ADVERTISEMENT

ರಾಂಚಿ ತಂಡ ಖರೀದಿಸಿದ ದೋನಿ

ಹಾಕಿ ಇಂಡಿಯಾ ಲೀಗ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ರಾಂಚಿ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಹಾಕಿ ಇಂಡಿಯಾ ಲೀಗ್‌ನಲ್ಲಿ ರಾಂಚಿ ಫ್ರಾಂಚೈಸ್‌ಅನ್ನು ಖರೀದಿಸಿದ್ದಾರೆ.

ಈಗಾಗಲೇ ಮೋಟಾರ್‌ ಸ್ಪೋರ್ಟ್ಸ್‌ ಮತ್ತು ಫುಟ್‌ಬಾಲ್‌ ಕ್ರೀಡೆಯಲ್ಲಿ ಹಣ ಹೂಡಿರುವ ದೋನಿ ಇದೀಗ ರಾಷ್ಟ್ರೀಯ ಕ್ರೀಡೆಯ ಜತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ದೋನಿ ಮತ್ತು ಸಹಾರಾ ಇಂಡಿಯಾ ಸಮೂಹ ಜಂಟಿಯಾಗಿ ರಾಂಚಿ ಫ್ರಾಂಚೈಸ್‌ ಖರೀದಿಸಿದೆ. ಹೊಸ ತಂಡಕ್ಕೆ ‘ರಾಂಚಿ ರೇಸ್‌’ ಎಂಬ ಹೆಸರಿಡಲಾಗಿದೆ. ಶನಿವಾರ ನಡೆದ ಸಮಾರಂಭದಲ್ಲಿ ತಂಡದ ಪೋಷಾಕು ಮತ್ತು ಲಾಂಛನವನ್ನೂ ಅನಾವರಣ ಗೊಳಿಸಲಾಯಿತು.
ಸಹಾರಾ ಸಮೂಹ ಎಚ್‌ಐ ಎಲ್‌ನಲ್ಲಿ ಆಡುತ್ತಿರುವ  ಉತ್ತರ ಪ್ರದೇಶ ವಿಜಾರ್ಡ್ಸ್‌ ತಂಡದ ಒಡೆತನವನ್ನು ಹೊಂದಿದೆ. ಇದೀಗ ದೋನಿ ಜತೆ ಸೇರಿಕೊಂಡು ಇನ್ನೊಂದು ತಂಡವನ್ನು ಖರೀದಿಸಿದೆ.

ಎಚ್‌ಐಎಲ್‌ನಲ್ಲಿ ಮೊದಲ ಎರಡು ಋತುವಿನಲ್ಲಿ ಆಡಿದ್ದ ರಾಂಚಿ ರಿನೋಸ್‌ ತಂಡ ಈಗ ಅಸ್ತಿತ್ವದಲ್ಲಿಲ್ಲ. ರಿನೋಸ್‌ ತಂಡದ ಮಾಲೀಕರು ಮತ್ತು ಲೀಗ್‌ನ ಸಂಘಟಕರ ನಡುವಿನ ಬಿಕ್ಕಟ್ಟಿನಿಂದ ತಂಡವನ್ನು ಲೀಗ್‌ನಿಂದ ತೆಗೆದು ಹಾಕಲಾಗಿತ್ತು. ರಿನೋಸ್‌ ತಂಡ 2013 ರಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು.

ರಾಂಚಿ ರಿನೋಸ್‌ ಸ್ಥಾನವನ್ನು ‘ಮಹಿ’ ಒಡೆತನದ ಹೊಸ ತಂಡ ತುಂಬಲಿದೆ. ದೋನಿ ಈಗಾಗಲೇ ಮೋಟಾರ್‌ ಸ್ಪೋರ್ಟ್ಸ್‌ ಮತ್ತು ಫುಟ್‌ಬಾಲ್‌ ಕ್ರೀಡೆಯಲ್ಲಿ ತಂಡಗಳನ್ನು ಹೊಂದಿದ್ದಾರೆ. ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ‘ಮಹಿ ರೇಸಿಂಗ್‌’ ಹೆಸರಿನ ತಂಡ ಇದೆ. ಅದೇ ರೀತಿ ಈಗ ನಡೆಯುತ್ತಿರುವ ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚೆನ್ನೈಯಿನ್‌ ಎಫ್‌ಸಿ ತಂಡಕ್ಕೆ ದೋನಿ ಸಹ ಮಾಲೀಕರಾಗಿದ್ದಾರೆ.

‘ಈ ದಿನ ನನಗೆ ವಿಶೇಷವಾದುದು. ಏಕೆಂದರೆ ರಾಂಚಿ ತಂಡವನ್ನು ಖರೀದಿಸುವ ಮೂಲಕ ಹಾಕಿ ಕ್ರೀಡೆಯ ಜತೆ ಗುರುತಿಸಿಕೊಳ್ಳಲು ಸಾಧ್ಯವಾಗಿದೆ’ ಎಂದು ದೋನಿ ಹೇಳಿದ್ದಾರೆ. ‘ಕ್ರಿಕೆಟ್‌ಗೆ ನನ್ನ ಮೊದಲ ಆದ್ಯತೆ. ಆದರೆ ಒಬ್ಬ ಕ್ರೀಡಾಪಟುವಾಗಿದ್ದುಕೊಂಡು ಎಲ್ಲ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಬಯಸುತ್ತೇನೆ’ ಎಂದಿದ್ದಾರೆ.

ರಾಂಚಿ ರಿನೋಸ್‌ ತಂಡದಲ್ಲಿದ್ದ ಹೆಚ್ಚಿನ ಆಟಗಾರರಿಗೆ ಹೊಸ ತಂಡದಲ್ಲಿ ಅವಕಾಶ ನೀಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು. ‘ರಾಂಚಿ ರಿನೋಸ್‌ ತಂಡ ಮೊದಲ ಎರಡು ವರ್ಷಗಳ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ರಾಂಚಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರುವ ಯುವ ಪ್ರತಿಭೆಗಳನ್ನು ಗುರುತಿಸುವುದು ನನ್ನ ಮೊದಲ ಗುರಿ’ ಎಂದು ದೋನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.