ADVERTISEMENT

ಮೈದಾನದಲ್ಲಿ ಮತ್ತೆ ಹರ್ಷ ಭೋಗ್ಲೆ?

ಪಿಟಿಐ
Published 28 ಮಾರ್ಚ್ 2017, 19:30 IST
Last Updated 28 ಮಾರ್ಚ್ 2017, 19:30 IST
ಹರ್ಷ ಭೋಗ್ಲೆ
ಹರ್ಷ ಭೋಗ್ಲೆ   

ಕೋಲ್ಕತ್ತ: ಸೊಗಸಾದ ಮಾತಿನ ಮೂಲಕ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಮನಸ್ಸು ಗೆದ್ದಿರುವ  ಹರ್ಷ ಭೋಗ್ಲೆ ಅವರು ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್ ಹತ್ತನೇ ಆವೃತ್ತಿಯಲ್ಲಿ ಮತ್ತೆ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

‘ಐಪಿಎಲ್‌ ಟೂರ್ನಿಗೆ ಭೋಗ್ಲೆ ವೀಕ್ಷಕ ವಿವರಣೆ ನೀಡಬೇಕೆಂಬುದು ನಮ್ಮ ಆಸೆ. ಅವರನ್ನು ವಾಹಿನಿಯ ಸ್ಟುಡಿಯೊದಲ್ಲಿ ನೋಡುವ  ಗುರಿಯಿದೆ’ ಎಂದು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾದ ಇವಿಪಿ ಮತ್ತು  ವ್ಯವಹಾರ ವಿಭಾಗದ ಮುಖ್ಯಸ್ಥ ಪ್ರಸನ್ನ ಕೃಷ್ಣನ್ ತಿಳಿಸಿದ್ದಾರೆ. 

ಹರ್ಷ ಭೋಗ್ಲೆ ಅವರೊಂದಿಗೆ ವೀಕ್ಷಕ ವಿವರಣೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಬಿಸಿಸಿಐ ಹೋದ ವರ್ಷ ರದ್ದು ಮಾಡಿಕೊಂಡಿತ್ತು. ಆದರೆ ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಭಾರತ ತಂಡದ ಆಟವನ್ನು ಟೀಕಿಸಿದ್ದರಿಂದ ಆಟಗಾರರ ಒತ್ತಡಕ್ಕೆ ಮಣಿದು ಕ್ರಿಕೆಟ್‌ ಮಂಡಳಿ ಭೋಗ್ಲೆ ಅವರನ್ನು ಕೈಬಿಟ್ಟಿದೆ ಎನ್ನುವ ಸುದ್ದಿ ಹರಿದಾಡಿತ್ತು.

ADVERTISEMENT

ಭೋಗ್ಲೆ ಅವರ ವೀಕ್ಷಕ ವಿವರಣೆಗೆ ಭಾರತ ತಂಡದ ಹಿಂದಿನ ನಾಯಕ ಮಹೇಂದ್ರ ಸಿಂಗ್‌ ದೋನಿ ಮತ್ತು ಕೆಲ ಆಟಗಾರರೂ ವಿರೋಧಿಸಿದ್ದೂ ಒಂದು ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು. ಒಪ್ಪಂದ ರದ್ದು ಮಾಡಿದ್ದ ಕಾರಣ ಭೋಗ್ಲೆ ಒಂದು ವರ್ಷ ಯಾವುದೇ ಕ್ರಿಕೆಟ್‌ ಪಂದ್ಯಗಳಿಗೂ ವಾಹಿನಿಯಲ್ಲಿ ವೀಕ್ಷಕ ವಿವರಣೆ ನೀಡಿರಲಿಲ್ಲ.

ಐಪಿಎಲ್ ಟೂರ್ನಿಯ ವೇಳೆ ಪಂದ್ಯಗಳ ಪ್ರಸಾರದ ಹಕ್ಕು ಪಡೆದಿರುವ ಸೋನಿ ಸಿಕ್ಸ್‌ ವಾಹಿನಿಯು ದೇಶದ ವಿವಿಧ ಭಾಗಗಳಲ್ಲಿ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಏಪ್ರಿಲ್‌ 5ರಿಂದ ಮೇ 21ರ ವರೆಗೆ 35 ನಗರಗಳಲ್ಲಿ ಕ್ರಿಕೆಟ್‌ ಪ್ರೇಮಿಗಳಿಗಾಗಿ ‘ಫ್ಯಾನ್‌ ಪಾರ್ಕ್‌’ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.