ADVERTISEMENT

ರಾಜ್ಯದ ರಿಧಿಮಾ ಕೂಟ ದಾಖಲೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಕರ್ನಾಟಕದ ರಿಧಿಮಾ ವೀರೇಂದ್ರ ಕುಮಾರ್‌ ಅವರು ಪುಣೆಯಲ್ಲಿ ಆರಂಭವಾದ 34ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ  ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಬುಧವಾರ ನಡೆದ ಬಾಲಕಿಯರ 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಿಧಿಮಾ ಅವರು 35.51 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಈ ಸಾಧನೆಯನ್ನು ಮಾಡಿದರು.

ಅಸ್ಸಾಂ ರಾಜ್ಯದ ಜಹನಬಿ ಕಶ್ಯಪ್‌ (37.04ಸೆ.) ಬೆಳ್ಳಿ ತಮ್ಮದಾಗಿಸಿ ಕೊಂಡರು. ಈ ವಿಭಾಗದ ಕಂಚು ಕರ್ನಾಟಕದ ಆಶ್ನಾ ಅಶ್ವಿನ್‌ ಮತ್ತೂರ್‌ (37.43 ಸೆ.) ಅವರ ಪಾಲಾಯಿತು.

ADVERTISEMENT

ಬಾಲಕರ 100 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಕಣಕ್ಕಿಳಿದಿದ್ದ ರಾಜ್ಯದ ಉತ್ಕರ್ಷ್‌ ಎಸ್‌. ಪಾಟೀಲ್‌ (1:07.30ಸೆ.) ನಾಲ್ಕನೇ ಸ್ಥಾನ ಗಳಿಸಿದರು. ವಿ. ಶ್ರೇಯಸ್‌ (1:08.29ಸೆ.) ಆರನೇಯವರಾಗಿ ಗುರಿ ಮುಟ್ಟಿದರು. ಗೋವಾದ ಸೋಹನ್‌ ಗಂಗೂಲಿ ಅವರು ಈ ವಿಭಾಗದಲ್ಲಿ ಕೂಟ ದಾಖಲೆಯೊಂದಿಗೆ (1:02.75ಸೆ.) ಚಿನ್ನ ಜಯಿಸಿದರು.

ಬಾಲಕಿಯರ 100 ಮೀಟರ್ಸ್‌ ಬಟರ್‌ಫ್ಲೈನಲ್ಲಿ ಎ. ಜೆದಿದಾ (1:13.91ಸೆ.) ಮತ್ತು ಮೇಧಾ ವೆಂಕಟೇಶ್‌ (1:15.84ಸೆ.) ಅವರು ಕ್ರಮವಾಗಿ ನಾಲ್ಕು ಮತ್ತು ಏಳನೇ ಸ್ಥಾನ ಗಳಿಸಿದರು.

ಬಾಲಕಿಯರ 50 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ರಾಜ್ಯದ ಸವಾಲು ಎತ್ತಿ ಹಿಡಿದಿದ್ದ ರಿಧಿಮಾ ವೀರೇಂದ್ರ ಕುಮಾರ್‌ (30.91ಸೆ.) ಬೆಳ್ಳಿಯ ಸಾಧನೆ ಮಾಡಿದರು. ಬಾಲಕಿಯರ 50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಸಮರ ಎ ಚಾಕೊ (36.98 ಸೆ.) ಬೆಳ್ಳಿ ಗೆದ್ದರು.

ಬಾಲಕಿಯರ 4X50 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಆಶ್ನಾ ಅಶ್ವಿನ್‌ ಮತ್ತೂರ್‌, ಅವನಿ ವಿಶ್ವಾಸ್‌, ರಿಷಿಕಾ ಯು. ಮಂಗಳೆ  ಮತ್ತು ರಿಧಿಮಾ ವೀರೇಂದ್ರ ಕುಮಾರ್‌ ಅವರಿದ್ದ ರಾಜ್ಯ ತಂಡ (2:12.76ಸೆ.) ಚಿನ್ನಕ್ಕೆ ಮುತ್ತಿಕ್ಕಿತು.

ಬಾಲಕರ 200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಎಂ. ಧ್ಯಾನ್‌  (2:20.57 ಸೆ.) ಮತ್ತು ಆರ್‌.ಅಕ್ಷಯ್ ಸೇಠ್‌ (2:22.05 ಸೆ.) ಅವರು ಕ್ರಮವಾಗಿ ನಾಲ್ಕು ಮತ್ತು ಆರನೇಯವರಾಗಿ ಸ್ಪರ್ಧೆಯನ್ನು ಮುಗಿಸಿದರು.

ಬಾಲಕರ 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಡಿ. ರಿತಿಶ್‌ ವಿಕ್ರಂ (36.90ಸೆ.) ಮತ್ತು ಕ್ರಿಷ್‌ ಸುಕುಮಾರ್‌ (38.56ಸೆ.) ಅವರು ಕ್ರಮವಾಗಿ ನಾಲ್ಕು  ಮತ್ತು ಆರನೇ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.