ADVERTISEMENT

ರಷ್ಯಾದಲ್ಲಿ ಬೆಳಗಾವಿಯ ಹುಸೇನ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST
ಹುಸೇನ್‌ ಸಲೀಂಸಾಬ್‌ ಮುಲ್ಲಾ 
ಹುಸೇನ್‌ ಸಲೀಂಸಾಬ್‌ ಮುಲ್ಲಾ    

ಬೆಳಗಾವಿ: ಇಲ್ಲಿನ ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿ ಹುಸೇನ್‌ ಸಲೀಂಸಾಬ್‌ ಮುಲ್ಲಾ ಅವರು ರಷ್ಯಾದ ‘ಯಾಕುಸ್ಕ್‌–2016’ ಚಿಲ್ಡ್ರನ್‌ ಆಫ್‌ ಏಷ್ಯಾ 6ನೇ ಅಂತರರಾಷ್ಟ್ರೀಯ ಕ್ರೀಡಾ ಕೂಟದ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸುಲ್ತಾನ್‌ಪುರದ ಹುಸೇನ್‌ ಸಲೀಂಸಾಬ್‌ ಇಲ್ಲಿನ ಶಹಾಪುರದ  ನೆಹರೂ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜುಲೈ ಮೂರನೇ ವಾರ ರಷ್ಯಾದ ಯಾಕುಸ್ಕ್‌ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಬಾಲಕರ ವಿಭಾಗದ  68 ಕೆ.ಜಿ. ವಿಭಾಗದಲ್ಲಿ 3ನೇ ಸ್ಥಾನ ಗಳಿಸಿ ದ್ದಾರೆ.

‘ಏಳು ವರ್ಷದಿಂದ ಕುಸ್ತಿ ಕಲಿಯುತ್ತಿದ್ದೇನೆ. ಭಾರತೀಯ ಸಾಂಪ್ರದಾಯಿಕ ಕುಸ್ತಿ ಒಕ್ಕೂಟ ನನ್ನನ್ನು ಆಯ್ಕೆ ಮಾಡಿತ್ತು. ನನ್ನೊಂದಿಗೆ ಇತರ ರಾಜ್ಯಗಳ ಐವರು ಪೈಲ್ವಾನರು ಹಾಗೂ ನಾಲ್ವರು ಕೋಚ್‌ಗಳು ಬಂದಿದ್ದರು’ ಎಂದು ಹುಸೇನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಷ್ಯಾಗೆ ಹೋಗುವುದಕ್ಕಾಗಿ ಶಾಸಕ ಸತೀಶ ಜಾರಕಿಹೊಳಿ ಅವರು ₹50 ಸಾವಿರ ನೀಡಿದರೆ, ಸುಲ್ತಾನ್‌ಪುರ ಪಂಚಾಯಿತಿಯಿಂದ ₹20 ಸಾವಿರ ಆರ್ಥಿಕ ನೆರವು ಸಿಕ್ಕಿತ್ತು. ಬ್ಯಾಂಕ್‌ನಲ್ಲಿ ₹ 70 ಸಾವಿರ ಸಾಲ ಮಾಡಿದೆ’ ಎಂದರು.

‘ಈ ಹಿಂದೆ ನವದೆಹಲಿಯಲ್ಲಿ ನಡೆದ ಎಸ್‌ಜಿಪಿಐ  ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದೆ. ಹೈದರಾಬಾದ್‌ನಲ್ಲಿ ನಡೆದ ಕೂಟದಲ್ಲಿ 3ನೇ ಬಹುಮಾನ ಪಡೆದಿದ್ದೆ’ ಎಂದೂ ಮಾಹಿತಿ ನೀಡಿದರು.

ಅಭಿನಂದನೆ: ಹುಸೇನ್‌ ಅವರನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಮ್‌ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಬಗಾದಿ ಗೌತಮ್‌ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT