ADVERTISEMENT

ಲಂಕಾ ತಂಡದ ಕೋಚ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:45 IST
Last Updated 3 ಸೆಪ್ಟೆಂಬರ್ 2015, 19:45 IST

ಕೊಲಂಬೊ (ಪಿಟಿಐ): ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮರ್ವನ್ ಅತಪತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡವು 1–2ರಿಂದ ಸೋಲನುಭವಿಸಿತ್ತು. ಜುಲೈ ನಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಸರಣಿಯಲ್ಲಿಯೂ ಲಂಕಾ ತಂಡವು ಸೋಲನುಭವಿಸಿತ್ತು. ಇದರಿಂದಾಗಿ ಮರ್ವನ್ ರಾಜೀನಾಮೆ ನೀಡಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.

ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯ ಹಂಗಾಮಿ ಮುಖ್ಯಸ್ಥ ಸಿದಾತ್ ವೆಟ್ಟಿಮುನಿ ಅವರಿಗೆ ಮರ್ವನ್ ರಾಜೀನಾಮೆ ಪತ್ರ ನೀಡಿದ್ದಾರೆ. ಶ್ರೀಲಂಕಾ ತಂಡದ ಮಾಜಿ ನಾಯಕರೂ ಆಗಿರುವ ಮರ್ವನ್ 2014ರಲ್ಲಿ ತಂಡದ ಕೋಚ್ ಆಗಿ ನೇಮಕವಾಗಿದ್ದರು. 

2011ರಲ್ಲಿ ಅವರು  ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಮೂರು ವರ್ಷಗಳ ನಂತರ ಇಂಗ್ಲೆಂಡ್ ಮೂಲದ ಕೋಚ್ ಪಾಲ್ ಫಾರ್‌ಬ್ರೇಸ್ ನಿವೃತ್ತರಾದ ನಂತರ ಮರ್ವನ್ ಆ ಸ್ಥಾನವನ್ನು ತುಂಬಿದ್ದರು.  44 ವರ್ಷದ ಮರ್ವನ್ ಅವರ ಮಾರ್ಗದರ್ಶನದಲ್ಲಿ ತಂಡವು ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಹಂತ ಪ್ರವೇಶಿಸಿತ್ತು. ಅವರ ರಾಜೀನಾಮೆಯಿಂದ ತೆರವಾಗಿರುವ ಜಾಗಕ್ಕೆ ಈಗ ಲಂಕಾದ ಮಾಜಿ ಆಟಗಾರ ಚಂಡಿಕಾ ಹತುರುಸಿಂಘೆ ಅವರನ್ನ ನೇಮಕ ಮಾಡುವ ಕುರಿತು ಚಿಂತನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.