ADVERTISEMENT

ಮೊದಲ ಫೈನಲ್‌ ಮೇಲೆ ಕಣ್ಣು

ಕೆಪಿಎಲ್‌: ಬುಲ್ಸ್‌–ನಮ್ಮ ಶಿವಮೊಗ್ಗ ಇಂದು ಸೆಮಿಫೈನಲ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದನದಲ್ಲಿ ಗುರುವಾರ ಬಿಜಾಪುರ ಬುಲ್ಸ್‌ ತಂಡದ ಆಟಗಾರರು ಅಭ್ಯಾಸದಲ್ಲಿ ನಡೆಸಿದ್ದರು. ಕೆ.ಎಸ್‌. ಕರಿಯಪ್ಪ ಬಾಲಿಂಗ್‌ ವೈಖರಿ, ಸಹ ಆಟಗಾರರು ಇದ್ದಾರೆ.
ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದನದಲ್ಲಿ ಗುರುವಾರ ಬಿಜಾಪುರ ಬುಲ್ಸ್‌ ತಂಡದ ಆಟಗಾರರು ಅಭ್ಯಾಸದಲ್ಲಿ ನಡೆಸಿದ್ದರು. ಕೆ.ಎಸ್‌. ಕರಿಯಪ್ಪ ಬಾಲಿಂಗ್‌ ವೈಖರಿ, ಸಹ ಆಟಗಾರರು ಇದ್ದಾರೆ.   

ಹುಬ್ಬಳ್ಳಿ: ಹಿಂದಿನ ಎರಡೂ ಆವೃತ್ತಿಗಳಲ್ಲಿ ಆರನೇ ಸ್ಥಾನ ಪಡೆದಿದ್ದ ನಮ್ಮ ಶಿವಮೊಗ್ಗ ತಂಡ ಕೆಪಿಎಲ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸುವ ಆಸೆಯಲ್ಲಿವೆ. ಇದಕ್ಕಾಗಿ ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಬಿಜಾಪುರ ಬುಲ್ಸ್‌ ವಿರುದ್ಧ ಶುಕ್ರವಾರ ವೇದಿಕೆ ಸಜ್ಜುಗೊಂಡಿದೆ.

ಭರತ್‌ ಚಿಪ್ಲಿ ನಾಯಕರಾಗಿರುವ ಬುಲ್ಸ್ ತಂಡ ಲೀಗ್‌ ಹಂತದಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಎಂಟು ಪಾಯಿಂಟ್ಸ್ ಕಲೆಹಾಕಿತ್ತು. ಇದರಿಂದ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ನಾಕೌಟ್‌ ತಲುಪಿದೆ.

ಅನುಭವಿಗಳಾದ ಅಭಿಮನ್ಯು ಮಿಥುನ್‌, ಎಚ್‌.ಎಸ್‌. ಶರತ್‌  ಇರುವ ತಂಡ ಹಿಂದಿನ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಕೊನೆಯ ಓವರ್‌ನಲ್ಲಿ ರೋಚಕವಾಗಿ ಮಣಿಸಿತ್ತು.

ADVERTISEMENT

ಆ ಎರಡು ಪಂದ್ಯಗಳಲ್ಲಿ ಗೆದ್ದಿದ್ದ  ಬುಲ್ಸ್‌ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಗುರುವಾರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಆಟಗಾರರ ಮೊಗದ ಮೇಲಿದ್ದ ನಗುವೇ ಇದಕ್ಕೆ ಸಾಕ್ಷಿ. ಶರತ್‌ ಮತ್ತು ಮಿಥುನ್‌ ಮೊದಲು ಬೌಲಿಂಗ್ ಅಭ್ಯಾಸಕ್ಕೆ ಒತ್ತು ಕೊಟ್ಟು ನಂತರ ಬ್ಯಾಟಿಂಗ್ ಮಾಡಿದರು.

‘ಹಿಂದಿನ ಎರಡು ಪಂದ್ಯಗಳಲ್ಲಿ ಪಡೆದ ಗೆಲುವುಗಳು ನಮ್ಮ ತಂಡದ ಆಟಗಾರರ ವಿಶ್ವಾಸ ಹೆಚ್ಚಿಸಿವೆ. ಶರತ್‌ ಚುರುಕಿನ ಬೌಲಿಂಗ್‌ನಿಂದಲೇ ನಾವು ಜಯ ಸಾಧಿಸಿದ್ದೇವೆ. ಸೆಮಿಫೈನಲ್‌ನಲ್ಲಿಯೂ ಅದೇ ರೀತಿ ಆಡಬೇಕು ಎಂಬುದು ನಮ್ಮ ಗುರಿ’ ಎಂದು ಬುಲ್ಸ್ ತಂಡದ ನಾಯಕ ಚಿಪ್ಲಿ ಹೇಳಿದರು.

ಬುಲ್ಸ್ ತಂಡ ಮೊದಲ ಆವೃತ್ತಿಯಿಂದಲೂ ಕೆಪಿಎಲ್‌ನಲ್ಲಿ ಆಡುತ್ತಿದೆ. ಎರಡು ಸಲ ಸೆಮಿಫೈನಲ್‌ನಲ್ಲಿ ನಿರಾಸೆ ಕಂಡಿತ್ತು. 2015ರಲ್ಲಿ ಚಾಂಪಿಯನ್‌ ಆಗಿತ್ತು.

ತಿರುಗೇಟು ನೀಡುವ ಕಾತರ: ಉಭಯ ತಂಡಗಳು ಲೀಗ್‌ ಹಂತದಲ್ಲಿ ಪೈಪೋಟಿ ನಡೆಸಿದ್ದಾಗ ಶಿವಮೊಗ್ಗ ತಂಡ ಗೆಲುವು ಪಡೆದಿತ್ತು. ಹಿಂದಿನ ಪಂದ್ಯದ ಸೋಲಿಗೆ ತಿರುಗೇಟು ನೀಡಲು ಬುಲ್ಸ್‌ ಕಾಯುತ್ತಿದೆ.

ಚೊಚ್ಚಲ ಫೈನಲ್‌ ಕನಸು: ಮೂರನೇ ಬಾರಿ ಟೂರ್ನಿಯಲ್ಲಿ ಆಡುತ್ತಿರುವ ನಮ್ಮ ಶಿವಮೊಗ್ಗ ತಂಡ ಮೊದಲಸಲ ಸೆಮಿಫೈನಲ್‌ ಪ್ರವೇಶಿಸಿದೆ.  ಈ ತಂಡ ಹಿಂದಿನ ಎರಡೂ ಆವೃತ್ತಿಗಳಲ್ಲಿ ಲೀಗ್‌ ಹಂತದಲ್ಲಿ ಮುಗ್ಗರಿಸಿತ್ತು.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.