ADVERTISEMENT

ಮೊದಲ ಜಯಕ್ಕೆ ಕಾದಿರುವ ಭಾರತ

ಕ್ರಿಕೆಟ್‌: ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯ ಇಂದು, ಒತ್ತಡದಲ್ಲಿ ದೋನಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಕಾರ್ಡಿಫ್‌, ವೇಲ್ಸ್‌ (ಪಿಟಿಐ): ಟೆಸ್ಟ್‌ ಸರಣಿಯಲ್ಲಿನ ಹೀನಾಯ ಸೋಲಿನ ಒತ್ತಡದ ನಡುವೆಯೂ ಏಕದಿನ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯುವ ಆಸೆ ಹೊಂದಿರುವ ಭಾರತ ತಂಡ ಬುಧವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಪೈಪೋಟಿ ನಡೆಸಲಿದೆ.

ಬ್ರಿಸ್ಟಲ್‌ನಲ್ಲಿ ಆಯೋಜನೆಯಾಗಿದ್ದ ಮೊದಲ ಪಂದ್ಯ ಒಂದೂ ಎಸೆತ ಕಾಣದೆ ಮಳೆಗೆ ಆಹುತಿ ಯಾಗಿತ್ತು. ಆದ್ದರಿಂದ ಸರಣಿಯಲ್ಲಿನ ಉಳಿದ ನಾಲ್ಕು ಪಂದ್ಯಗಳಲ್ಲಿ ದೋನಿ ಪಡೆ  ಮೂರು ಪಂದ್ಯಗಳಲ್ಲಿಯಾದರೂ ಗೆಲುವು ಪಡೆಯಬೇಕಿದೆ.

ಟೆಸ್ಟ್‌ನಲ್ಲಿ ಸೋಲಿನ ಬಳಿಕ ಬಿಸಿಸಿಐ ತಂಡದಲ್ಲಿ  ಹಲವು ಬದಲಾವಣೆ ಮಾಡಿತ್ತು. ಈ ವೇಳೆ ಕೋಚ್‌ ಡಂಕನ್‌ ಫ್ಲೆಚರ್‌ ಅವರನ್ನು ‘ಬಾಸ್‌’ ಎಂದು ಹೇಳಿರುವ ದೋನಿ ವಿವಾದಕ್ಕೆ ಒಳಗಾಗಿದ್ದಾರೆ.  ಈ ಹೇಳಿಕೆ ಕುರಿತು ಚರ್ಚಿಸುವುದಾಗಿ ಬಿಸಿಸಿಐ ತಿಳಿಸಿರುವುದರಿಂದ ದೋನಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಂಚಿಯ ಆಟಗಾರ ಆಟಕ್ಕಿಂತ ಹೆಚ್ಚಾಗಿ ತಂಡದ ಆಡಳಿತದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆಟದ ಬಗ್ಗೆ ಯೋಚಿಸುವುದು ಒಳಿತು ಎಂದು ಕೆಲವರು ಟೀಕಿಸಿದ್ದಾರೆ. ಈ ಒತ್ತಡದ ನಡುವೆಯೂ ದೋನಿ ತಂಡವನ್ನು ಮುನ್ನಡೆಸಬೇಕಿದೆ.

ಬ್ಯಾಟ್ಸ್‌ಮನ್‌ಗಳ ಮೇಲಿದೆ ನಿರೀಕ್ಷೆಯ ಹೊರೆ: ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು ಏಕದಿನ ಮಾದರಿಯಲ್ಲಿ ತಮ್ಮ ಆಟದಲ್ಲಿ ಸುಧಾರಿಸಿಕೊಳ್ಳಬೇಕಿದೆ. ಇಲ್ಲವಾದರೆ, ಮತ್ತೊಂದು ನಿರಾಸೆ ತಪ್ಪಿದ್ದಲ್ಲ.

ಮೊದಲ ಏಕದಿನ ಪಂದ್ಯಕ್ಕೂ ಮೊದಲು ಭಾರತ ಒಂದು ಅಭ್ಯಾಸ ಪಂದ್ಯವನ್ನಾಡಿತ್ತು. ಆಗ, ಉಪನಾಯಕ ವಿರಾಟ್‌ ಕೊಹ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದರು. ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಸುರೇಶ್‌ ರೈನಾ ಮತ್ತು ಅಂಬಟಿ ರಾಯುಡು ಮೇಲೆ ಹೆಚ್ಚು ಜವಾಬ್ದಾರಿಯಿದೆ.

ಏಕದಿನ ಮಾದರಿಯಲ್ಲಿ ರೋಹಿತ್‌ ಶರ್ಮ ಉತ್ತಮ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ‘ರೋಹಿತ್‌ ಆರಂಭಿಕ ಆಟಗಾರನಾಗಿ ಯಶಸ್ಸು ಕಂಡಿದ್ದಾರೆ. ಅವರ ಜೊತೆ ಶಿಖರ್‌ ಧವನ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ’ ಎಂದು ದೋನಿ ಪತ್ರಿಕಾಗೋಷ್ಠಿಯ ವೇಳೆ ಹೇಳಿದರು.

ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಗಳಿಸಲು ಸಾಕಷ್ಟು ಪೈಪೋಟಿ ಇರುವ ಕಾರಣ ಮುಂಬೈನ ಆಟಗಾರ ರೋಹಿತ್‌ ಭಾನುವಾರ ನೆಟ್ಸ್‌ನಲ್ಲಿ ಸಾಕಷ್ಟು ಹೊತ್ತು ತಾಲೀಮು ನಡೆಸಿದ್ದರು.  ರೈನಾ ಮತ್ತು ಅಂಬಟಿ ರಾಯುಡು ಕೂಡಾ ಹೆಚ್ಚು ಸಮಯವನ್ನು ನೆಟ್ಸ್‌ನಲ್ಲಿ ಕಳೆದರು.

ಪ್ರವಾಸಿ ತಂಡ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್‌ ವಿಭಾಗದತ್ತ ಗಮನ ಹರಿಸಬೇಕಿದೆ. ಟೆಸ್ಟ್‌ ಸರಣಿಯ ವೇಳೆ ಭಾರತ ಸ್ಲಿಪ್‌ನಲ್ಲಿಯೇ ಹಲವು ಕ್ಯಾಚ್‌ ಕೈಚೆಲ್ಲಿತ್ತು. ಬ್ಯಾಟ್ಸ್‌ಮನ್‌ ಮತ್ತು ಸಾಂದರ್ಭಿಕ ಬೌಲರ್ ಆಗಿ ಗುರುತಿಸಿಕೊಂಡಿರುವ ರಾಯುಡು  ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ರಾಯುಡು ನ್ಯೂಜಿಲೆಂಡ್‌ನಲ್ಲಿ ಬೌಲಿಂಗ್‌ ಮಾಡಿದ್ದರು. ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್‌ ವೇಳೆಯೂ ಅವರು ಬೌಲ್‌ ಮಾಡಿದ್ದರು.

ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್‌ ಮತ್ತು ಕರಣ್‌ ಶರ್ಮ ಅವರಿಗೆ ಸ್ಥಾನ ಸಿಗುವುದು ಅನುಮಾನವಿದೆ. ಪ್ರಮುಖ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಹಾಗೂ ಆರ್‌. ಅಶ್ವಿನ್‌ ಆಡುವುದು ಖಚಿತ. ಮುಂದಿನ ವರ್ಷ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ ವೇಳೆಗೆ ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದೊಂದಿಗೆ ಬಿಸಿಸಿಐ ಯುವ ಆಟಗಾರರನ್ನು ಸರಣಿಗೆ ಆಯ್ಕೆ ಮಾಡಿದೆ.

ಇಂಗ್ಲೆಂಡ್‌ಗೂ ಜಯದ ಆಸೆ: ಏಕದಿನ ತಂಡದಲ್ಲಿ ಅಲೆಕ್ಸ್‌ ಹೇಲ್ಸ್‌ಗೆ ಸ್ಥಾನ ಲಭಿಸಿರುವುದಕ್ಕೆ ಸಂತೋಷಗೊಂಡಿರುವ ಆತಿಥೇಯ ನಾಯಕ ಅಲಸ್ಟೇರ್ ಕುಕ್‌ ಪಡೆ ವಿಶ್ವಾಸದಲ್ಲಿದೆ. ಈ ತಂಡ  ಶುಭಾರಂಭ ಮಾಡುವ ಆಸೆ ಹೊಂದಿದೆ.
ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.