ADVERTISEMENT

ವಿರಾಟ್ ಕೊಹ್ಲಿ, ಶಿಖರ್ ಧವನ್‌ ದಿಟ್ಟ ಆಟ

ಕ್ರಿಕೆಟ್‌: ಭಾರತ ಮತ್ತು ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವನ್‌ ನಡುವಣ ಪಂದ್ಯ ಡ್ರಾ

ಪಿಟಿಐ
Published 22 ಜುಲೈ 2017, 20:08 IST
Last Updated 22 ಜುಲೈ 2017, 20:08 IST
ಶಿಖರ್‌ ಧವನ್‌
ಶಿಖರ್‌ ಧವನ್‌   

ಕೊಲಂಬೊ: ನಾಯಕ ವಿರಾಟ್‌ ಕೊಹ್ಲಿ (53; 76ಎ, 7ಬೌಂ) ಮತ್ತು ಶಿಖರ್‌ ಧವನ್‌ (41; 48ಎ, 7ಬೌಂ) ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ಪರಿಣಾಮ ಕಾರಿ ಆಟದ ನೆರವಿನಿಂದ ಭಾರತ ತಂಡ ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.

ಕೊಲಂಬೊ ಕ್ರಿಕೆಟ್‌ ಕ್ಲಬ್‌ ಮೈದಾನದಲ್ಲಿ 3 ವಿಕೆಟ್‌ಗೆ 135ರನ್‌ ಗಳಿಂದ ಅಂತಿಮ ದಿನವಾದ ಶನಿವಾರ ಆಟ ಮುಂದುವರಿಸಿದ ವಿರಾಟ್‌ ಪಡೆ 68 ಓವರ್‌ಗಳಲ್ಲಿ 9 ವಿಕೆಟ್‌ಗೆ 312 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಶ್ರೀಲಂಕಾ ಮಂಡಳಿ ಇಲೆವನ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 55.5 ಓವರ್‌ ಗಳಲ್ಲಿ 187 ರನ್‌ಗಳಿಗೆ ಆಲೌಟ್‌ ಆಗಿತ್ತು.

ಶುಕ್ರವಾರದ ಅಂತ್ಯಕ್ಕೆ 34 ರನ್‌ ಗಳಿಸಿದ್ದ ಕೊಹ್ಲಿ ಮತ್ತು 30 ರನ್‌ ಬಾರಿಸಿದ್ದ ರಹಾನೆ ಅವರು ಶನಿವಾರದ ಮೊದಲ ಅವಧಿಯಲ್ಲಿ ಎಚ್ಚರಿಕೆಯ ಇನಿಂಗ್ಸ್‌ ಕಟ್ಟಿದರು.

ADVERTISEMENT

ಲಾಹಿರು ಸಂಪತ್‌ ಗಾಮೆಜ್‌ ಹಾಕಿದ 33ನೇ ಓವರ್‌ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಬೌಂಡರಿ ಸಿಡಿಸಿದ ವಿರಾಟ್‌, 37ನೇ  ಓವರ್‌ನ ಕೊನೆಯ ಎಸೆತದಲ್ಲೂ ಬೌಂಡರಿ ಗಳಿಸಿ ಅರ್ಧಶತಕ ಪೂರೈಸಿದರು. ರಹಾನೆ 58 ಎಸೆತಗಳಲ್ಲಿ 40 ರನ್‌ ಬಾರಿಸಿ ಮಿಂಚಿದರು. ಕಸುನ್‌ ರಜಿತಾ ಹಾಕಿದ 38ನೇ ಓವರ್‌ ಮುಗಿದ ನಂತರ ಇಬ್ಬರೂ ಸ್ವಯಂ ನಿವೃತ್ತಿ ಪಡೆದರು.

ಆ ನಂತರ ಶಿಖರ್‌ ಧವನ್‌ ಆಟ ರಂಗೇರಿತು. ಮುರಳಿ ವಿಜಯ್‌ ಗಾಯಗೊಂಡಿದ್ದರಿಂದ ತಂಡದಲ್ಲಿ ಸ್ಥಾನ ಗಳಿಸಿರುವ ದೆಹಲಿಯ ಧವನ್‌, ಸಿಂಹಳೀಯ ನಾಡಿನ ಬೌಲರ್‌ಗಳನ್ನು ಕಾಡಿದರು.

ಬಂಡಾರ ಸಂಜಯ ಹಾಕಿದ 41 ಮತ್ತು 43ನೇ ಓವರ್‌ಗಳಲ್ಲಿ ತಲಾ ಒಂದು ಬೌಂಡರಿ ಕಲೆಹಾಕಿದ ಅವರು ರಜಿತಾ ಬೌಲ್‌ ಮಾಡಿದ 46ನೇ ಓವರ್‌ನಲ್ಲಿ ಸತತ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.

ಧವನ್‌ಗೆ ರೋಹಿತ್‌ ಶರ್ಮಾ (38; 49ಎ, 1ಬೌಂ, 2ಸಿ)  ಸೂಕ್ತ ಬೆಂಬಲ ನೀಡಿದರು. ಆರಂಭದಲ್ಲಿ  ತಾಳ್ಮೆಯ ಇನಿಂಗ್ಸ್‌ ಕಟ್ಟಿದ ರೋಹಿತ್‌, ಆಟಕ್ಕೆ ಕುದುರಿಕೊಂಡ ನಂತರ ರಟ್ಟೆ ಅರಳಿಸಿ ಆಡಲು ಶುರು ಮಾಡಿದರು.

ತರಿಂದು ಕೌಶಲ್‌  ಹಾಕಿದ 52ನೇ ಓವರ್‌ನ ಎರಡು ಮತ್ತು ಮೂರನೇ ಎಸೆತಗಳನ್ನು ಮನಮೋಹಕ ರೀತಿಯಲ್ಲಿ   ಸಿಕ್ಸರ್‌ಗಟ್ಟಿದ ಅವರು 49 ಎಸೆತಗಳಲ್ಲಿ 38 ರನ್‌ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು. ಧವನ್‌ ಕೂಡ ಸ್ವಯಂ ನಿವೃತ್ತಿ ಪಡೆದರು. ಆಗ ತಂಡದ ಖಾತೆಯಲ್ಲಿ  246 ರನ್‌ಗಳಿದ್ದವು.

ವೃದ್ಧಿಮಾನ್‌ ಸಹಾ (ಔಟಾಗದೆ 36; 40ಎ, 2ಸಿ) ಕೂಡ ಅಬ್ಬರಿಸಿದರು. ಹೀಗಾಗಿ ತಂಡದ ಮೊತ್ತ 300ರ ಗಡಿ ದಾಟಿತು. ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವನ್‌: ಪ್ರಥಮ ಇನಿಂಗ್ಸ್‌: 55.5 ಓವರ್‌ಗಳಲ್ಲಿ 187.

ಭಾರತ:ಮೊದಲ ಇನಿಂಗ್ಸ್‌: 68 ಓವರ್‌ಗಳಲ್ಲಿ 9 ವಿಕೆಟ್‌ಗೆ 312 ಡಿಕ್ಲೇರ್ಡ್‌ (ವಿರಾಟ್‌ ಕೊಹ್ಲಿ 53, ಅಜಿಂಕ್ಯ ರಹಾನೆ 40, ರೋಹಿತ್‌ ಶರ್ಮಾ 38, ಶಿಖರ್ ಧವನ್‌ 41, ವೃದ್ಧಿಮಾನ್‌ ಸಹಾ ಔಟಾಗದೆ 36, ಹಾರ್ದಿಕ್‌ ಪಾಂಡ್ಯ 11; ವಿಶ್ವ ತಿಲಿನಾ ಫರ್ನಾಂಡೊ 37ಕ್ಕೆ2, ಜಯಸುಂದರ ವಿಕುಮ್‌ ಬಂಡಾರ ಸಂಜಯ 64ಕ್ಕೆ1, ತರಿಂದು ಕೌಶಲ್‌ 81ಕ್ಕೆ 2).
ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.