್ನೆಸ್ಟ್ಸ್‌ ಗುಲ್ಬಿಸ್‌ ಎದುರೂ, ಬೆನೊಯಿತ್‌ ಪೈರೆ 6–1, 6–3, 7–5ರಲ್ಲಿ ಫ್ಯಾಬಿಯೊ ಫಾಗ್ನಿನಿ ವಿರುದ್ಧವೂ, ಲುಕಾಸ್‌ ರಸೊಲ್‌ 6–4, 6–2, 6–2ರಲ್ಲಿ ರಾಬರ್ಟೊ ಬಟಿಸ್ಟಾ ಎದುರೂ, ಪ್ಯಾಬ್ಲೊ ಕ್ಯುವಸ್‌ 7–6, 7–5, 6–7, 7–5ರಲ್ಲಿ ಡೊಮಿನಿಕ್‌ ಥಿಯೆಮ್‌ ಮೇಲೂ, ಕೀ ನಿಶಿಕೋರಿ 7–5, 6–4, 6–4ರಲ್ಲಿ ಥಾಮಸ್‌ ಬೆಲುಕಿ ವಿರುದ್ಧವೂ, ದಮಿರ್‌ ಜುಮಹುರ್ 6–4, 6–3, 4–6, 6–2ರಲ್ಲಿ ಮಾರ್ಕೊಸ್‌ ಬಗ್ದತಿಸ್‌ ಎದುರೂ, ಬೆಂಜಮಿನ್‌ ಬೆಕರ್‌ 6–4, 0–6, 1–6, 7–5, 10–8ರಲ್ಲಿ ಫರ್ನಾಂಡೊ ವರ್ಡಾಸ್ಕೊ ವಿರುದ್ಧವೂ, ತೆಮುರಜ್‌ ಗಾಬಶ್ವಿಲಿ 6–3, 6–4, 6–2ರಲ್ಲಿ ಜುವಾನ್‌ ಮೊನಾಕೊ ಎದುರೂ ಗೆಲುವು ಕಂಡರು.

ಶರಪೋವಾಗೆ ಗೆಲುವು: ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ರಷ್ಯಾದ ಮರಿಯಾ ಶರಪೋವ 6–3, 6–1ರಲ್ಲಿ ವಿಟಾಲಿಯಾ ದಿಯಾಚೆಂಕೊ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರೊಮೇನಿಯದ ಸಿಮೊನ ಹಲೆಪ್‌ 5–7, 1–6ರಲ್ಲಿ ಕ್ರೊವೇಷ್ಯಾದ ಮಿರ್ಜಾನ ಲೂಸಿಕ್‌ ಬರೋನಿ ಎದುರು ಆಘಾತ ಅನುಭವಿಸಿದರು.

ಮತ್ತೊಂದು ಪಂದ್ಯದಲ್ಲಿ ಜರ್ಮನಿಯ ಸಬಿನೆ ಲಿಸಿಕಿ ಮೊದಲ ಸೆಟ್‌ನಲ್ಲಿ 6–1ರಲ್ಲಿ ಮುನ್ನಡೆ ಹೊಂದಿದ್ದ ವೇಳೆ ಆಸ್ಟ್ರೇಲಿಯಾದ ದರಿಯಾ ಗಾವರಿಲೋವ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಲಿಸಿಕಿಗೆ ಅದೃಷ್ಟದ ಗೆಲುವು ಸಿಕ್ಕಿತು.

ಇತರ ಪಂದ್ಯಗಳಲ್ಲಿ ಡೊನ್ನಾ ವೆಕಿಕ್‌ 6–4, 6–3ರಲ್ಲಿ ಬೊಜಾನ ಜೊವಾನೊವ್‌ಸ್ಕಿ ಎದುರೂ, ಅಲೈಜ್‌ ಕಾರ್ನೆಟ್‌ 6–2, 7–5ರಲ್ಲಿ ಅಲೆಕ್ಸಾಂಡ್ರ ಡುಲ್ಗೆರು ಮೇಲೂ, ಅನ್ನಿಕಾ ಬೆಕ್‌ 6–2, 6–2ರಲ್ಲಿ ಪೌಲಾ ಕನಿಯಾ ವಿರುದ್ಧವೂ, ಲೂಸಿ ಸಫರೋವಾ 6–2, 6–0ರಲ್ಲಿ ಕುರುಮಿ ನಾರಾ ಮೇಲೂ, ಸಮಂತಾ ಸ್ತೋಸುರ್‌ 6–0, 6–1ರಲ್ಲಿ ಅಮಂಡೈನ್‌ ಹೆಸ್ಸೆ ವಿರುದ್ಧವೂ  ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.